ಹಿಂದೂ ಯುವತಿಗೆ ಡ್ರಗ್ಸ್ ನೀಡಿ ರೇಪ್ ಕೇಸ್: ಆರೋಪಿ ಪರ ಸಮುದಾಯದ ವಕೀಲರು ವಾದ ಮಾಡದಂತೆ ಮುಸ್ಲಿಂ ಸಂಘಟನೆ ಕರೆ
ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಒಂದರ ಹಿಂದೊಂದು ಬೆಳಕಿಗೆ ಬರುತ್ತಲೇ ಇವೆ. ಆಸ್ಪತ್ರೆಯಲ್ಲಿ, ಶಾಲೆಯಲ್ಲಿ, ರಸ್ತೆಯಲ್ಲಿ, ಈಗ ಇನ್‌ಸ್ಟಾಗ್ರಾಂನಲ್ಲಿ. ಎಲ್ಲಿ ನೋಡಿದ್ರೂ ಸಾಲು ಸಾಲು ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಈಗ ಕರಾವಳಿಯಲ್ಲಿ ಬೆಳಕಿಗೆ ಬಂದ ಪ್ರಕರಣದ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗ್ತಿದೆ.
ಉಡುಪಿ, ಆಗಸ್ಟ್.25: ಉಡುಪಿ ಜಿಲ್ಲೆಯ ಕಾರ್ಕಳದ ಅಲ್ತಾಫ್ ಎಂಬ ಯುವಕ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಯನ್ನು ಭೇಟಿಗೆ ಕರೆದು ಮದ್ಯದ ಜೊತೆಗೆ ಮಾದಕ ವಸ್ತು ಮಿಶ್ರಣ ಮಾಡಿ ಅತ್ಯಾಚಾರ ಎಸಗಿದ್ದಾನೆ. ಈ ಘಟನೆಗೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ (Udupi District Muslim Union) ಆಕ್ರೋಶ ಹೊರ ಹಾಕಿದೆ. ಶನಿವಾರ ಸಂಜೆ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಸದ್ಯ ಚೇತರಿಕೆ ಕಾಣುತ್ತಿದ್ದಾರೆ.
ಮುಸ್ಲಿಂ ಒಕ್ಕೂಟ ಆಕ್ರೋಶ
ಹಿಂದೂ ಸಹೋದರಿ ಅತ್ಯಾಚಾರ ಪ್ರಕರಣ ಖಂಡಿಸುತ್ತೇವೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಆಕ್ರೋಶ ಹೊರ ಹಾಕಿದೆ. ಯುವತಿಯನ್ನ ಕರೆದುಕೊಂಡು ಹೋಗಿ ಮದ್ಯದಲ್ಲಿ ಮಾದಕ ದ್ರವ್ಯ ಮಿಶ್ರಣ ಮಾಡಿ ಆಕೆಗೆ ಕುಡಿಸಿ ರೇಪ್ ಮಾಡಲಾಗಿದೆ. ಅತ್ಯಾಚಾರ ಮಾಡುವಂತ ವಿಕೃತ ಮನಸ್ಸಿನ ಕಾಮುಕ ಅಲ್ತಾಫ್ಗೆ ಕಠಿಣ ಶಿಕ್ಷೆಯಾಗಲಿ. ಕಾರ್ಕಳದಲ್ಲಿ ನಾವು ಸೌಹಾರ್ದತೆಯನ್ನ ಬಯಸುವವರು ಕಾರ್ಕಳಕ್ಕೆ ಸೌಹಾರ್ದತೆಯ ಇತಿಹಾಸವಿದೆ. ಇದುವರೆಗೂ ಕಾರ್ಕಳದಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಬಂದಿದ್ದೇವೆ ಮುಂದೆಯೂ ಕಾಪಾಡಿಕೊಳ್ಳುತ್ತೇವೆ. ಹೊರ ಜಿಲ್ಲೆಯಿಂದ ಬಂದಂತಹ ಅಲ್ತಾಫ್ ನಂತ ವ್ಯಕ್ತಿಗಳು ಬಾಡಿಗೆ ಮನೆಯಲ್ಲಿ ಉಳಿದು ಇಂತಹ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾರೆ.
ಬಂಗ್ಲೆ ಗುಡ್ಡೆ ಪ್ರದೇಶದಲ್ಲಿ ಇಂತಹದೇ ಕೃತ್ಯ ಮಾಡಲು ಹೋಗಿ ಯುವಕರಿಂದ ಪೆಟ್ಟು ತಿಂದಾತ ಅಲ್ತಾಫ್. ಈ ಕೃತ್ಯ ಮಾನವ ಸಮುದಾಯಕ್ಕೆ ಮಾಡಿದಂತಹ ಅತ್ಯಾಚಾರ. ಕೇವಲ ಹಿಂದೂ ಸಮಾಜವಲ್ಲ ಪೂರ್ಣ ಸಮಾಜವೇ ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಪ್ರಕರಣದಲ್ಲಿ ಮಾದಕ ದ್ರವ್ಯದ ಉಪಯೋಗವಾಗಿದೆ ಉಡುಪಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ಸುಲಭದಲ್ಲಿ ಸಿಗುವಂತಿದೆ. ಮಾದಕ ದ್ರವ್ಯ ಜಾಲದ ತಂಡವನ್ನ ಪತ್ತೆ ಹಚ್ಚಿ ಅವರಿಗೂ ಕಠಿಣ ಶಿಕ್ಷೆಯನ್ನು ನೀಡಬೇಕು. ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿಯನ್ನ ಪತ್ತೆ ಹಚ್ಚಿದ ಪೊಲೀಸ್ ಇಲಾಖೆಗೆ ಅಭಿನಂದನೆಗಳು. ನಾವು ನಮ್ಮ ಸಮುದಾಯದಿಂದಲೇ ಅಲ್ತಾಫ್ ನನ್ನು ಹೊರಗಿಡುವ ನಿರ್ಣಯವನ್ನು ಕೈಗೊಂಡಿದ್ದೇವೆ. ಇಂತಹ ವ್ಯಕ್ತಿಗಳು ನಮ್ಮ ಸಮುದಾಯದಲ್ಲಿದ್ದರೆ ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು. ಇನ್ನು ನಮ್ಮ ಸಮುದಾಯದ ಯಾವುದೇ ವಕೀಲರು ಆರೋಪಿಯ ಪರವಾಗಿ ವಾದ ಮಾಡಬಾರದು ಇದು ನಮ್ಮ ಮನವಿ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮುಸ್ಲಿಂ ಜಿಲ್ಲಾ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್ ತಿಳಿಸಿದರು.
ಇದನ್ನೂ ಓದಿ: ಕಾರ್ಕಳ ಅತ್ಯಾಚಾರ ಪ್ರಕರಣ; ಕ್ರಿಮಿನಲ್ಗಳಿಗೆ ಪೊಲೀಸರ ಭಯ ಇಲ್ಲದಂತಾಗಿದೆ: ಸುನೀಲ ಕುಮಾರ, ಶಾಸಕ
ಆರೋಪಿ ಸವೇರ ರಿಚರ್ಡ್ನ ತಾಯಿ ಸಬೀನಾ ಹೇಳಿದ್ದಿಷ್ಟು
ಅತ್ಯಾಚಾರ ನಡೆದ ದಿನ ಮೊನ್ನೆ ಬೆಳಿಗ್ಗೆ ಎಂದಿನಂತೆ ಬೊಲೆರೋ ಜೀಪ್ ನಲ್ಲಿ ಹೋಗಿದ್ದ. ಆತ ಟಿಪ್ಪರ್ ಚಾಲಕ ಹೀಗಾಗಿ ಎಲ್ಲಿ ಹೋಗುತ್ತಾನೆ ಎಂದು ಹೇಳಲ್ಲ. ಅಂದು ಕೂಡ ಹೇಳದೆ ಹೋದ ಮಗ ರಾತ್ರಿ ಬೈಕ್ ನಲ್ಲಿ ಬಂದ. ಕಾರು ಎಲ್ಲಿ ಎಂದಾಗ ತಡವರಿಸಿ ಕೋಣೆಯಲ್ಲಿ ಹೋಗಿ ಬಿಯರ್ ಬಾಟಲಿ ಜೊತೆ ಕುಡಿಯುತ್ತಾ ಮಲಗಿದ್ದ. ಸರಿಯಾಗಿ ಮಾತನಾಡಿಲ್ಲ ಆದ್ರೆ ಮಲಗಿದ ಮೇಲೆ ಕನವರಿಸುತ್ತಿದ್ದ. ಏನು ಕನವರಿಸುತ್ತಿದ್ದಾನೆ ಎಂದು ನನಗೆ ಅರ್ಥವಾಗಲೇ ಇಲ್ಲ. ತಡರಾತ್ರಿ ಪೊಲೀಸರು ಮನೆಗೆ ಬಂದು ಬಾಗಿಲು ಬಡಿದಾಗ ಮಲಗಿದ್ದ ಮಗನಿಗೆ ಎಬ್ಬಿಸಲು ಹೋದೆ. ಮಗ ಪೊಲೀಸರು ಬಂದಿದ್ದಾರೆ ಎಂದು ಹೇಳಿದೆ ಅದಕ್ಕೆ ಆತ ಒಮ್ಮೆಲೆ ಬೆಚ್ಚಿ ಬಿದ್ದ. ನನಗೆ ಶಾಕ್ ಆಯ್ತು ಬಾಗಿಲು ತೆಗೆದ ಕೂಡಲೇ ಪೊಲೀಸರು ಆತನನ್ನ ಎಳೆದುಕೊಂಡು ಹೋದ್ರು. ಯಾಕೆ ಏನು ಗೊತ್ತಾಗಿದ್ದು ಮರುದಿನ ನ್ಯೂಸ್ ನೋಡಿದಾಗಲೇ. ಮೂವರು ಅಕ್ಕ ತಂಗಿಯರು ಇದ್ರೂ ಈ ರೀತಿ ಮಾಡುತ್ತಾನೆ ಎಂದು ಎನಿಸಿರಲಿಲ್ಲ. ಪ್ರತೀ ದಿನ ಅವನ ಪಾಡಿಗೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ. ಈ ರೀತಿ ಅವನ ಪಾಲ್ಗೊಳ್ಳುವಿಕೆ ನೋಡಿ ಶಾಕ್ ಆಯ್ತು ಎಂದು ಆರೋಪಿ ಸವೇರ ರಿಚರ್ಡ್ ತಾಯಿ ಸಬೀನ ಕಣ್ಣೀರು ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ