ಬೆಂಗಳೂರು, ನವೆಂಬರ್ 30: ವಕ್ಫ್ ವಿರುದ್ಧದ ಪಾದಯಾತ್ರೆ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಸವಣ್ಣನವರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಈಗ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಯತ್ನಾಳ್ ಹೇಳಿಕೆ ಖಂಡಿಸಿ ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಗಜ್ಯೋತಿ ಬಸವಣ್ಣನವರ ಬಗ್ಗೆ ಅತ್ಯಂತ ಅವಮಾನಕರವಾಗಿ, ಅತ್ಯಂತ ಹಗುರವಾಗಿ ಮಾತನಾಡಿರುವ ಬಿಜೆಪಿ ಶಾಸಕ ಯತ್ನಾಳ್ ಅವರು ಕ್ಷಮಿಸಲಾರದ ತಪ್ಪೆಸಗಿದ್ದಾರೆ ಎಂದು ಖರ್ಗೆ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ನಾಯಕರು, ಅಲ್ಪಸಂಖ್ಯಾತರ ಬಗ್ಗೆ ಮನಸೋ ಇಚ್ಛೆ ಮಾತನಾಡುತ್ತಿದ್ದ ಬಿಜೆಪಿಯವರ ನಾಲಿಗೆಗಳು ಈಗ ಸಮಾಜ ಸುಧಾರಣೆಗೆ ಜೀವ ಸವೆಸಿದ ಮಹನೀಯರ ಬುಡಕ್ಕೂ ಚಾಚುವಷ್ಟು ಉದ್ದವಾಗಿವೆ. ಬಸವಣ್ಣನವರ ಹಾಗೆ ಹೊಳೆ ಹಾರಬೇಕು ಎನ್ನುವ ಮೂಲಕ ಬಸವಣ್ಣನವರನ್ನು ಪಲಾಯನವಾದಿ ಎಂಬರ್ಥದಲ್ಲಿ ಮಾತನಾಡಿದ ಯತ್ನಾಳ್ ಅವರನ್ನು ಈ ನಾಡಿನ ಪ್ರಜ್ಞಾವಂತ ಬಸವಾನುಯಾಯಿಗಳು ಗಟ್ಟಿ ಧ್ವನಿಯಲ್ಲಿ ಖಂಡಿಸಬೇಕಿದೆ. ತನ್ನ ಬಣ್ಣಿಸಬೇಡ, ಇದಿರು ಹಳಿಯಬೇಡ ಎಂದಿದ್ದ ಬಸವಣ್ಣನವರ ಹೆಸರನ್ನು ಯತ್ನಾಳ್ ಅವರು ತಮ್ಮ ದ್ವೇಷ ಭಾಷಣಕ್ಕೆ ಬಳಸಿದ್ದು ಮತ್ತೊಂದು ಘೋರ ಅಪರಾಧ ಎಂದು ಖರ್ಗೆ ಹೇಳಿದ್ದಾರೆ.
ಬಸವಣ್ಣನವರು ಹೊಳೆ ಹಾರಿಲ್ಲ, ಈ ಸಮಾಜಕ್ಕೆ ಜ್ಞಾನದ ಹೊಳೆ ಹರಿಸಿದ್ದಾರೆ, ಯತ್ನಾಳ್ ಅವರೇ, ನಿಮ್ಮ ಪ್ರಕಾರ ಬಸವಣ್ಣನವರು ಹೊಳೆ ಹಾರಿದ್ದಾರೆ ಎನ್ನುವುದಾದರೆ ಅವರನ್ನು ಹೊಳೆಗೆ ಹಾರುವಂತೆ ಮಾಡಿದವರು ಯಾರು? ಇಂದು ಯತ್ನಾಳ್ ಅವರು ಪ್ರತಿಪಾದಿಸುತ್ತಿರುವ ಸಿದ್ಧಾಂತವೇ ಅಂದು ಬಸವಾದಿ ಶರಣರನ್ನು ಹಿಂಸಿಸಿದ್ದಲ್ಲವೇ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಜಗಜ್ಯೋತಿ ಬಸವಣ್ಣನವರ ಬಗ್ಗೆ ಅತ್ಯಂತ ಅವಮಾನಕರವಾಗಿ, ಅತ್ಯಂತ ಹಗುರವಾಗಿ ಮಾತನಾಡಿರುವ ಬಿಜೆಪಿ ಶಾಸಕ ಯತ್ನಾಳ್ ಅವರು ಕ್ಷಮಿಸಲಾರದ ತಪ್ಪೆಸಗಿದ್ದಾರೆ.
ಕಾಂಗ್ರೆಸ್ ನಾಯಕರು, ಅಲ್ಪಸಂಖ್ಯಾತರ ಬಗ್ಗೆ ಮನಸೋ ಇಚ್ಛೆ ಮಾತನಾಡುತ್ತಿದ್ದ ಬಿಜೆಪಿಯವರ ನಾಲಿಗೆಗಳು ಈಗ ಸಮಾಜ ಸುಧಾರಣೆಗೆ ಜೀವ ಸವೆಸಿದ ಮಹನೀಯರ ಬುಡಕ್ಕೂ ಚಾಚುವಷ್ಟು ಉದ್ದವಾಗಿವೆ.… pic.twitter.com/wEEWvLL8V8
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 29, 2024
ಕಲ್ಯಾಣದ ಶರಣರ ಹತ್ಯೆ ನಡೆಸಿದವರು ಯಾರು? ಶರಣರು ಮರಣವೇ ಮಹಾನವಮಿ ಎಂದಿದ್ದೇಕೆ? ವಚನ ಭಂಡಾರಕ್ಕೆ ಬೆಂಕಿ ಇಟ್ಟವರು ಯಾರು? ಅನುಭವ ಮಂಟಪಕ್ಕೆ ದಾಳಿ ಮಾಡಿದವರು ಯಾರು? ಮಡಿವಾಳ ಮಾಚಿದೇವರು ಕತ್ತಿ ಹಿಡಿದಿದ್ದೇಕೆ? ಯಾರಿಂದ ರಕ್ಷಣೆ ಪಡೆಯಲು? ಬಿಜೆಪಿಯವರಿಗೆ ಈ ವಿಚಾರಗಳ ಬಗ್ಗೆ ಚರ್ಚಿಸುವ ಶಕ್ತಿ ಇದೆಯೇ? ಬಸವಣ್ಣನವರ ಅನುಭವ ಮಂಟಪದ ಪರಿಕಲ್ಪನೆಯಲ್ಲೇ ಇಂದು ನಾವು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದ್ದೇವೆ. ಅವರ ತತ್ವಗಳ ಪ್ರೇರಣೆಯಲ್ಲೇ ನಮ್ಮ ಸಂವಿಧಾನವಿದೆ. ಧಮನಿತರಿಗೆ ಆತ್ಮಶಕ್ತಿ ನೀಡಿದ, ಶೋಷಿತರಿಗೆ ಘನತೆಯ ಬದುಕು ತಂದುಕೊಟ್ಟ, ಕಲ್ಯಾಣ ಕ್ರಾಂತಿಯ ಮೂಲಕ ಮೌಢ್ಯದಲ್ಲಿ ಜಡಗಟ್ಟಿದ್ದ ಸಮಾಜಕ್ಕೆ ಹೊಸ ಮಾರ್ಗ ತೋರಿದ ಬಸವಣ್ಣನವರು ಕೇವಲ ಹೊಳೆ ಹಾರಿದವರಾಗಿ ಕಂಡಿದ್ದು ಬಿಜೆಪಿಗರ ಅಜ್ಞಾನದ ದ್ಯೋತಕವಾಗಿದೆ. ಬಸವಣ್ಣರನ್ನು ಅನುಸರಿಸುವ ಈ ನಾಡಿನ ಜನ ಬಿಜೆಪಿಗರ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಕೆಲ ದಿನಗಳ ಹಿಂದೆ ನಾಡಿನ ಜನ ವೇದಿಕೆಯಿಂದ ಕೆಳಗಿಳಿಸಿ ಓಡಿಸಿದ್ದರೂ ಬುದ್ದಿ ಕಲಿಯದ ಯತ್ನಾಳ್ ಅವರ ನಾಲಿಗೆಗೆ ಕಡಿವಾಣ ಹಾಕುವ ಶಕ್ತಿ ಕರ್ನಾಟಕದ ಜನರಿಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನವಂಬರ್ 25ರಂದು ನಡೆದಿದ್ದ ವಕ್ಫ್ ವಿರುದ್ಧದ ಪಾದಯಾತ್ರೆ ವೇಳೆ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಕ್ಫ್ ಬೋರ್ಡ್ ವಿರುದ್ಧ ಎಲ್ಲರೂ ಕೂಡಿ ಹೋರಾಟ ಮಾಡಬೇಕಿದೆ. ನಾವು ಹೋರಾಟಕ್ಕೆ ಇಳಿದರೆ ಅವರು ಕೂಡ ಹೋರಾಟ ಮಾಡುತ್ತಾರೆ. ವಿಜಯೇಂದ್ರ ಬಣದವರು ಹೋರಾಟ ಮಾಡುತ್ತಾರೆ, ಬೆಂಕಿ ಹಚ್ಚುತ್ತಾರೆ. ಅವರು ನಮ್ಮ ನಡುವೆಯೇ ಜಗಳ ಹಚ್ಚುತ್ತಾರೆ, ನಾವು ಹೆದರಬಾರದು. ಹೆದರಿದರೆ ಬಸವಣ್ಣನವರ ಹಾಗೆ ನದಿಗೆ ಹಾರಿ ಸಾಯಬೇಕಾಗುತ್ತದೆ ಎಂದು ಯತ್ನಾಳ್ ಹೇಳಿದ್ದರು.
ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಮಾಡಿ ಬಿಸಾಕಿ: ವಿಜಯೇಂದ್ರ ಬಣದಿಂದ ಆಗ್ರಹ, ಮೈಸೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲೇ ಆಕ್ರೋಶ
ಬಸನಗೌಡ ಪಾಟೀಲ್ ಹೇಳಿಕೆಗೆ ಬಸವ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಹೇಳಿಕೆಯು ರಾಜಕೀಯ ಆಯಾಮವನ್ನೂ ಪಡೆದುಕೊಂಡಿದ್ದು, ಯತ್ನಾಳ್ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Sat, 30 November 24