
ಬೆಂಗಳೂರು, (ಸೆಪ್ಟೆಂಬರ್ 02): ವಿಧಾನಸಭೆ ಸ್ಪೀಕರ್ ಜಿ.ಎಸ್.ಪಾಟೀಲ್ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಭೇಟಿ ಮಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೌದು…ವಿಧಾನಸಭೆ ಸ್ಪೀಕರ್ ಜಿಎಸ್ ಪಾಟೀಲ್ ಹಾಗೂ ವಿಧಾನಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ದೆಹಲಿಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಭೇಟಿ ಮಾಡಿದ್ದಾರೆ. ಇದಕ್ಕೆ ವಿಪಕ್ಷ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಭಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದವರು ಪಕ್ಷದ ಸದಸ್ಯತ್ವಕ್ಕೆ ಮೊದಲು ರಾಜೀನಾಮೆ ನೀಡಬೇಕು. ನಿಷ್ಪಕ್ಷಪಾತಿಯಾಗಿರಬೇಕು. ಆದರೆ ಸಭಾಧ್ಯಕ್ಷರೇ ಪಕ್ಷದ ರಾಜ್ಯ ಉಸ್ತುವಾರಿಯನ್ನು ಭೇಟಿಯಾಗಿ ಕೃತಜ್ಞತೆಯ ” ಸಂದಾಯ” ಮಾಡಿರುವುದು ಅವರ ಕಾರ್ಯವೈಖರಿಯನ್ನು ಪ್ರಶ್ನಾರ್ಹವಾಗಿಸುತ್ತದೆ. ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಲ್ಲೇ ಇನ್ನು ಮುಂದೆ ಸದನ ನಡೆಯಬಹುದು ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಕಾರ್ಕಳ ಆಕ್ರೋಶ ವ್ಯಕ್ತಡಿಸಿದ್ದಾರೆ.
ಟ್ವೀಟ್ ಮಾಡಿರುವ ಸುನಿಲ್ ಕುಮಾರ್, ಸಾಂವಿಧಾನಿಕ ಹುದ್ದೆಯ ಘನತೆಯನ್ನು ಲೆಟರ್ ಹೆಡ್ ಗೆ ಇಳಿಸಿದ ಕಾಂಗ್ರೆಸ್ ಹೈಕಮಾಂಡ್ ಈಗ ಸ್ಪೀಕರ್ ಹುದ್ದೆಯನ್ನು ಅಕ್ಷರಶಃ ರಾಜಕೀಯ ನೇಮಕಾತಿಯನ್ನಾಗಿಸಿದೆ. ಸಭಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದವರು ಪಕ್ಷದ ಸದಸ್ಯತ್ವಕ್ಕೆ ಮೊದಲು ರಾಜೀನಾಮೆ ನೀಡಬೇಕು. ನಿಷ್ಪಕ್ಷಪಾತಿಯಾಗಿರಬೇಕು. ಆದರೆ ಸಭಾಧ್ಯಕ್ಷರೇ ಪಕ್ಷದ ರಾಜ್ಯ ಉಸ್ತುವಾರಿಯನ್ನು ಭೇಟಿಯಾಗಿ ಕೃತಜ್ಞತೆಯ ” ಸಂದಾಯ” ಮಾಡಿರುವುದು ಅವರ ಕಾರ್ಯವೈಖರಿಯನ್ನು ಪ್ರಶ್ನಾರ್ಹವಾಗಿಸುತ್ತದೆ. ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಲ್ಲೇ ಇನ್ನು ಮುಂದೆ ಸದನ ನಡೆಯಬಹುದೆಂಬ ಅಪಾಯವನ್ನು ಈ ಭೇಟಿ ಧ್ವನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ಮತ್ತೋರ್ವ ಬಿಜೆಪಿ ಶಾಸಕ ಸುರೇಶ್ ಕುಮಾರ ಸಹ ಆಕ್ಷೇಪಿಸಿದ್ದು, ಕರ್ನಾಟಕ ವಿಧಾನಸಭೆಯ ವಿಧಾನಸಭಾಧ್ಯಕ್ಷರಿಂದ ರಾಜ್ಯದ ಕಾಂಗ್ರೆಸ್ ವೀಕ್ಷಕರಿಗೆ ಕೃತಜ್ಞತೆ ಸಮರ್ಪಣೆಯೇ? ಅಂದು ಕಾಂಗ್ರೆಸ್ ಪಕ್ಷದ ಲೆಟರ್ ಹೆಡ್ ಮೂಲಕ ಸಭಾಧ್ಯಕ್ಷರ ಸ್ಥಾನಕ್ಕೆ ಸೂಚಿಸಲಾಗಿತ್ತು. ಇಂದು ಸಭಾಧ್ಯಕ್ಷರು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿರುವ ಈ ಚಿತ್ರ ಒಂದು ಅಪಸವ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಹೈಕಮಾಂಡ್ 20 ನೂತನ ಸಚಿವರ ಹೆಸರನ್ನು ಹಾಗೂ ವಿಧಾನಸಭೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಸಭಾಧ್ಯಕ್ಷರನ್ನು ಹೆಸರನ್ನು ಪಕ್ಷದ ಲೆಟರ್‌ಹೆಡ್‌ನಲ್ಲಿ ಪ್ರಕಟಿಸಿತ್ತು. ಕಾಂಗ್ರೆಸ್ ಲೆಟರ್‌ಹೆಡ್‌ನಲ್ಲಿ ಸ್ಪೀಕರ್, ಡೆಪ್ಯುಟಿ ಸ್ಪೀಕರ್, ಸಭಾಪತಿ, ಉಪಸಭಾಪತಿ ಹುದ್ದೆಗಳಿಗೆ ಹೆಸರು ಆಯ್ಕೆ ಮಾಡಿ ಪ್ರಕಟಿಸಿರುವ ವಿಚಾರಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮತ್ತೊಂದು ಕೆಟ್ಟ ಸಂಪ್ರದಾಯಕ್ಕೆ ಕಾಂಗ್ರೆಸ್ ಪಕ್ಷ ನಾಂದಿ ಹಾಡಿದೆ ಎಂದು ವಾಗ್ದಾಳಿ ನಡೆಸಿತ್ತು. ಇದೀಗ ಖುದ್ದು ಸ್ಪೀಕರ್ ಹಾಗೂ ಸಭಾಪತಿ, ಕಾಂಗ್ರೆಸ್ ಹೈಕಮಾಂಡ್ ನಾಯಕನನ್ನು ಭೇಟಿ ಮಾಡಿದ್ದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.