ಕರ್ನಾಟಕದಲ್ಲಿ ಯಾವುದೇ ಸಹಿ ಸಂಗ್ರಹವಾಗಿಲ್ಲ; ಸಹಿ ಸಂಗ್ರಹವನ್ನು ಹೈಕಮಾಂಡ್ ಸಹಿಸುವುದಿಲ್ಲ: ಅರವಿಂದ ಬೆಲ್ಲದ್
ರೇಣುಕಾಚಾರ್ಯ ಸವಾಲಿಗೆ ಪ್ರತಿಕ್ರಿಯೆ ಕೊಡಲು ಆಗಲ್ಲ. ನಾನು ಸಿಎಂ ರೇಸ್‌ನಲ್ಲಿರುವ ಬಗ್ಗೆ ಏನನ್ನೂ ಹೇಳಲ್ಲ ಎಂದು ಮುಖ್ಯಮಂತ್ರಿ ಬದಲಾವಣೆ ಹಾಗೂ ಸಹಿ ಸಂಗ್ರಹ ವಿಚಾರವಾಗಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಪ್ರತಿಕ್ರಿಯಿಸಿದ್ದಾರೆ.
ಧಾರವಾಡ: ರಾಜ್ಯದಲ್ಲಿ ಒಂದೇ ಒಂದು ಬಾರಿ ಸಹಿ ಸಂಗ್ರಹವಾಗಿತ್ತು. ಅದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದಾಗಿತ್ತು. ಅದನ್ನು ಬಿಟ್ಟರೆ ಬೇರೆ ಯಾವುದೇ ಸಹಿ ಸಂಗ್ರಹವಾಗಿಲ್ಲ. ಯಾವುದೇ ಸಹಿ ಸಂಗ್ರಹವನ್ನು ಹೈಕಮಾಂಡ್ ಸಹಿಸುವುದಿಲ್ಲ ಎಂದು ಧಾರವಾಡದಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಇಂದು (ಜೂನ್ 7) ಹೇಳಿಕೆ ನೀಡಿದ್ದಾರೆ. ನಾನು ಯಾರ ಬಗ್ಗೆಯೂ ವೈಯಕ್ತಿವಾಗಿ ಪ್ರತಿಕ್ರಿಯಿಸುವುದಿಲ್ಲ. ನನ್ನ ಕ್ಷೇತ್ರದಲ್ಲಿ ಏನು ಮಾಡಬೇಕೋ ಅದನ್ನು ಮಾಡ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಸವಾಲಿಗೆ ಪ್ರತಿಕ್ರಿಯೆ ಕೊಡಲು ಆಗಲ್ಲ. ನಾನು ಸಿಎಂ ರೇಸ್‌ನಲ್ಲಿರುವ ಬಗ್ಗೆ ಏನನ್ನೂ ಹೇಳಲ್ಲ ಎಂದು ಮುಖ್ಯಮಂತ್ರಿ ಬದಲಾವಣೆ ಹಾಗೂ ಸಹಿ ಸಂಗ್ರಹ ವಿಚಾರವಾಗಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಪ್ರತಿಕ್ರಿಯಿಸಿದ್ದಾರೆ. ನಮ್ಮದು ಶಿಸ್ತಿನ ಪಕ್ಷ. ಇಲ್ಲಿ ಸಹಿ ಸಂಗ್ರಹಕ್ಕೆ ಅವಕಾಶ ಇಲ್ಲ. ಹಾಗೆ ಮಾಡಿದವರ ಮೇಲೆ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ. ಏನೇ ಇದ್ದರೂ ಶಾಸಕಾಂಗ ಸಭೆಯಲ್ಲೇ ಚರ್ಚೆ ಆಗುತ್ತೆ ಎಂದು ಹೇಳಿದ್ದಾರೆ.
ಲಾಕ್‌ಡೌನ್ ಕುರಿತಾಗಿ ಮಾತನಾಡಿದ ಅರವಿಂದ ಬೆಲ್ಲದ್, ರಾಜ್ಯದಲ್ಲಿ ಲಾಕ್‌ಡೌನ್ ತೆರವು ಮಾಡುವ ಅವಶ್ಯವಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.9ಕ್ಕೆ ಬಂದಿದೆ. ಬಡವರು, ಉದ್ಯೋಗಸ್ಥರು ಜೀವನ ಸಾಗಿಸಲು ಕಷ್ಟವಾಗಿದೆ. ಹೀಗಾಗಿ ಮತ್ತೆ ಲಾಕ್‌ಡೌನ್ ಮುಂದುವರಿಸೋದು ಬೇಡ. ಎಲ್ಲಿ ಸೋಂಕು ಹೆಚ್ಚಾಗಿದೆಯೋ ಅಲ್ಲಿ ಮಾತ್ರ ಲಾಕ್‌ಡೌನ್ ಮುಂದುವರಿಸಲಿ ಎಂದು ತಿಳಿಸಿದ್ದಾರೆ.
ರಾಜ್ಯ ನಾಯಕತ್ವ ಕುರಿತಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಯಾಗಿಲ್ಲ. ರಾಷ್ಟ್ರೀಯ ನಾಯಕರ ಜೊತೆಯೂ ಈ ಬಗ್ಗೆ ಚರ್ಚೆಯಾಗಿಲ್ಲ. ವರಿಷ್ಠರು ಸೂಚಿಸಿದರೆ ರಾಜೀನಾಮೆ ನೀಡುತ್ತೇನೆಂಬ ಹೇಳಿಕೆಯನ್ನು ಯಾವ ಆಧಾರದಲ್ಲಿ ಸಿಎಂ ಹೇಳಿದ್ದಾರೆಂಬುದು ಗೊತ್ತಿಲ್ಲ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಬಿಜೆಪಿಯಲ್ಲಿ ಸಂಸದೀಯ ಮಂಡಳಿಯೇ ‘ಸುಪ್ರೀಂ’. ಅದರ ತೀರ್ಮಾನಕ್ಕೆ ನಾವೆಲ್ಲಾ ಬದ್ಧ ಎಂದು ದೆಹಲಿಯಲ್ಲಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಸಹಿ ಪಡೆಯುತ್ತಿರುವ ರೇಣುಕಾಚಾರ್ಯ, ಆದ್ರೆ ಸಹಿ ಅಭಿಯಾನವೇ ಇಲ್ಲ ಎಂದ ಪ್ರಲ್ಹಾದ ಜೋಶಿ
ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಲೇಬೇಕು: ಸಿಎಂ ಯಡಿಯೂರಪ್ಪ ಆಪ್ತರಿಂದ ನಿರ್ಧಾರ