ಕಾಂಗ್ರೆಸ್​ ಶಾಸಕರಿಗೆ ಬಿಜೆಪಿಯಿಂದ 100 ಕೋಟಿ ರೂ. ಆಫರ್​: ಗಣಿಗ ರವಿಕುಮಾರ್ ಆರೋಪ

| Updated By: ವಿವೇಕ ಬಿರಾದಾರ

Updated on: Aug 25, 2024 | 10:24 AM

ಕರ್ನಾಟಕ ಸರ್ಕಾರವನ್ನು ಕೆಡವಲು ಬಿಜೆಪಿ ಸಂಚು ರೂಪಿಸುತ್ತಿದೆ. ರಾಜ್ಯ ಸರ್ಕಾರವನ್ನು ಬೀಳಿಸಲು ರಾಜ್ಯದ ಮೂವರು ಸಂಸದರು ಪ್ರಧಾನಿ ಮೋದಿ ಅವರಿಗೆ ಮಾತು ಕೊಟ್ಟಿದ್ದಾರೆ. ಹೀಗಾಗಿ ಬಿಜೆಪಿಯ ಬ್ರೋಕರ್​ಗಳು ನಮ್ಮ ಶಾಸಕರಿಗೆ 100 ಕೋಟಿ ರೂ. ಆಫರ್​ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ಶಾಸಕ ಗಣಿಕ ರವಿ ಆರೋಪ ಮಾಡಿದರು.

ಕಾಂಗ್ರೆಸ್​ ಶಾಸಕರಿಗೆ ಬಿಜೆಪಿಯಿಂದ 100 ಕೋಟಿ ರೂ. ಆಫರ್​: ಗಣಿಗ ರವಿಕುಮಾರ್ ಆರೋಪ
ಶಾಸಕ ಗಣಿಗ ರವಿ
Follow us on

ಮಂಡ್ಯ, ಆಗಸ್ಟ್​ 25: ಕರ್ನಾಟಕ ಸರ್ಕಾರವನ್ನು (Karnataka Government) ಬೀಳಿಸಲು ಸಂಚು ನಡೆಯುತ್ತಿದೆ. ಕಾಂಗ್ರೆಸ್ (Congress)​ ಶಾಸಕರನ್ನು ಖರೀದಿಸಲು ಬಿಜೆಪಿಯವರು 100 ಕೋಟಿ ರೂ. ಆಫರ್ ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ (Ganiga Ravi) ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂಡೆಯಂತೆ ಗಟ್ಟಿಯಾಗಿದೆ, ಅಲುಗಾಡಿಸಲು ಆಗಲ್ಲ. ಆದರೆ, ಬಿ.ಎಲ್.ಸಂತೋಷ್, ಶೋಭಾ ಕರಂದ್ಲಾಜೆ, ಹೆಚ್​.ಡಿ.ಕುಮಾರಸ್ವಾಮಿ ಮತ್ತು ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಲಾಗುತ್ತಿದೆ. ಕಾಂಗ್ರೆಸ್​ ಐದು ವರ್ಷ ಅಧಿಕಾರದಲ್ಲಿರುತ್ತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ ಎಂದು ಹೇಳಿದರು.

ಸರ್ಕಾರ ಬೀಳಿಸುವುದಾಗಿ ಪ್ರಧಾನಿ ಮೋದಿ ಅವರಿಗೆ ಐದು ಜನ ಮಾತು ಕೊಟ್ಟಿದ್ದಾರೆ. ಕಾಂಗ್ರೆಸ್​​ ಶಾಸಕರಿಗೆ ಬಿಜೆಪಿಯ ಬ್ರೋಕರ್​ಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ನಿತ್ಯ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ, ನಮ್ಮ ಶಾಸಕರು ಬಲಿಯಾಗಲ್ಲ. ನಾವು ಸಾಕ್ಷಿ ಕಲೆ ಹಾಕುತ್ತಿದ್ದೇವೆ, ಇಡಿ ಅಧಿಕಾರಿಗಳಿಗೆ ಕೊಡುತ್ತೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ. ಕಾಂಗ್ರೆಸ್ ಸರ್ಕಾರ ಬೀಳಿಸಲು ಬಿಜೆಪಿಯ ಯಾರಿಗೂ ತಾಕತ್ತಿಲ್ಲ ಎಂದರು.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾನು ಮಾತನಾಡುವುದಿಲ್ಲ. ಸಿಎಂ ಸ್ಟ್ರಾಂಗ್ ಇದ್ದಾರೆ, ಅವರ ಪರ ನಾವೆಲ್ಲರೂ ಇದ್ದೇವೆ. ರಾಜ್ಯಪಾಲರ ನಡೆ ವಿರುದ್ಧ 136 ಶಾಸಕರು ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳನ್ನು ಸಿಲುಕಿಸಲು ಆಟವಾಡುತ್ತಿದ್ದಾರೆ. ಪಾದಯಾತ್ರೆ ವಿಚಾರದಲ್ಲಿ ಬಿಜೆಪಿಯಲ್ಲೇ ಒಡಕು ಉಂಟಾಗಿದೆ. ಬಿಎಸ್​ವೈ, ವಿಜಯೇಂದ್ರ, ಯತ್ನಾಳ್, ಹೆಚ್​ಡಿಕೆ ನಡುವೆ ಕಿತ್ತಾಟವಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯಗೆ ಹೈಕಮಾಂಡ್ ಬೆಂಬಲ ನೀಡಿದ್ದರೂ ಮುಂದಿದೆ ಬದಲಾವಣೆ? ಕಾಂಗ್ರೆಸ್ ಉನ್ನತ ಮೂಲಗಳಿಂದ ಸುಳಿವು

ಬಿಜೆಪಿ ತಂತ್ರ ವಿಫಲಗೊಳಿಸಲು ಕಾಂಗ್ರೆಸ್ ರಣತಂತ್ರ ಮಾಡುತ್ತೇವೆ. ಪ್ರಾಸಿಕ್ಯೂಷನ್ ಬಗ್ಗೆ ರಾಜ್ಯಪಾಲರಿಗೆ ಕಾಮನ್ ಸೆನ್ಸ್ ಇರಬೇಕಿತ್ತು. ಬೀದಿಲಿ ಹೋಗುವವರೆಲ್ಲ ಅವರ ಮೇಲೆ ಪ್ರಾಸಿಕ್ಯೂಷನ್ ಕೊಡಿ, ಇವರ ಮೇಲೆ ಕೊಡಿ ಅಂತ ಪತ್ರ ಕೊಟ್ಟರೆ ರಾಜ್ಯ ನಡೆಸುವುದು ಹೇಗೆ? 17B ಯಲ್ಲಿ ಸರಿಯಾಗಿ ನಮೂದಾಗಿದೆ ತನಿಖಾ ಅಧಿಕಾರಿ ಕೇಳಿದರೆ ಮಾತ್ರ ಕೊಡಬೇಕು. ರಾಜ್ಯಪಾಲರು ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯಪಾಲರು ಬಿಜೆಪಿಯ ಏಜೆಂಟರು ಎಂದು ಆರೋಪ ಮಾಡಿದರು.

ರಾಜ್ಯಪಾಲರು ದೆಲಿಗೆ ಹೋದಾಗ ಅಮಿತ್ ಷಾ, ಕುಮಾರಸ್ವಾಮಿ, ದೇವೇಗೌಡ ಅವರನ್ನು ಭೇಟಿಯಾದರು. ಮರುದಿನ ಬೆಳಿಗ್ಗೆ ಬಂದು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಇದು ಸಂವಿಧಾನ ಬಾಹಿರವಾಗಿದೆ. ರಾಜ್ಯಪಾಲರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ. ಅವರ ನಡೆ ವಿರುದ್ಧ ನಾವೀದ್ದೇವೆ. 136 ಸೀಟ್ ಗೆದ್ದಿದ್ದೇವೆ ಅದಕ್ಕೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಷಡ್ಯಂತ್ರ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದರು.

ತಮಿಳುನಾಡು, ಪಶ್ಚಿಮ ಬಂಗಾಳ, ಚತ್ತೀಸ್​ ಗಡ, ದೆಹಲಿಯಲ್ಲಿ ಬಿಜೆಪಿಯವರು ಅಸ್ಥಿರ ಸೃಷ್ಟಿಸಿದ್ದಾರೆ. ಬಿಜೆಪಿ ತಂತ್ರ ವಿಫಲಗೊಳಿಸಲು ಕಾಂಗ್ರೆಸ್ ರಣತಂತ್ರ ಎಣೆಯುತ್ತಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ