ನಮ್ಮವರು ಸರ್ಕಾರದ ವಿರುದ್ಧ ಮಾತನಾಡದಂತೆ ಕೆಲಸ ಮಾಡಿ: ಯಡಿಯೂರಪ್ಪಗೆ ಅಮಿತ್ ಶಾ ಕಿವಿಮಾತು
ಆಡಳಿತ ಯಂತ್ರ ಚುರುಕುಗೊಳಿಸಿ, ಪಕ್ಷದ ಎಲ್ಲಾ ಶಾಸಕರನ್ನು ಒಟ್ಟಾಗಿ ತೆಗೆದುಕೊಂಡುಹೋಗುವಂತೆ ಅಮಿತ್ ಶಾ, BSYಗೆ ಕಿವಿಮಾತು ಹೇಳಿದ್ದಾರೆ. ಶನಿವಾರ ನಡೆದ ಪಕ್ಷದ ಕೋರ್ ಕಮಿಟಿ ಸಭೆಯ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು: ಪಕ್ಷದ ಒಳಗಿನವರು ಸರ್ಕಾರದ ವಿರುದ್ಧ ಮಾತನಾಡದಂತೆ ನೋಡಿಕೊಳ್ಳುವ ಬಗ್ಗೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಕಿವಿಮಾತು ಹೇಳಿದ್ದಾರೆ. ಆಡಳಿತ ಯಂತ್ರ ಚುರುಕುಗೊಳಿಸಿ, ಪಕ್ಷದ ಎಲ್ಲಾ ಶಾಸಕರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ.
ನಿನ್ನೆ (ಜ.16) ರಾತ್ರಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಪಾಲ್ಗೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಸುಮಾರು ಹತ್ತು ಮಂದಿ ವರಿಷ್ಠರು ಪಾಲ್ಗೊಂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸಭೆಯಲ್ಲಿ 3 ಮುಖ್ಯ ವಿಚಾರಗಳನ್ನು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂಬರುವ ಉಪಚುನಾವಣೆ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು ಹಾಗೂ ಆಡಳಿತವನ್ನು ಬಿಗಿಗೊಳಿಸುವ ಬಗ್ಗೆ ಮಾತನಾಡಲಾಗಿದೆ ಎಂದು ತಿಳಿದುಬಂದಿದೆ.
ಯಡಿಯೂರಪ್ಪ ವಿರುದ್ಧ ಮಾತನಾಡುವವರಿಗೆ ಎಚ್ಚರಿಕೆ ನೀಡಬೇಕು. ಈ ರೀತಿ ಮುಂದಿನ ದಿನಗಳಲ್ಲಿ ನಡೆಯಬಾರದು. ಸರ್ಕಾರವನ್ನು ವಿರೋಧ ಪಕ್ಷದವರು ಟೀಕೆ ಮಾಡುವುದು ಸರಿ. ಆದರೆ, ನಮ್ಮ ಪಕ್ಷದವರೇ ಈ ರೀತಿ ಮಾತನಾಡುವುದು ಸರಿಯಲ್ಲ. ಈ ಬಗ್ಗೆ ನಾವು ಕೂಡ ಕ್ರಮ ಕೈಗೊಳ್ಳುತ್ತೇವೆ ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾರೆ.
ನೀವು ಮುಖ್ಯಮಂತ್ರಿಗಳು ಈ ರೀತಿಯ ಮುಜುಗರ ಘಟಿಸಲು ಆಸ್ಪದ ಕೊಡಬಾರದು. ಆಡಳಿತದ ಕಾರಣಕ್ಕೆ ಇಂಥ ಟೀಕೆ ಟಿಪ್ಪಣಿಗಳು ಕೇಳಿಬರಬಾರದು. ಪಕ್ಷದ ಸದಸ್ಯರು ಸಾರ್ವಜನಿಕವಾಗಿ ಬಿಜೆಪಿ ಹಾಗೂ ಸರ್ಕಾರದ ಬಗ್ಗೆ ಮಾತನಾಡಬಾರದು. ಆಡಳಿತ ಚುರುಕಾಗಬೇಕು. ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಮುನ್ನಡೆಯಬೇಕು ಎಂದು ಯಡಿಯೂರಪ್ಪ ಅವರಿಗೆ ಕಿವಿಮಾತು ಹೇಳಲಾಗಿದೆ ಎಂದು ತಿಳಿದುಬಂದಿದೆ. ತನ್ಮೂಲಕ, ಮುಖ್ಯಮಂತ್ರಿ ಯಡಿಯೂರಪ್ಪಗೆ ತಣ್ಣಗಿನ ಎಚ್ಚರಿಕೆ ನೀಡಿದಂತೆಯೂ ಆಗಿದೆ.
ಸಂಪುಟ ವಿಸ್ತರಣೆ ಕಾರ್ಯವನ್ನು ಬೇಕಾದಂತೆ ನಡೆಸಲಾಗಿದೆ. ಈಗ ಒಳ್ಳೆಯ ಕೆಲಸ ಮಾಡಿ. ಸಾರ್ವಜನಿಕವಾಗಿ ಗುಣನಡತೆ ಚೆನ್ನಾಗಿಟ್ಟುಕೊಳ್ಳಿ ಎಂದು ಅಮಿತ್ ಶಾ ಮಾತನಾಡಿರುವ ಕುರಿತು ಮೂಲಗಳು ಮಾಹಿತಿ ನೀಡಿವೆ.
ಬಸವಕಲ್ಯಾಣ ಹಾಗೂ ಬೆಳಗಾವಿ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿ ಪಟ್ಟಿ ಕಳುಹಿಸಿಕೊಡುವಂತೆ ಸಭೆಯಲ್ಲಿ ತಿಳಿಸಲಾಗಿದೆ. ಬಳಿಕ, ಕೇಂದ್ರ ಚುನಾವಣಾ ಸಮಿತಿಯ ಒಪ್ಪಿಗೆಯ ಆಧಾರದ ಮೇರೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಚಿಂತಿಸಲಾಗಿದೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪಕ್ಷದ ಸಾಧನೆ ಬಗ್ಗೆ ಅಮಿತ್ ಶಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ದೊರಕಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷ ಬೆಂಬಲಿತ ಸದಸ್ಯರು ಗೆದ್ದಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗಿದೆ. ಇದೇ ರೀತಿ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಕೂಡ ಕಾರ್ಯನಿರ್ವಹಿಸಬೇಕು ಎಂದು ಪ್ರೋತ್ಸಾಹದ ನುಡಿಗಳನ್ನು ಹೇಳಲಾಗಿದೆ.
ಕೋರ್ ಕಮಿಟಿ ಸಭೆ ಬಳಿಕ ಬಿ.ಎಲ್. ಸಂತೋಷ್, ಅರುಣ್ ಕುಮಾರ್, ಅರುಣ್ ಸಿಂಗ್, ಸಿ.ಟಿ. ರವಿ, ಪ್ರಲ್ಹಾದ್ ಜೋಷಿ ಜೊತೆಗೆ ಅಮಿತ್ ಶಾ ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ಸಭೆಯ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಇದಕ್ಕೂ ಮೊದಲು, ಅಮಿತ್ ಶಾ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಭೇಟಿಯಾಗಿದ್ದಾರೆ.
ಸಿಎಂ BSY ಸಭೆಯಿಂದ ನಿರ್ಗಮಿಸಿದ ಬಳಿಕವೂ ಅಮಿತ್ ಶಾ ಜೊತೆ ಚರ್ಚೆ: ಕುತೂಹಲ ಕೆರಳಿಸಿದ ನಾಯಕರ ಮೀಟಿಂಗ್
ಕರ್ನಾಟಕ ಸಿಎಂ ಜೊತೆ ಕೇಂದ್ರ ಸರ್ಕಾರ ಯಾವತ್ತೂ ಇದ್ದೇ ಇರುತ್ತದೆ -BSY ಕಾರ್ಯವೈಖರಿಗೆ ಅಮಿತ್ ಶಾ ಪ್ರಶಂಸೆ
Published On - 2:54 pm, Sun, 17 January 21