ಬಳ್ಳಾರಿ, ಜುಲೈ 20: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿರುವುದನ್ನು ಸಿಎಂ ಸಿದ್ದರಾಮಯ್ಯ ಸದನದಲ್ಲೇ ಒಪ್ಪಿಕೊಂಡಿದ್ದಾರೆ. ಅಧಿಕಾರಿಗಳೇ ಹಗರಣ ಮಾಡಿದ್ದಾರೆ ಎನ್ನುತ್ತಿದ್ದಾರೆ. ಹಾಗಾದರೆ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡುವಂತೆ ಹೇಳಿದ್ದೇಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದರು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಹಾಗೂ ಬಸನಗೌಡ ದದ್ದಲ್ರನ್ನು ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಿಯಮವನ್ನು ಗಾಳಿಗೆ ತೋರಿಸಿ ಸಿಎಂ ಕುಟುಂಬಸ್ಥರು ನಿವೇಶನ ಪಡೆದಿದ್ದಾರೆ. ಹಗರಣವನ್ನು ಬೆಳಕಿಗೆ ತಂದ ಆರ್ಟಿಐ ಕಾರ್ಯಕರ್ತರನ್ನು ಜೈಲಿಗೆ ಹಾಕುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಆಡಳಿತ ನೋಡಿ ಆಶ್ಚರ್ಯ ಪಡುವಂತಾಗಿದೆ. ಅಷ್ಟು ಹಗರಣಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಸೋಮವಾರದ ಬಳಿಕ ಸದನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚಿಸುತ್ತೇವೆ ಎಂದು ವಿಜಯೇಂದ್ರ ಹೇಳಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅಹಿಂದ ಸಿಎಂ ಆಗಿರುವುದನ್ನು ಸಹಿಸದೇ ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಸರ್ಕಾರದ ಹಗರಣಗಳನ್ನ ಸಿಎಂ ಮುಚ್ಚಿ ಹಾಕಲು ನಿಂತಿದ್ದಾರೆ. ನಾಗೇಂದ್ರ, ದದ್ದಲ್ಗೆ ಹಗರಣದ ಎಸ್ಐಟಿ ತನಿಖೆಗೆ ನೋಟೀಸ್ ನೀಡಲಿಲ್ಲ. ಜಾರಿ ನಿರ್ದೇಶನಾಲಯ ತನಿಖೆಗೆ ಎಂಟ್ರಿ ಆದ ನಂತರ ಅದರ ಕಾವು ಸಿಎಂಗೆ ಗೊತ್ತಾಗುತ್ತಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.
ನಾಗೇಂದ್ರ ಬಾಯಿ ಬಿಟ್ಟರೆ ಹಗರಣಗಳ ಮೂಲ ಸಿಎಂ ಹಾಗೂ ಡಿಸಿಎಂ ಬುಡಕ್ಕೆ ಬರುತ್ತದೆ. ಸದನದ ನಡುವೆಯೂ ಪತ್ರಿಕಾಗೋಷ್ಠಿ ಮಾಡಿ ತಮ್ಮನ್ನು ತಾವೇ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳುತ್ತಾರೆ. ಈ ಹಗರಣಕ್ಕೂ ಹಣಕಾಸಿನ ಇಲಾಖೆ ಸಂಬಂಧ ಇಲ್ಲ ಎಂದು ಅವರು ಹೇಳುತ್ತಾರೆ. ಸಂಬಂಧ ಇದೆ ಅಂದರೆ ಸಿಎಂ ಬುಡಕ್ಕೇ ಬರುತ್ತದೆ. ಯಾವುದೇ ರಾಜ್ಯದ ಸಿಎಂ ಅಸಮರ್ಥ ಇದ್ದರೆ ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಅವರು ಟೀಕಿಸಿದರು.
ಇದನ್ನೂ ಓದಿ: ಮುಡಾ ಹಗರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು!
ಭ್ರಷ್ಟಾಚಾರ ಆಗಿದೆ. ಹಗರಣದ ದುಡ್ಡಲ್ಲಿ ಹೆಂಡ ಖರೀದಿ ಮಾಡಿದ್ದಾರೆ ಎಂದು ಇ.ಡಿ ಹೇಳಿದೆ. ಅಸ್ತಿತ್ವವೇ ಇಲ್ಲದ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ದೇಶದ ಇತಿಹಾಸಲ್ಲಿ ಈ ತರದ ಹಗರಣ ಆಗಿಲ್ಲ. ಅಂಥ ಹಗರಣ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ