MUDA Scam, Bengaluru to Mysuru BJP JDS Padayatra Highlights: ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ನೀವೇಶನ ಹಂಚಿಕೆ ಹಗರಣ ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಅವರ ಕುಟುಂಬ ಭಾಗಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೂಡಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ವಿಪಕ್ಷಗಳು ಆಗ್ರಹಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಿನಾಮೆ ಆಗ್ರಹಿಸಿ ವಿಪಕ್ಷಗಳಾದ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಆರಂಭಿಸಿವೆ.
ಶನಿವಾರ ಆಗಸ್ಟ 3 ಬೆಳಿಗ್ಗೆ 8.00 ಗಂಟೆಗೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿ ಇರುವ ಜೆ.ಕೆ. ಗ್ರ್ಯಾಂಡ್ ಅರೆನಾ ಸೆಂಟರ್ನಲ್ಲಿ ಪಾದಯಾತ್ರೆ ಉದ್ಘಟನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ಡಾ. ರಾಧಾ ಮೋಹನ್‌ದಾಸ್ ಅಗರ್‌ವಾಲ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆಯ ಜೆಡಿಎಸ್ ನಾಯಕ ಸಿ.ಬಿ. ಸುರೇಶ್ ಬಾಬು, ಮಾಜಿ ಸಚಿವ ಜಿ.ಟಿ. ದೇವೇಗೌಡ, ಕೇಂದ್ರ ಸಚಿವರು, ಕೋರ್ ಕಮಿಟಿ ಸದಸ್ಯರು, ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಮೈಸೂರು ಚಲೋ ಪಾಯಾತ್ರೆಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್ ಪಕ್ಷ. ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ ಕೊಡಲು ಕಾಂಗ್ರೆಸ್ ಹವಣಿಸುತ್ತಿದೆ. ಆಗ ಎಲ್ಲಿದೆ ದಾಖಲೆ ಎಂದು ಕಾಂಗ್ರೆಸ್ ನಾಯಕರು ಕೇಳಿದ್ದರು. ಸದನದಲ್ಲಿ ವಾಲ್ಮೀಕಿ ನಿಗಮದ ಬಗ್ಗೆ ನಿಲುವಳಿ ಮಂಡನೆ ಮಾಡಿದ್ದೇವು. ನಿಲುವಳಿ ಮಂಡನೆ ಮಾಡಿದಾಗ ಕಾಂಗ್ರೆಸ್ಸಿಗರಿಗೆ ಆತಂಕ ಶುರುವಾಯ್ತು. ಮುಡಾ ವಿಚಾರ ಪ್ರಸ್ತಾಪ ಮಾಡಲ್ವಾ ಅಂತಾ ಕಾಂಗ್ರೆಸ್ಸಿಗರು ಕೇಳುತ್ತಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಹಾಕುವೆ ಗೊಡ್ಡು ಬೆದರಿಕೆಯಿಂದ ನಮ್ಮ ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.
ಕೆಟ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ ಮಾಡಲಾಗುತ್ತಿದೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಶ್ರಮದಿಂದ ಲೋಕಸಭೆ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗೆದ್ದಿದ್ದೇವೆ. ಪಾದಯಾತ್ರೆಯಲ್ಲಿ ಬಿಜೆಪಿ, ಕಾರ್ಯಕರ್ತರು ಮಾತ್ರ ಭಾಗಿಯಾಗುತ್ತಿಲ್ಲ, ಕೆಟ್ಟ ಸರ್ಕಾರ ಕಿತ್ತೊಗೆಯಲು ಜನರು ಸಹಕಾರ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ರಾಜ್ಯದ ಅಭಿವೃದ್ಧಿ ಕೆಲಸ ಮಾಡಿ ಎಂದು ಜನರು ಗೆಲ್ಲಿಸಿದ್ದಾರೆ. ಮುಡಾ ಹಗರಣ ಬಗ್ಗೆ ಚರ್ಚಿಸಲು ಸದನದಲ್ಲಿ ಅವಕಾಶ ಕೊಡಲಿಲ್ಲ. ಅದಕ್ಕಾಗಿ ಹಗರಣ ಬಗ್ಗೆ ಜನರಿಗೆ ತಿಳಿಸಲು ಪಾದಯಾತ್ರೆ ಮಾಡುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ದಲಿತರ ಜಮೀನನ್ನು ಲೂಟಿ ಮಾಡಿದ್ದಾರೆ. ಕಾಂಗ್ರೆಸ್ ಒಡೆದ ಮನೆ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾಡುತ್ತಿರುವ ಪಾದಯಾತ್ರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಈ ಹೋರಾಟ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.
ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಡಿಎನ್ಎಯಲ್ಲೇ ಇದೆ. ಕಾಂಗ್ರೆಸ್ ಸರ್ಕಾರದಲ್ಲಿ ಹಗರಣ ಮೇಲೆ ಹಗರಣಗಳು ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಮಂತ್ರಿಗಳು ಪೂರ್ತಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ವಾಲ್ಮೀಕಿ ನಿಗಮದ ಕೋಟ್ಯಾಂತರ ಹಣ ಕಾಂಗ್ರೆಸ್ನ ಚೇಲಾಗಳಿಗೆ ವರ್ಗಾವಣೆಯಾಗಿದೆ. ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಬೆದರಿಕೆ ಹಾಕುತ್ತಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಲ್ಲಿ ಹೈಕಮಾಂಡ್ ಪಾಲುದಾರರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೀವು ರಾಜಿನಾಮೆ ಕೊಡುವುದು ಸನಿಹ ಬಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುಡುಗಿದರು.
ಭ್ರಷ್ಟಚಾರ ತೊಲಗಿಸಲು ಪಾದಯಾತ್ರೆ ಮಾಡುತ್ತಿದ್ದೇವೆ. ಹಗರಣದಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ನನ್ನ ಎದರಿಸಲು ಯಾರಿಗೂ ಸಾಧ್ಯವಿಲ್ಲ. ಜೆಡಿಎಸ್ ಭದ್ರ ಕೋಟೆಯ ಕಾರ್ಯಕರ್ತರನ್ನು ಕೊಂಡು ಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮರಾಸ್ವಾಮಿ ಹೇಳಿದರು.
ನಾವು ದಲಿತರು ಅಂತ ನೀವು ಆಟ ಆಡುತ್ತಿದ್ದೀರಾ? ಲಿಂಗಾಯತರು, ಗೌಡರ ಹಣಕ್ಕೆ ಕೈ ಹಾಕಿ ನೋಡೋಣ. ಬಿಡ್ತಾರಾ ನಿಮ್ಮನ್ನು ಕೈ ಹಾಕಿದರೆ ಬಟ್ಟೆ ಬಿಚ್ಚುತ್ತಾರೆ. ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ ಮೃತಪಟ್ಟಿದ್ದಾನೆ. ಪಿಎಸ್ಐ ನಿಮ್ಮ ಗುಲಾಮ ಏನ್ರೀ ಖರ್ಗೆ, ಪರಮೇಶ್ವರ್ ಅವರೇ? ಎಂದು ಮಾಜಿ ಸಚಿವ ರಾಜೂ ಗೌಡ ವಾಗ್ದಾಳಿ ಮಾಡಿದರು.
ಪಾದಯಾತ್ರೆ ಯಶಸ್ವಿಗಾಗಿ ಚಾಮುಂಡೇಶ್ವರಿತಾಯಿ ಬಳಿ ಪ್ರಾರ್ಥಿಸಿದ್ದೇನೆ. ಪಾದಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್ ಸರ್ಕಾರ ಅಹಿಂದ ಅಂತ ಹೆಸರು ಹೇಳಿಕೊಂಡು ಅಧಿಕಾರ ಹಿಡಿದಿದೆ. ಆದರೆ ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಸರ್ಕಾರ ದ್ರೋಹ ಬಗೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ತುಳಿತಕ್ಕೊಳಗಾದವರಿಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಸೈಟ್ ಹಗರಣ SCP, TSP ಹಣ ದುರ್ಬಳಕೆ ಖಂಡಿಸಿ ಮೈಸೂರು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಮೈಸೂರು ಚಲೋ ಪಾದಯಾತ್ರೆ ಕೆಂಗೇರಿಯ ಕೆಂಪಮ್ಮ ದೇಗುಲದಿಂದ ಆರಂಭವಾಗುತ್ತದೆ. ಆಗಸ್ಟ್ 10ರಂದು ಮುಕ್ತಾಯವಾಗಲಿದೆ. ಪ್ರತಿದಿನ 20 ಕಿಲೋ ಮೀಟರ್ ಪಾದಯಾತ್ರೆ ಸಾಗಲಿದೆ. ಪಾದಯಾತ್ರೆಯಲ್ಲಿ 224 ಕ್ಷೇತ್ರಗಳ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇಂದು 8 ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಒಂದೊಂದು ದಿನ ಒಂದೊಂದು ಮೋರ್ಚಾದವರು ಭಾಗಿಯಾಗುತ್ತಾರೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಒಂದು ತಂಡ ಭಾಗಿಯಾದರೆ, ಮಧ್ಯಾಹ್ನದಿಂದ ಸಂಜೆಯವರೆಗೆ ಮತ್ತೊಂದು ತಂಡ ಭಾಗಿಯಾಗುತ್ತದೆ. ಪಾದಯಾತ್ರೆ ಯಶಸ್ವಿಗೆ ಎರಡು ಪಕ್ಷಗಳಿಂದ ಸಮನ್ವಯ ತಂಡ ರಚಿಸಲಾಗಿದೆ.
ಮೈಸೂರು ಚಲೋ ಪಾದಯಾತ್ರೆಗು ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪಾದಯಾತ್ರೆ ಯಶಸ್ವಿಯಾಗಲೆಂದು ಪಾರ್ಥಿಸಿದರು. ಬಿವೈ ವಿಜಯೇಂದ್ರ ಅವರಿಗೆ ಬಿಜೆಪಿ ಮುಖಂಡರು ಸಾಥ್ ನೀಡಿದರು.
ಬೃಹತ್ ಹೋರಾಟಕ್ಕೆ ಯಶಸ್ವಿ ಸಿಗಬೇಕು. ಚಾಮುಂಡಿಗೆ ಪೂಜೆ ಸಲ್ಲಿಸಿ ಪಾದಯಾತ್ರೆಯಲ್ಲಿ ಭಾಗಿಯಾಗುತ್ತೇನೆ. ಕಾಂಗ್ರೆಸ್ ಹಗರಣಗಳ ವಿರುದ್ಧದ ಹೋರಾಟ ಯಶಸ್ವಿಯಾಗಬೇಕು. ನಮ್ಮ ಕಾರ್ಯಕರ್ತರು ಪಾದಯಾತ್ರೆಗೆ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ನಮ್ಮ ನಿರೀಕ್ಷೆಗೂ ಮೀರಿ ಜನ ಬರುತ್ತಿದ್ದಾರೆ. ಪಾದಯಾತ್ರೆ ಯಶಸ್ವಿಗೆ ಮೈಸೂರು ಭಾಗದ ಜನರ ಬೆಂಬಲವೂ ಬೇಕು. ಈ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ. ಅಹಿಂದ ಹೆಸರಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರ ಹಿಡಿದಿದೆ. ಆದರೆ ಅಹಿಂದ ವರ್ಗಗಳಿಗೆ ಅನ್ಯಾಯ ಮಾಡಿದ್ದಾರೆ. ಮುಖ್ಯಮಂತ್ರಿಗಳು ಓಡಿಹೋಗುವ ಕೆಲಸ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಸಮಾವೇಶ ನಡೆಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಪ್ರತಿಪಕ್ಷಗಳ ಆರೋಪ ಸತ್ಯ ಇದೆ ಅಂತ ಒಪ್ಪಿಕೊಂಡಿದ್ದಾರೆ. ಈ ಬೆದರಿಕೆ, ಕುತಂತ್ರಕ್ಕೆ ನಾವು ಬಗ್ಗುವ ಪ್ರಶ್ನೆಯೇ ಇಲ್ಲ. ಕುತಂತ್ರದಿಂದ ಹೋರಾಟ ಮಣಿಸುವ ದುರುದ್ದೇಶ ನಡೆಯಲ್ಲ. ಡಿಕೆ ಶಿವಕುಮಾರ್ ಅಧಿಕಾರ ಶಾಶ್ವತ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಇದಕ್ಕೆಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ವಾಗ್ದಾಳಿ ಮಾಡಿದರು.
ಮೈಸೂರು ಚಲೋ ಪಾದಯಾತ್ರೆ ಆರಂಭಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಶನಿವಾರ ಬೆಳಗ್ಗೆ 7.45ಕ್ಕೆ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಚಾಮುಂಡೇಶ್ವರಿ ದರ್ಶನ ಮಾಡಿ ಪೂಜೆ ಸಲ್ಲಿಸಿ ಬಳಿಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
Published On - 7:15 am, Sat, 3 August 24