ಕಾಂಗ್ರೆಸ್​​ ಲೋಕಭವನ ಚಲೋಗೆ ಆಕ್ಷೇಪ: ಶಾಸಕ ಸುರೇಶ್​​ ಕುಮಾರ್​​ರಿಂದ ಸಾಲು ಸಾಲು ಪ್ರಶ್ನೆ

ಮನ್ರೇಗಾ ಯೋಜನೆ ಹೆಸರು ಬದಲಾವಣೆಗೆ ಆಕ್ಷೇಪಿಸಿ ಕಾಂಗ್ರೆಸ್ 'ಲೋಕಭವನ ಚಲೋ' ಪ್ರತಿಭಟನೆಗೆ ಕರೆ ನೀಡಿದೆ. ಆದರೆ, ವಿಧಾನಸಭೆ ಅಧಿವೇಶನದ ಸಮಯದಲ್ಲಿ ಆಡಳಿತ ಪಕ್ಷವೇ ಪ್ರತಿಭಟನೆ ನಡೆಸುವುದಕ್ಕೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ಆದೇಶ ಉಲ್ಲಂಘಿಸಿ ರಸ್ತೆ ಪ್ರತಿಭಟನೆ ನಡೆಸುವುದು ಸರಿಯೇ? ಉಳಿದವರಿಗೂ ಈ ರೀತಿ ಪ್ರತಿಭಟನೆಗೆ ಅವಕಾಶ ಸಿಗಲಿದೆಯೇ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​​ ಲೋಕಭವನ ಚಲೋಗೆ ಆಕ್ಷೇಪ: ಶಾಸಕ ಸುರೇಶ್​​ ಕುಮಾರ್​​ರಿಂದ ಸಾಲು ಸಾಲು ಪ್ರಶ್ನೆ
ಕಾಂಗ್ರೆಸ್​​ ಲೋಕಭವನ ಚಲೋಗೆ ಸುರೇಶ್​​ ಕುಮಾರ್​ ಆಕ್ಷೇಪ
Edited By:

Updated on: Jan 26, 2026 | 7:57 PM

ಬೆಂಗಳೂರು, ಜನವರಿ 26: ಮನ್​ರೇಗಾ ಯೋಜನೆ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿರೋದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್​ನಿಂದ ನಾಳೆ ಲೋಕಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಬೆಳಗ್ಗೆ 10.30ಕ್ಕೆ ಸಿಎಂ, ಡಿಸಿಎಂ ನೇತೃತ್ವದಲ್ಲಿ ಫ್ರೀಡಂಪಾರ್ಕ್​ನಲ್ಲಿ ಕಾಂಗ್ರೆಸ್​ನಿಂದ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಭಾಗಿಯಾಗಲಿದ್ದಾರೆ. ಈ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಎತ್ತಿದ್ದು, ಕಾಂಗ್ರೆಸ್​​ಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ಸುರೇಶ್​​ ಕುಮಾರ್​​ ಆಕ್ಷೇಪ ಏನು?

ನಾಳೆ ಕರ್ನಾಟಕ ವಿಧಾನಸಭೆಯ ಅಧಿವೇಶನವನ್ನು ಬೆಳಗ್ಗೆ 10 ಗಂಟೆಗೆ ಕರೆಯಲಾಗಿದೆ. ಮೊದಲು ಪ್ರಶ್ನೋತ್ತರ, ನಂತರ ರಾಜ್ಯಪಾಲರ ಭಾಷಣದ ಮೇಲೆ ಗೊಂದಲ ನಿರ್ಣಯದ ಕುರಿತು ಚರ್ಚೆ ಎಂಬುದು ನಾಳಿನ ಕಲಾಪದ ಅಜೆಂಡಾ. ಆದರೆ ನಾಳೆ ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್​​ನಿಂದ ಲೋಕಭವನದ ಮುತ್ತಿಗೆ ಕಾರ್ಯಕ್ರಮ ನಡೆಯುತ್ತದೆ ಎಂಬ ಪ್ರಕಟಣೆ ಕಾಂಗ್ರೆಸ್ ಪಕ್ಷದಿಂದ ಹೊರ ಬಿದ್ದಿದೆ. ಇದರಿಂದಾಗಿ ಈಗ ಎರಡು ಪ್ರಶ್ನೆಗಳು ಉದ್ಭವವಾಗುತ್ತವೆ. ಅಧಿವೇಶನದ ಸಮಯದಲ್ಲಿಯೇ ಆಳುವ ಪಕ್ಷ ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡು ತನ್ನ ಶಾಸಕರುಗಳೆಲ್ಲಾ ಇದರಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿರುವುದು ಎಷ್ಟು ಸಮಂಜಸ? ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಮುತ್ತಿಗೆ ಮಾಡುವಂತಹ ಕಾರ್ಯಕ್ರಮವನ್ನು ಉಚ್ಚ ನ್ಯಾಯಾಲಯದ ನಿರ್ದೇಶನಂತೆ ನಿಷೇಧಿಸಲಾಗಿದೆ. ಒಂದೊಮ್ಮೆ ಆಳುವ ಪಕ್ಷಕ್ಕೆ ಈ ರೀತಿ ಮುತ್ತಿಗೆ ಎಂಬ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರೆ, ಮುಂದೆ ಬೇರೆ ಪಕ್ಷಗಳಿಗೂ ಅವಕಾಶ ನೀಡಲಾಗುತ್ತದೆಯೇ? ಎಂದು ರಾಜಾಜಿನಗರ ಶಾಸಕ ಸುರೇಶ್​​ ಕುಮಾರ್​​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅಧಿವೇಶನ ಭಾಷಣ, ಗದ್ದಲ ಬಗ್ಗೆ ರಾಷ್ಟ್ರಪತಿಗೆ ರಾಜ್ಯಪಾಲ ವರದಿ; ಏನೆಲ್ಲಾ ಅಂಶಗಳಿವೆ?

ರಾಜ್ಯದಲ್ಲಿ ಆಡಳಿತ ನಡೆಸುವ ನಡೆಸುತ್ತಿರುವ ಪಕ್ಷವೇ ಕಾನೂನನ್ನು ಉಲ್ಲಂಘಿಸುವುದು ಎಷ್ಟು ಸಮಂಜಸ? ಆಡಳಿತ ನಡೆಸಬೇಕಾದ ಪಕ್ಷವೇ ಈ ರೀತಿ ಮುತ್ತಿಗೆ ಹಾಕುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸೂಕ್ತವೇ? ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ಪ್ರಶ್ನೆ ಎತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:50 pm, Mon, 26 January 26