AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯತ್ನಾಳ್ ಹಣೆಯಲು ವಿಜಯೇಂದ್ರ ಬಣ ಸಜ್ಜು: ಹೈಕಮಾಂಡ್​ಗೆ ಸಂದೇಶ ರವಾನಿಸಲು ಶಕ್ತಿ ಪ್ರದರ್ಶನ!

ಆಡಳಿತ ಪಕ್ಷದ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದ್ದ ಬಿಜೆಪಿ, ಎರಡು ಬಣವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್, ವಿಜಯೇಂದ್ರ ನಡುವೆ ಅಂತರ್ಯುದ್ಧ, ಬಣ ಬಡಿದಾಟ ನಡೆದಿದೆ. ಶಿಸ್ತಿನ ಪಕ್ಷ ಬಿಜೆಪಿಗೆ ಮುಜುಗರ ತಂದಿಟ್ಟಿದ್ದರೆ, ಮತ್ತೊಂದೆಡೆ ಹೈಕಮಾಂಡ್​ ನಾಯಕರಿಗೂ ಟೆನ್ಷನ್ ತಂದಿಟ್ಟಿದೆ. ಇದೀಗ ಇದಕ್ಕೆ ಕೊನೆಹಾಡಬೇಕೆಂದು ಹೈಕಮಾಂಡ್​ ಮುಂದಾಗಿದೆ. ಆದ್ರೆ, ಇದರ ಮಧ್ಯ ವಿಜಯೇಂದ್ರ ಬಣ, ಯತ್ನಾಳ್​ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ಯತ್ನಾಳ್ ಹಣೆಯಲು ವಿಜಯೇಂದ್ರ ಬಣ ಸಜ್ಜು: ಹೈಕಮಾಂಡ್​ಗೆ ಸಂದೇಶ ರವಾನಿಸಲು ಶಕ್ತಿ ಪ್ರದರ್ಶನ!
ರಮೇಶ್ ಬಿ. ಜವಳಗೇರಾ
|

Updated on: Nov 29, 2024 | 3:18 PM

Share

ಬೆಂಗಳೂರು, (ನವೆಂಬರ್ 29): ಕರ್ನಾಟಕ ಬಿಜೆಪಿಯಲ್ಲಿ ಅಂತರ್ಯುದ್ಧ, ಬಣ ಬಡಿದಾಟ ಜೋರಾಗಿದೆ. ಶಾಸಕ ಬಸನಗೌಡ ಪಾಟೀಲ್​ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವಿನ ಬಹಿರಂಗ ಆರೋಪ-ಪ್ರತ್ಯಾರೋಪಗಳು ಜೋರಾಗಿದ್ದು, ಇದು ದೆಹಲಿಯ ಹೈಕಮಾಂಡ್​ ನಾಯಕರ ಗಮನಕ್ಕೂ ಬಂದಿದೆ. ಎಲ್ಲವನ್ನೂ ಅರಿತ ವರಿಷ್ಠರು ಇದೀಗ ಬಣ ಕಿತ್ತಾಟಕ್ಕೆ ಬ್ರೇಕ್​ ಹಾಕುವುದಕ್ಕೆ ಟೈಂ ಫಿಕ್ಸ್ ಮಾಡೇ ಬಿಟ್ಟಿದ್ದಾರೆ. ಡಿಸೆಂಬರ್​​ನಲ್ಲಿ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡಿ ಹೈಕಮಾಂಡ್​ ಗಮನಕ್ಕೆ ತರಲು ಪ್ಲ್ಯಾನ್​ ಮಾಡಲಾಗಿದೆ. ಇದರ ಮಧ್ಯೆಯೇ ಇದೀಗ ಶಾಸಕ ಯತ್ನಾಳ್ ಪ್ರತ್ಯೇಕ ಹೋರಾಟಕ್ಕೆ ಕೌಂಟರ್ ಆಗಿ ವಿಜಯೇಂದ್ರ ಆಪ್ತರು ಬೃಹತ್ ಸಮಾವೇಶಕ್ಕೆ ಸಜ್ಜಾಗಿದ್ದಾರೆ.

ದೇಗುಲಗಳ ಭೇಟಿ ನೆಪದಲ್ಲಿ ತಂತ್ರ ಹೆಣೆದ ವಿಜಯೇಂದ್ರ ತಂಡ!

ಬೀದರ್​ನಿಂದ ವಕ್ಫ್​ ವಿರುದ್ಧ ಹೋರಾಟ ಆರಂಭಿಸಿರುವ ಬಸನಗೌಡ ಪಾಟೀಳ್ ಯತ್ನಾಳ್​, ಜಾಗೃತಿ ಅಭಿಯಾನ 5ನೇ ದಿನಕ್ಕೆ ಕಾಲಿಟ್ಟಿದೆ. ಇದಕ್ಕೆ ಕೌಂಟರ್ ಆಗಿಯೇ ಇದೀಗ ವಿಜಯೇಂದ್ರಗೆ ಎಂ.ಪಿ.ರೇಣುಕಾಚಾರ್ಯ ಟೀಂ ಬೆನ್ನಿಗೆ ನಿಂತಿದ್ದು, ಶೀಘ್ರದಲ್ಲೇ ವಿಜಯೇಂದ್ರ ಪರ ದಾವಣಗೆರೆಯಲ್ಲಿ ಬೃಹತ್ ಸಮಾವೇಶಕ್ಕೆ ತಯಾರಿ ನಡೆಸಿದ್ದಾರೆ. ಇದರ ಮೊದಲ ಭಾಗವಾಗಿಯೇ ಟೆಂಪನ್ ರನ್​ ಶುರು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಸಂಕ್ರಾಂತಿಗೆ ಸಂ’ಕ್ರಾಂತಿ’ಆಗುತ್ತಾ?

ಬಿಎಸ್​ವೈ, ವಿಜಯೇಂದ್ರ ಪರವಾಗಿ ಆಪ್ತರಿಂದ ಪ್ರವಾಸ

ಇಂದು(ನವೆಂಬರ್ 29) ಕೋಲಾರದ ಕುರುಡುಮಲೆ ವಿನಾಯಕ ದೇಗುಲಕ್ಕೆ ರೇಣುಕಾಚಾರ್ಯ ಟೀಂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ. ಕಟ್ಟಾ ಸುಬ್ರಹ್ಮಣ್ಯ, ಹಾಲಪ್ಪ, ಭಾರತಿ ಶೆಟ್ಟಿ ಸೇರಿ 10ಕ್ಕೂ ನಾಯಕರಿಂದ ವಿನಾಯಕನಿಗೆ ಪೂಜೆ ಸಲ್ಲಿಸಿದ್ರು. ನಾಳೆ(ನವೆಂಬರ್ 30) ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ಭೇಟಿ ಕೊಡಲಿದ್ದಾರೆ. ಚಾಮುಂಡಿ ದರ್ಶನದ ಬಳಿಕ ಮುರುಡೇಶ್ವನಿಗೂ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಶಾಸಕ ಯತ್ನಾಳ್ ಉಚ್ಛಾಟನೆಗೆ ರೇಣುಕಾಚಾರ್ಯ ಆಗ್ರಹ!

ಬಿಜೆಪಿಯಲ್ಲೇ ಪ್ರತ್ಯೇಕ ಹೋರಾಟ ಮಾಡುತ್ತಿರುವ ಯತ್ನಾಳ್ ನಡೆಗೆ ವಿಜಯೇಂದ್ರ ಬಣ ಸಿಡಿದೆದ್ದಿದ್ದು, ಯತ್ನಾಳ್​​ನನ್ನು ಪಕ್ಷದಿಂದ ಹೊರಹಾಕಬೇಕೆಂದು ಆಗ್ರಹಿಸುತ್ತಿದ್ದಾರೆ. ಏನ್​ ಹುಡುಗಾಟಿಕೆ ಆಡ್ತಿದ್ದೀರಾ? ದಾವಣಗೆರೆಯಲ್ಲಿ ದೊಡ್ಡ ಸಮಾವೇಶ ಮಾಡ್ತೀವಿ, ಮುಲಾಜಿಲ್ಲದೇ ಯತ್ನಾಳ್​ರನ್ನ ಉಚ್ಛಾಟನೆ ಮಾಡಬೇಕು.ಬಿಜೆಪಿ ಅಂದ್ರೆ ತುಘಲಕ್ ಪಕ್ಷ ಅಂದುಕೊಂಡಿದ್ದೀರಾ? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಹರಕು ಬಾಯಿ ಕಾರಣ ಎಂದು ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಮತ್ತೊಂದೆಡೆ ವಿಜಯೇಂದ್ರ ತಂಡದಿಂದ ಸಮಾವೇಶ ಮಾಡುವ ಕುರಿತು ಮಾತನಾಡಿರುವ ಯತ್ನಾಳ್, ಏನು ಬೇಕಾದರೂ ಮಾಡಲಿ ಅವರ ಅಪ್ಪನಂತಹ ರ್ಯಾಲಿ ಮಾಡುತ್ತೇವೆ ಎಂದು ಟಾಂಗ್ ಕೊಟ್ಟರು.

ಇನ್ನು ಹೈಕಮಾಂಡ್​ ದೆಹಲಿಗೆ ಬರುವಂತೆ ಸೂಚನೆ ಕೊಟ್ಟಿರುವ ಬಗ್ಗೆ ಮಾತನಾಡಿದ ಯತ್ನಾಳ್, ನಮ್ಮ ಇಡೀ ಗುಂಪಿಗೆ ಕರೆದರೆ ಮಾತ್ರ ದೆಹಲಿಗೆ ಹೋಗುವೆ. ಕೇವಲ ನನ್ನ ಮಾತ್ರ ಕರೆದು ಒಳಗೆ ಕೂಡಿಸಿ ನನಗೆ ಆಸೆ ಹಚ್ಚಿ ಪ್ರಧಾನಿ ಮಾಡುತ್ತೇನೆಂದು ಹೇಳಿದರೆ ನಾನು ಕೇಳಲ್ಲ. ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಆಗುವ ಸಿಎಂ ಆಗುವ ಹುಚ್ಚಿಲ್ಲ. ಪಕ್ಷಕ್ಕೆ ಒಳ್ಳೆಯದಾಗಬೇಕೆಂದು ಹೋರಾಡುತ್ತಿರುವೆ. ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದರೆ ಕ್ರಮ ಕೈಗೊಳ್ಳಲಿ ಅವರಿಗೆ ಅಧಿಕಾರವಿದೆ ಎಂದರು.

ವಿಜಯೇಂದ್ರ ತಂಡ ಹಾಗೂ ಯತ್ನಾಳ ತಂಡ ಮಧ್ಯದ ಹೊಂದಾಣಿಕೆಗಾಗಿ ರಾಜ್ಯ ರಾಜಕಾರಣಕ್ಕೆ ಸೋಮಣ್ಣ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಸೋಮಣ್ಣ ರಾಜ್ಯ ರಾಜಕಾರಣಕ್ಕೆ ಕರೆದುಕೊಂಡು ಬಂದರೆ ನಾವು ಬೇಡ ಎನ್ನುತ್ತೇವಾ? ಸೋಮ್ಮಣ್ಣ ಬಂದರೂ ನಮ್ಮ ಉತ್ತರ ಕರ್ನಾಟಕದವರ ಸಹಾಯ ಬೇಕೇ ಅಲ್ಲವೇ. ವಿಜಯೇಂದ್ರನ ಮೇಲಷ್ಟೇ ಸೋಮಣ್ಣ ಮಾಡಲಾಗುತ್ತಾ. ಲೋಕಸಭಾ ಚುನಾವಣೆಯಲ್ಲಿ ಸೋಮಣ್ಣರನ್ನ ಸೋಲಿಸಲು ಇದೇ ಅಪ್ಪ ಮಕ್ಕಳು ಎಷ್ಟು ಖರ್ಚು ಮಾಡಿದ್ದಾರೆ/ ತುಮಕೂರಿನಲ್ಲಿ ತಮ್ಮನ್ನು ಸೋಲಿಸಲು ವಿಜಯೇಂದ್ರ ಯಡಿಯೂರಪ್ಪ ಎಷ್ಟು ದುಡ್ಡನ್ನು ಕಳಿಸಿದ್ದರು ಎಂದು ಸೋಮಣ್ಣನವರೇ ಹೇಳಿದ್ದಾರೆ. ಒಂದು ವೇಳೆ ಸೋಮಣ್ಣ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಂದರೆ ವಿಜಯೇಂದ್ರ ಯಡಿಯೂರಪ್ಪ ಮೇಲೆ ಏನು ಕ್ರಮ ಕೈಗೊಳ್ಳುತ್ತಾರೆ? ಎಂದು ನಾನು ಪ್ರಶ್ನೆ ಮಾಡುವೆ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.