ಬೆಂಗಳೂರು, (ಅಕ್ಟೋಬರ್ 24): ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ರಂಗೇರಿದೆ. ಅದರಲ್ಲೂ ತೀವ್ರ ಕುತೂಹಲ ಮೂಡಿಸಿದ್ದ ಎನ್ಡಿಎ ಅಭ್ಯರ್ಥಿ ಕೊನೆಗೂ ಘೋಷಣೆಯಾಗಿದೆ. ನಾಮಪತ್ರ ಸಲ್ಲಿಕೆಗೆ ನಾಳೆ ಒಂದು ದಿನ ಬಾಕಿ ಇರುವಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಸರು ಪ್ರಕಟವಾಗಿದ್ದು, ಅಳೆದು ತೂಗಿ ಕೊನೆ ಕ್ಷಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಣೆಹಾಕಲಾಗಿದೆ. ಬಿಎಸ್ ಯಡಿಯೂರಪ್ಪ ನಿವಾಸದಲ್ಲಿಂದು ನಡೆದ ಜೆಡಿಎಸ್-ಬಿಜೆಪಿ ನಾಯಕರ ಸಮನ್ವಯ ಸಭೆ ಬಳಿಕ ನಿಖಿಲ್ ಹೆಸರು ಘೋಷಣೆ ಮಾಡಲಾಯಿತು. ಸ್ವತಃ ಯಡಿಯೂರಪ್ಪ ಅವರೇ ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸುತ್ತಾರೆ ಎಂದು ಘೋಷಿಸಿದರು.
ಕಳೆದ ಹಲವು ದಿನಗಳಿಂದ ಗೊಂದಲವಾಗಿ ಮಾರ್ಪಟ್ಟಿದ್ದ ಅಭ್ಯರ್ಥಿ ಆಯ್ಕೆ ಸಂಬಂಧ, ಇಂದು(ಅಕ್ಟೋಬರ್ 24) ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ನಿಖಿಲ್ ಸ್ಪರ್ಧೆಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಬಳಿಕ ಯಡಿಯೂರಪ್ಪ ನಿವಾಸದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಸಮನ್ವಯ ಸಭೆ ನಡೆಸಿ ನಂತರ ನಿಖಿಲ್ ಕುಮಾರಸ್ವಾಮಿ ಎನ್ಡಿಎ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು. ಇದೀಗ ಚನ್ನಪಟ್ಟಣ ಎನ್ಡಿಎ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ತೆರೆ ಬಿದ್ದಿದೆ.
ಇನ್ನು ಜೆಡಿಎಸ್ ಮತ್ತು ಬಿಜೆಪಿ ನಾಯಕರ ಸಮನ್ವಯ ಸಭೆಗೂ ಮೊದಲೇ ಇತ್ತ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಅವರು ನಿಖಿಲ್ ಕುಮಾರಸ್ವಾಮಿಯೇ ಚನ್ನಪಟ್ಟಣದ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಜೆಡಿಎಸ್ ಸಭೆ ಬಳಿಕ ಮಾತನಾಡಿದ ದೇವೇಗೌಡ, ನಿಖಿಲ್ ಅಭ್ಯರ್ಥಿಯಾಗಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮೊನ್ನೆ ನಡೆದ ಸಭೆಯಲ್ಲೇ ಸರ್ವಾನುಮತ ನಿರ್ಧಾರ ಕೈಗೊಳ್ಳಲಾಗಿತ್ತು. ಆದ್ರೆ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಬೇಕೆಂದು ನಿಖಿಲ್ ಹೇಳಿದ್ದರು. ಇಂದು ಮತ್ತೆ ಕಾರ್ಯಕರ್ತರು ಬಂದು ನಿಖಿಲ್ ಸ್ಪರ್ಧೆಗೆ ಆಗ್ರಹಿಸಿದರು. ಹೀಗಾಗಿ ನಿಖಿಲ್ ಕಣಕ್ಕಿಳಿಸಲು ತೀರ್ಮಾನಿಸಲಾಗಿದ್ದು, ಚನ್ನಪಟ್ಟಣ ಅಭ್ಯರ್ಥಿಯಾಗಿ ನಾಳೆ ನಿಖಿಲ್ ನಾಮಪತ್ರ ಸಲ್ಲಿಸುತ್ತಾರೆ. ಇದರಲ್ಲಿ ನಾನು ಸಹ ಭಾಗಿಯಾಗುತ್ತೇನೆ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಸೋಲುಕಂಡಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಉಪಚುನಾವಣೆ ಕಣಕ್ಕಿಳಿಸಲಾಗಿದೆ. ಈ ಚುನಾವಣೆಯಲ್ಲಿ ನಿಖಿಲ್ ಭವಿಷ್ಯ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:08 pm, Thu, 24 October 24