
ನವದೆಹಲಿ, ಜೂನ್ 06): ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ (BJP yogesh gowda Murder Case) ಬಂಧಿತರಾಗಿ ಜಾಮೀನಿನ ಮೇಲೆ ಆಚೆ ಬಂದಿರುವ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ(Congress MLA Vinay Kulkarni) ಮತ್ತೆ ಸಂಕಷ್ಟ ಎದುರಾಗಿದೆ. ಸಿಬಿಐ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂಕೋರ್ಟ್ (supreme court) ವಿನಯ್ ಕುಲಕರ್ಣಿ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ ಒಂದು ವಾರದಲ್ಲಿ ಕೋರ್ಟ್ ಮುಂದೆ ಶರಣಾಗಲು ಆದೇಶದಲ್ಲಿ ಸೂಚಿಸಿದೆ. ಈ ಮೂಲಕ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲು ಭೀತಿ ಶುರುವಾಗಿದೆ.
ಬಿಜೆಪಿ ನಾಯಕ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ ಕುಲಕರ್ಣಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ 2021ರ ಆಗಸ್ಟ್ 11ರಂದು ಸುಪ್ರೀಂಕೋರ್ಟ್ ವಿನಯ್ ಕುಲಕರ್ಣಿಗೆ ಜಾಮೀನು ನೀಡಿತ್ತು. ಆದ್ರೆ, ಈ ಜಾಮೀನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಸಾಕ್ಷಿಗಳಿಗೆ 1 ಲಕ್ಷ ಹಣದ ಆಮಿಷ ಒಡ್ಡಿರುವುದರಿಂದ ಜಾಮೀನು ರದ್ದಿಗೆ ಮನವಿ ಮಾಡಿತ್ತು. ಇದೀಗ ಸಿಬಿಐ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್, ವಿನಯ್ ಕುಲಕರ್ಣಿಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿರುವ ತಮ್ಮ ಒಡೆತನದ ಜಿಮ್ನಲ್ಲಿಯೇ ಜೂನ್ 15, 2016ರಲ್ಲಿ ಯೋಗೇಶ್ ಗೌಡ ಅವರ ಕೊಲೆ ನಡೆದಿತ್ತು. ಆಗ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಪ್ರಕರಣ ಸಂಬಂಧ ನವೆಂಬರ್ 5, 2020ರಂದು ವಿನಯ್ ಕುಲಕರ್ಣಿ ಅವರನ್ನು ಬಂಧಿಸಲಾಗಿತ್ತು. ಕೊಲೆ ಸಂಬಂಧ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಬಂಧನದ ಬಳಿಕ ಹಲವು ಬಾರಿ ವಿನಯ್ ಕುಲಕರ್ಣಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಧಾರವಾಡ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಬಳಿಕ ಪ್ರಕರಣವನ್ನು ಜನಪ್ರತಿನಿಧಿಗಳ ಕೋರ್ಟ್ಗೆ ವರ್ಗಾಯಿಸುವಂತೆ ವಿನಯ್ ಮನವಿ ಮಾಡಿದ್ದರು.
ಅಲ್ಲಿಯೂ ಜಾಮೀನು ಅರ್ಜಿ ವಜಾ ಅಗಿತ್ತು. ಕೊನೆಗೆ ಸುಪ್ರೀಂಕೋರ್ಟ್ನಿಂದ ಆಗಸ್ಟ್ 11ರಂದು ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಧಾರವಾಡಕ್ಕೆ ಬರಬಾರದು ಎಂದು ಷರತ್ತುವಿಧಿಸಿ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು.
ಕೊಲೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದರೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಿಜೆಪಿ ಇದನ್ನು ಒಂದು ವಿಷಯವನ್ನಾಗಿ ಮಾಡಿಕೊಂಡು ತನ್ನ ಪ್ರತಿಭಟನೆ ನಡೆಸಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ರ್ಯಾಲಿಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿನಯ್ ಕುಲಕರ್ಣಿಯನ್ನು ಜೈಲಿಗೆ ಕಳುಹಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ನಂತರ, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು, ಮತ್ತು ವಿನಯ್ ಕುಲಕರ್ಣಿಯನ್ನು ಬಂಧಿಸಲಾಗಿತ್ತು. ಅವರು 9 ತಿಂಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆದರು ಮತ್ತು ಅಂತಿಮವಾಗಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದುಕೊಂಡು ಆಚೆ ಬಂದಿದ್ದರು.
ಕಳೆದ ವರ್ಷ, ಕರ್ನಾಟಕ ಹೈಕೋರ್ಟ್ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣದ ವಿಚಾರಣೆ ಮತ್ತು ಸಾಕ್ಷಿಗಳ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ನಿರ್ದೇಶಿಸಿತ್ತು. ಸಿದ್ದರಾಮಯ್ಯ ಅವರಿಗೆ ಆಪ್ತರು ಎಂದು ಪರಿಗಣಿಸಲ್ಪಟ್ಟ ಕುಲಕರ್ಣಿ, 2023 ರ ರಾಜ್ಯ ಚುನಾವಣೆಯಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು, ನ್ಯಾಯಾಲಯವು ಅವರ ಕ್ಷೇತ್ರ ಪ್ರವೇಶವನ್ನು ನಿಷೇಧಿಸಿತ್ತು ಮತ್ತು ಅವರ ಪತ್ನಿ ಮತ್ತು ಮಗಳು ಅವರ ಪರವಾಗಿ ಪ್ರಚಾರ ಮಾಡಿದ್ದರು.