ಬೆಂಗಳೂರು-ತುಮಕೂರು ಮೆಟ್ರೋ: ಜಿ ಪರಮೇಶ್ವರ್ ಕೊಟ್ರು ಬಿಗ್ ಅಪ್ಡೇಟ್
ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ವಿಸ್ತರಣಾ ಯೋಜನೆಯ ಕುರಿತು ಮಹತ್ವದ ಅಪ್ಡೇಟ್ ನೀಡಲಾಗಿದೆ. 52 ಕಿಮೀ ಉದ್ದದ ಈ ಮಾರ್ಗಕ್ಕೆ ಡಿಪಿಆರ್ ತಯಾರಾಗುತ್ತಿದೆ. ಹೈದರಾಬಾದ್ ಮೂಲದ ಕಂಪನಿಯು ಡಿಪಿಆರ್ ತಯಾರಿಸುತ್ತಿದ್ದು, ಪೂರ್ಣಗೊಂಡ ನಂತರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಯೋಜನೆಯು ತುಮಕೂರಿನ ಅಭಿವೃದ್ಧಿಗೆ ಹಾಗೂ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ಗುರಿ ಹೊಂದಿದೆ.
ತುಮಕೂರು, ನವೆಂಬರ್ 29: ನಮ್ಮ ಮೆಟ್ರೋ (Namma Metro) ತಮಕೂರಿನವರೆಗೂ ವಿಸ್ತರಿಸಬೇಕು ಎಂಬುವುದು ಬಹು ಜನರ ಬಹು ದಿನಗಳ ಬೇಡಿಕೆಯಾಗಿದೆ. ಈ ವಿಚಾರವಾಗಿ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ನಡೆದು ಅಸ್ತು ಪಡೆದಿದೆ. ಬೆಂಗಳೂರು-ತುಮಕೂರು ನಮ್ಮ ಮೆಟ್ರೋ (Bengaluru-Tumakur Namma Metro) ವಿಸ್ತರಿತ ಯೋಜನೆ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಮಹತ್ವದ ಅಪ್ಡೇಟ್ ನೀಡಿದ್ದಾರೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ವಿಸ್ತೃತ ಯೋಜನಾ ವರದಿ (DPR) ನಡೆಯುತ್ತಿದೆ. ಹೈದರಾಬಾದ್ ಮೂಲದ ಕಂಪನಿ ಡಿಪಿಆರ್ ತಯಾರಿ ಮಾಡುತ್ತಿದೆ.
ಡಿಪಿಆರ್ ಆದ ಬಳಿಕ ಎಸ್ಪಿಪಿ ಮಾಡಿ ಸರ್ಕಾರದ ಮುಂದೆ ವರದಿ ಇಡಲಾಗುತ್ತದೆ ಎಂದು ತಿಳಿಸಿದರು ವಸಂತನರಸಾಪುರದಲ್ಲಿ ಟೌನ್ಶಿಪ್ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಜಾಗ ಗುರುತಿಸಲಾಗಿದೆ. ಪಿಪಿಪಿ ಮಾಡೆಲ್ನಲ್ಲಿ ಟೌನ್ಶಿಫ್ ನೀಡಲಾಗುತ್ತದೆ. ಇನ್ನು, ನಮ್ಮ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಬಗ್ಗೆ ಚರ್ಚೆ ಇಲ್ಲ. ದಾಬಸ್ ಪೆಟೆ ನೆಲಮಂಗಲ ಬಳಿ ನಿರ್ಮಾಣ ಮಾಡಲು ಚರ್ಚೆ ನಡೆಯುತ್ತಿದೆ ಎಂದರು.
ಇದನ್ನೂ ಓದಿ: ಪ್ರಯಾಣಿಕರಿಗೆ ಸಿಹಿ ಸುದ್ದಿ: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಡಿಜಿಟಲ್ ಲಾಕರ್ ಸೌಲಭ್ಯ
52 ಕಿಮೀ ಉದ್ದದ ಮೆಟ್ರೋ ಮಾರ್ಗ
52.41 ಕಿ.ಮೀ. ಉದ್ದದ ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಮಾರ್ಗದಲ್ಲಿ 19 ಎತ್ತರದ ನಿಲ್ದಾಣಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಮಾದಾವರ ನಿಲ್ದಾಣದಿಂದ ಪ್ರಾರಂಭವಾಗುವ ಮೆಟ್ರೋ ಮಾರ್ಗವು ತುಮಕೂರು ಬಸ್ ನಿಲ್ದಾಣದವರೆಗೆ ವಿಸ್ತರಿಸುವ ಗುರಿ ಹೊಂದಿದೆ. ಬಹು ನಿರೀಕ್ಷಿತ ಈ ಯೋಜನೆಯು ತುಮಕೂರು ಬೆಂಗಳೂರು ನಡುವಿನ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಸುಲಭವಾಗಿಸಲಿದೆ.
ತುಮಕೂರು ಮೆಟ್ರೋ ಯೋಜನೆಯು ಆರ್ಥಿಕ ಅಭಿವೃದ್ಧಿ ಮತ್ತು ನಿವಾಸಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಭರವಸೆಯನ್ನು ಹೊಂದಿದೆ. ಮೆಟ್ರೋ ವ್ಯವಸ್ಥೆಯು ತುಮಕೂರು-ಬೆಂಗಳೂರು ನಡುವೆ ಹೂಡಿಕೆಯನ್ನು ಆಕರ್ಷಿಸಲು, ನಗರದ ವಿವಿಧ ಭಾಗಗಳಿಗೆ ಸಾರಿಗೆ ವ್ಯವಸ್ಥೆ ಸುಧಾರಿಸಲು ಮತ್ತು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಹೀಗಾಗಿ ತುಮಕೂರು ರಸ್ತೆಯ ಅಸಂಖ್ಯಾತ ಮಂದಿ ಪ್ರಯಾಣಿಕರು ವಿಸ್ತರಿತ ಮೆಟ್ರೋ ಮಾರ್ಗಕ್ಕಾಗಿ ಬಹುನಿರೀಕ್ಷೆಯಿಂದ ಕಾಯುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ