ಬೆಂಗಳೂರು, ಜೂನ್ 29: ನಂದಿನಿ ಹಾಲಿನ ದರ ಏರಿಕೆ ನಿರ್ಧಾರ ಖಂಡಿಸಿ ರಾಜ್ಯದ ಹಲವೆಡೆ ಬಿಜೆಪಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು. ರಸ್ತೆ ಮೇಲೆ ಹಸುಗಳನ್ನು ತಂದು, ರಸ್ತೆ ಮೇಲೆಯೇ ಹಾಲು ಕಾಯಿಸಿ, ಹೆಗಲ ಮೇಲೆ ನೇಗಿಲು-ಗುದ್ದಲಿ ಹೊತ್ಕೊಂಡು ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಹಸುಗಳನ್ನು ಕರೆತಂದು ಪ್ರತಿಭಟಿಸಿದರು. ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು. ಕೈಯಲ್ಲಿ ಹಾಲಿನ ಪ್ಯಾಕೆಟ್ ಹಿಡಿದು ಬಂದಿದ್ದ ಪ್ರತಿಭಟನಾಕಾರರು, ರಸ್ತೆ ತಡೆದು ಅಲ್ಲಿಯೇ ಹಾಲನ್ನ ಕಾಯಿಸಿದರು. ಆದರೆ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿ ಬೆಂಗಳೂರಿನ ಬಿಜೆಪಿ ಶಾಸಕರು ಗೈರಾ ಎದ್ದು ಕಾಣಿಸಿತು.
ಇದೇ ವೇಳೆ ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಅತ್ತ ಮಂಡ್ಯದಲ್ಲೂ ಬಿಜೆಪಿ ರೈತ ಮೋರ್ಚಾದಿಂದ ಸಂಜಯ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು. ಹೆಗಲ ಮೇಲೆ ನೇಗಿಲು-ಗುದ್ದಲಿ ಹೊತ್ಕೊಂಡಿದ್ದ ಬಿಜೆಪಿ ಕಾರ್ಯಕರ್ತರು ಹಸುಗಳನ್ನ ಬಳಸಿ ರಸ್ತೆ ತಡೆ ನಡೆಸಿದರು. ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು ಹಳೇ ಬೆಂಗಳೂರು-ಮೈಸೂರು ಹೆದ್ದಾರಿ ತಡೆದರು.
ತುಮಕೂರಿನಲ್ಲೂ ಬಿಜೆಪಿ ವಿಭಿನ್ನವಾಗಿ ಪ್ರತಿಭಟಿಸಿತು. ಡಿಸಿ ಕಚೇರಿ ಬಳಿ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಗಣಿಜಿಲ್ಲೆ ಬಳ್ಳಾರಿಯಲ್ಲೂ ಬಿಜೆಪಿ ರೈತ ಮೋರ್ಚಾ ಹಾಲಿನ ದರ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಪ್ರತಿಭಟಿಸಿತು. ರೈತರನ್ನ ಪಾತಾಳಕ್ಕೆ ತಳ್ಳಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ, ಧಿಕ್ಕಾರ ಎಂದು ಘೋಷಣೆ ಕೂಗಲಾಯಿತು. ಹಸುಗಳ ಜತೆಗೆ ಬಕೆಟ್‌ಗಳನ್ನ ಹಿಡಿದುಕೊಂಡು ಪ್ರತಿಭಟನಾಕಾರರು ಕಿಡಿಕಾರಿದಾರು.
ಇದನ್ನೂ ಓದಿ: ನಂದಿನಿ ಹಾಲಿನ ದರ ಹೆಚ್ಚಳದಿಂದ ದೂದ್ ಪೇಡ, ಧಾರವಾಡ ಪೇಡ ದರ ಏರಿಕೆ; ಜೇಬು ಸುಡಲಿದೆ ಐಸ್ ಕ್ರೀಂ, ಮಿಲ್ಕ್ ಶೇಕ್
ಹಾಲು ದರ ಏರಿಕೆ, ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡದಿರುವುದನ್ನು ಖಂಡಿಸಿ ಶಿವಮೊಗ್ಗದಲ್ಲೂ ಬಿಜೆಪಿ ಪ್ರತಿಭಟಿಸಿದೆ. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಯತ್ನಿಸಿದರು. ಆದರೆ, ಕಚೇರಿ ಮುಂಭಾಗವೇ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು-ಪೊಲೀಸರ ನಡುವೆ ವಾಗ್ವಾದ ನಡೆಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ