ಯತ್ನಾಳ್ ಉಚ್ಚಾಟನೆ ಮಾಡಿ ಬಿಸಾಕಿ: ವಿಜಯೇಂದ್ರ ಬಣದಿಂದ ಆಗ್ರಹ, ಮೈಸೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲೇ ಆಕ್ರೋಶ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದ್ದಾರೆ. ಉಪಚುನಾವಣೆಯ ಸೋಲಿಗೆ ಯತ್ನಾಳ್ ಕಾರಣ ಎಂದು ಆರೋಪಿಸಲಾಗಿದೆ. ವಿಜಯೇಂದ್ರ ಬಣದ ನಾಯಕರು ಈ ಬಗ್ಗೆ ಹೈಕಮಾಂಡ್‌ಗೆ ದೂರು ನೀಡುವ ಸಾಧ್ಯತೆಯಿದೆ.
ಮೈಸೂರು, ನವೆಂಬರ್ 30: ಪಕ್ಷದ ವಿರುದ್ಧ ಸದಾ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಣದ ಆಕ್ರೋಶ ತೀವ್ರಗೊಂಡಿದೆ. ಯತ್ನಾಳ್ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಬಿಸಾಕಿ, ಅವರದ್ದು ಮುಖವಾಡದ ಹಿಂದುತ್ವ ಎಂದು ಮೈಸೂರಿನಲ್ಲಿ ಪಕ್ಷದ ಕಾರ್ಯಕರ್ತರು, ವಿಜಯೇಂದ್ರ ಬಣದ ನಾಯಕರು ಆಗ್ರಹಿಸಿದ್ದಾರೆ. ಬಿಜೆಪಿಯಲ್ಲಿ ಪ್ರತ್ಯೇಕ ಸಮರ ಸಾರಿರುವ ಯತ್ನಾಳ್ ನಡೆಗೆ ವಿಜಯೇಂದ್ರ ಬಣದ ಕಾರ್ಯಕರ್ತರು ಮೈಸೂರಿನಲ್ಲಿ ನಡೆದ ಸಭೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟು ದಿನ ತಾಳ್ಮೆಯಿಂದ ಇದ್ದ ವಿಜಯೇಂದ್ರ ಬಣದ ಕಾರ್ಯಕರ್ತರು, ಇಂದು ಮೈಸೂರಿನಲ್ಲಿ ಸಭೆಯಲ್ಲೇ ಅಸಮಾಧಾನ ಹೊರಹಾಕಿದ್ದಾರೆ. ವಿಜಯೇಂದ್ರ ಬಣದ ನಾಯಕರ ಸುದ್ದಿಗೋಷ್ಠಿ ವೇಳೆ ಕಾರ್ಯಕರ್ತರು ರೋಷಾವೇಶಗೊಂಡಿದ್ದರು. ಭಾರೀ ಹೈಡ್ರಾಮಾವೇ ನಡೆಯಿತು. ಯತ್ನಾಳ್ ಉಚ್ಚಾಟನೆಗೆ ತೀವ್ರ ಆಗ್ರಹ ವ್ಯಕ್ತವಾಯಿತು.
ರಾಜ್ಯಾದ್ಯಂತ ದೇಗುಲಗಳಿಗೆ ಭೇಟಿಯ ನೆಪದಲ್ಲಿ ಪ್ರವಾಸ ಆರಂಭಿಸಿರುವ ವಿಜಯೇಂದ್ರ ಟೀಂ, ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿತು. ಎಂಪಿ ರೇಣುಕಾಚಾರ್ಯ, ಬಿಸಿ ಪಾಟೀಲ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವು ನಾಯಕರು ಜತೆಯಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ದೇವಿ ದರ್ಶನದ ಬಳಿಕ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಪಕ್ಷದೊಳಗಿನ ದುಷ್ಟ ಶಕ್ತಿ ಸಂಹಾರ ಆಗುತ್ತದೆ. ಯತ್ನಾಳ್ ಉಚ್ಚಾಟನೆ ಆಗಲಿದೆ, ಕಾದುನೋಡಿ ಎಂದಿದ್ದಾರೆ.
ಬಿಜೆಪಿ ಹೈಕಮಾಂಡ್ ದುರ್ಬಲವಾಗಿಲ್ಲ, ಕಾಲ ಬಂದಾಗ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಮಾಜಿ ಶಾಸಕ ಬಿಸಿ ಪಾಟೀಲ್ ಕಾರ್ಯಕರ್ತರಿಗೆ ಭರವಸೆ ನೀಡಿದರು.
ಉಪಚುನಾವಣೆಯಲ್ಲಿ ಸೋಲಿಗೆ ಯತ್ನಾಳ್ ಕಾರಣ: ರೇಣುಕಾಚಾರ್ಯ
ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಯತ್ನಾಳ್ ಕಾರಣ ಎಂದ ರೇಣುಕಾಚಾರ್ಯ, ‘‘ಮಿಸ್ಟರ್ ಇಲಿ, ನಿನ್ನ ಆಟ ನಡೆಯೋದಿಲ್ಲ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಫಿಕ್ಸಿಂಗ್ ಮಾಡಿ, ಬಿಜೆಪಿ ಸೋಲಿಸಿದೆ’’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏತನ್ಮಧ್ಯೆ, ತಾಕತ್ ಇದ್ದರೆ ಯತ್ನಾಳ್ರನ್ನು ಉಚ್ಚಾಟನೆ ಮಾಡಲಿ ಎಂದು ವಿಜಯೇಂದ್ರಗೆ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದ್ದಾರೆ. ಜತೆಗೆ, ಯತ್ನಾಳ್ ಹಿಂದುತ್ವದ ಹುಲಿ ಅಲ್ಲ, ಇಲಿ ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ, ಬಿಜೆಪಿಯಲ್ಲಿ ಹುಚ್ಚರ ಸಂತೆ ನಡೆಯುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಯತ್ನಾಳ್ ಹಣೆಯಲು ವಿಜಯೇಂದ್ರ ಬಣ ಸಜ್ಜು: ಹೈಕಮಾಂಡ್‌ಗೆ ಸಂದೇಶ ರವಾನಿಸಲು ಶಕ್ತಿ ಪ್ರದರ್ಶನ!
ಏತನ್ಮಧ್ಯೆ, ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲೇಬೇಕು ಎಂದು ವಿಜಯೇಂದ್ರ ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿದ್ದಾರೆ. ಇದೀಗ ದೆಹಲಿಯಲ್ಲಿರುವ ವಿಜಯೇಂದ್ರ, ವರಿಷ್ಠರನ್ನ ಭೇಟಿ ಮಾಡಲಿದ್ದಾರೆ. ಯತ್ನಾಳ್ ನಡೆ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ರೇಣುಕಾಚಾರ್ಯ ಸುಳಿವಿನಂತೆ ಯತ್ನಾಳ್ ಉಚ್ಚಾಟನೆಯಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ