Bantwal: ಬಂಟ್ವಾಳ ಬಳಿ ಕಾರ್ಯಕರ್ತರ ಮೇಲೆ ಹಲ್ಲೆ; ಕರಾಳ ದಿನಗಳು ಕರ್ನಾಟಕಕ್ಕೆ ಮರುಕಳಿಸಿದೆ ಎಂದ ಬಿಜೆಪಿ, ಕ್ರಮಕ್ಕೆ ಆಗ್ರಹ
ರಾಜ್ಯದಲ್ಲಿ 2013-18 ರ ಅವಧಿಯ ಕರಾಳ ದಿನಗಳು ಮರುಕಳಿಸಿರುವಂತೆ ತೋರುತ್ತಿದೆ ಎಂದು ಬಿಜೆಪಿ (BJP) ಟೀಕಿಸಿದೆ. ಭಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಮಾಣಿ ಎಂಬಲ್ಲಿ ಬುಧವಾರ ನಡೆದಿದ್ದು, ಇದನ್ನು ಪಕ್ಷ ಖಂಡಿಸಿದೆ.
ಬೆಂಗಳೂರು: ರಾಜ್ಯದಲ್ಲಿ 2013-18 ರ ಅವಧಿಯ ಕರಾಳ ದಿನಗಳು ಮರುಕಳಿಸಿರುವಂತೆ ತೋರುತ್ತಿದೆ ಎಂದು ಬಿಜೆಪಿ (BJP) ಟೀಕಿಸಿದೆ. ಭಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಮಾಣಿ ಎಂಬಲ್ಲಿ ಬುಧವಾರ ನಡೆದಿದ್ದು, ಇದನ್ನು ಪಕ್ಷ ಖಂಡಿಸಿದೆ. ಚುನಾವಣಾ ಫಲಿತಾಂಶದ ದಿನದ ಸಂಭ್ರಮಾಚರಣೆ ವೇಳೆ ನಡೆದಿದ್ದ ಗಲಾಟೆಗೆ ಪ್ರತೀಕಾರವಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ ಈ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿತ್ತು. ಇದನ್ನು ಖಂಡಿಸಿರುವ ಬಿಜೆಪಿ, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದೆ.
‘2013-18 ರ ಕರಾಳ ದಿನಗಳು ಕರ್ನಾಟಕಕ್ಕೆ ಮರುಕಳಿಸಿರುವಂತೆ ತೋರುತ್ತಿದೆ. ಚುನಾವಣೆಯ ಫಲಿತಾಂಶ ಹೊರ ಬರುತ್ತಿದ್ದಂತೆ ಕಾಂಗ್ರೆಸ್ಸಿನ ಗೂಂಡಾಗಳು ತಮ್ಮ ಗೂಂಡಾಗಿರಿಯನ್ನು ಪ್ರಾರಂಭಿಸಿದ್ದಾರೆ. ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ರಾಜಕೀಯ ಪ್ರೇರಿತ ಹಲ್ಲೆಗಳು ಹಾಗೂ ಎರಡು ಹತ್ಯೆಗಳು ನಡೆದಿವೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಮ್ಮ ಕಾರ್ಯಕರ್ತರಾದ ಮಹೇಂದ್ರ ಮತ್ತು ಪ್ರಶಾಂತ್‌ರವರ ಮೇಲೆ ಕಾಂಗ್ರೆಸ್‌ನ ಗೂಂಡಾಗಳು ಹಲ್ಲೆ ಮಾಡಿರುವಂತಹದ್ದು ಅತ್ಯಂತ ಖಂಡನೀಯ. ಪೊಲೀಸ್ ಅಧಿಕಾರಿಗಳು ಈ ಕೂಡಲೇ ಅವರನ್ನು ಬಂಧಿಸಿ ಸೂಕ್ತ ಕ್ರಮಗಳನ್ನು ಕೈಗೂಳ್ಳಬೇಕೆಂದು ಆಗ್ರಹಿಸುತ್ತೇವೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: Mangaluru News: ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ಬಜರಂಗದಳ, ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರಿನಿಂದ ಹಲ್ಲೆ
ಮಾಣಿ ಜಂಕ್ಷನ್ ಬಳಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಬಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಓಮ್ನಿ ಕಾರಿನಲ್ಲಿ ಬಂದ ತಂಡವೊಂದು ಸ್ಕೂಟರ್ಗೆ ಡಿಕ್ಕಿ ಹೊಡೆಸಿ ನಂತರ ತಲವಾರಿನಿಂದ ಹಲ್ಲೆ ನಡೆಸಿತ್ತು. ಮಹೇಂದ್ರ ಹಾಗೂ ಪ್ರಶಾಂತ್ ನಾಯ್ಕ್ ಅವರ ಕಾಲು ಮತ್ತು ತಲೆಯ ಭಾಗಕ್ಕೆ ಗಾಯವಾಗಿತ್ತು. ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ