ಜನರ ಸಮಸ್ಯೆ ಕೇಳೋದು ಬಿಟ್ಟು ಸಚಿವರ ಮೂಲಕ ಡಿಸಿಎಂ ವಿಚಾರ ಎತ್ತಿಸಿದ್ದೇ ಸಿದ್ದರಾಮಯ್ಯ: ಬಿವೈ ವಿಜಯೇಂದ್ರ

| Updated By: Ganapathi Sharma

Updated on: Jun 28, 2024 | 12:11 PM

ಕರ್ನಾಟಕ ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗಳನ್ನು ಕೇಳುವುದು ಬಿಟ್ಟು ಆಂತರಿಕ ಸಂಘರ್ಷದಲ್ಲೇ ಮುಳುಗಿಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ. ಜತೆಗೆ, ರಾಜ್ಯ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ಆಯೋಜಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಸದ್ಯ ಕಾಂಗ್ರೆಸ್​ನಲ್ಲಿ ಭುಗಿಲೆದ್ದಿರುವ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಚರ್ಚೆ ಬಗ್ಗೆಯೂ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಜನರ ಸಮಸ್ಯೆ ಕೇಳೋದು ಬಿಟ್ಟು ಸಚಿವರ ಮೂಲಕ ಡಿಸಿಎಂ ವಿಚಾರ ಎತ್ತಿಸಿದ್ದೇ ಸಿದ್ದರಾಮಯ್ಯ: ಬಿವೈ ವಿಜಯೇಂದ್ರ
ಬಿವೈ ವಿಜಯೇಂದ್ರ
Follow us on

ಬೆಂಗಳೂರು, ಜೂನ್ 28: ಮಖ್ಯಮಂತ್ರಿ ಸಿದ್ದರಾಮಯ್ಯನವರೇ ಸಚಿವರ ಮೂಲಕ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ವಿಚಾರ ಎತ್ತಿಸಿದ್ದಾರೆ. ಜನರ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳುವುದು ಬಿಟ್ಟು ಡಿಸಿಎಂ ಡಿಕೆ ಶಿವಕುಮಾರ್​​​ರನ್ನು ಬಲಿ ಕೊಡಲು ಸಚಿವರ ಮೂಲಕ ಡಿಸಿಎಂ ವಿಚಾರ ಎತ್ತಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬುಡಕ್ಕೆ ಬಂದಿದೆ ಅಲ್ವಾ? ಸಿದ್ದರಾಮಯ್ಯನವರು ಎಷ್ಟು ದಿನ ಸಿಎಂ ಆಗಿರುತ್ತಾರೋ ಗೊತ್ತಿಲ್ಲ. ಆದರೆ ರಾಜ್ಯದ ಅಭಿವೃದ್ಧಿ ಜೊತೆಗೆ ಜನರ ಸಮಸ್ಯೆ ಕೇಳಬೇಕಲ್ವಾ? ನಾವು ಇದನ್ನೇ ಕೇಳಿದರೆ ಸಿಎಂ ಉಡಾಫೆ ಉತ್ತರ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹಾದಿ ಬೀದಿಯಲ್ಲಿ ಸಿಎಂ, ಡಿಸಿಎಂ, ಸಚಿವರು ಹೊಡೆದಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ಮುಂದೆ ಈಗ ಇರುವುದು ಹೋರಾಟದ ದಿನಗಳು. ಮುಂದೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ನಾವು ಮಾಡುತ್ತೇವೆ ಎಂದು ಅವರು ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸಂಬಂಧ ಸತ್ಯನಾರಾಯಣ ಅವರು ಬಹಳ ಗಂಭೀರವಾದ ಆರೋಪ ಮಾಡಿದ್ದಾರೆ. ಆದರೆ ಇವತ್ತಿನವರೆಗೂ ನಾಗೇಂದ್ರರನ್ನು ಕರೆದು ವಿಚಾರಣೆ ಮಾಡುವ ಧೈರ್ಯವನ್ನು ಎಸ್​ಐಟಿ ತೋರಿಸಿಲ್ಲ. ಗುರುವಾರ ನಿನ್ನೆ ಕೋರ್ಟ್ ಕೂಡಾ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ವಿಜಯೇಂದ್ರ ಹೇಳಿದರು.

ಒಕ್ಕಲಿಗರ ಸಂಘದ ಸ್ವಾಮೀಜಿ ಹೇಳಿಕೆ ಕೊಟ್ಟಿದ್ದಕ್ಕೆ ಪ್ರತ್ಯುತ್ತರವಾಗಿ ಸಚಿವರು ಉತ್ತರ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಒಟ್ಟಿಗೆ ಕಾಣುವುದೇನು, ಇಬ್ಬರು ತಿಂಡಿ ತಿನ್ನಿಸುವುದೇನು, ಹೆಗಲ ಮೇಲೆ ಕೈ ಹಾಕೋದೇನು ಎಂಬಂತಿತ್ತು. ಆದರೆ ಈಗ ನೋಡಿ ಒಬ್ಬರಿಗೊಬ್ಬರು ಬುಡ ಕುಯ್ದುಕೊಳ್ಳುವ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ನಿಂತುಕೊಂಡು ಹೊಡೆದಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಬರುವ ದಿನಗಳಲ್ಲಿ ಇನ್ನೂ ಏನೇನು ಆಗುತ್ತದೋ ಕಾದು ನೋಡೋಣ ಎಂದು ಅವರು ಹೇಳಿದರು.

ಇದನ್ನೂ ಓದಿ: ಕರುನಾಡಿಗಾಗಿ ರಾಜಕೀಯ ಬಿಟ್ಟು ದಿಲ್ಲಿಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ನಾಯಕರು, ಕರ್ನಾಟಕಕ್ಕೆ ಏನೇನು ಕೇಳಿದ್ರು ಗೊತ್ತಾ?

ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಆಗುತ್ತಾರೆ ಎಂಬುದು ಮುಖ್ಯ ಅಲ್ಲ. ಯಾರೇ ಅಭ್ಯರ್ಥಿ ಆದರೂ ಜೆಡಿಎಸ್, ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸಿ ಗೆಲ್ಲುತ್ತೇವೆ. ಬೆಂಗಳೂರು ಗ್ರಾಮಾಂತರದಲ್ಲಿ ಏನು ಫಲಿತಾಂಶ ಬಂದಿದೆ ಎಂಬುದು ಗೊತ್ತಿದೆ. ಚನ್ನಪಟ್ಟಣ, ಶಿಗ್ಗಾಂವ್, ಸಂಡೂರು ಎಲ್ಲವನ್ನೂ ಗೆಲ್ಲುತ್ತೇವೆ. ಶೀಘ್ರದಲ್ಲೇ ಕೋರ್ ಕಮಿಟಿ ಸಭೆ ಕರೆಯುತ್ತಿದ್ದೇನೆ. ಅಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ