ಬೆಂಗಳೂರು, ಮಾರ್ಚ್.26: ಬೆಂಗಳೂರಿನ ಜಲಕ್ಷಾಮದ ((Bengaluru) ಮಧ್ಯೆ ಇರೋ ನೀರಿನ ಮಿತಬಳಕೆಗೆ ಜಲಮಂಡಳಿ (BWSSB) ಕೆಲ ಕ್ರಮಗಳನ್ನ ತೆಗೆದುಕೊಳ್ಳೋಕೆ ಮುಂದಾಗಿದೆ. ಈಗಾಗಲೇ ಕುಡಿಯೋ ನೀರು, ಬೋರ್ ವೆಲ್ ನೀರನ್ನ ಅನ್ಯ ಉದ್ದೇಶಕ್ಕೆ ಬಳಸಿದ್ರೆ ದಂಡ ಹಾಕ್ತೀವೆ ಅಂತಾ ಎಚ್ಚರಿಕೆ ನೀಡಿದ್ದ ಜಲಮಂಡಳಿ, ಇದೀಗ ವಾಹನ ತೊಳೆಯೋದಕ್ಕೆ, ಗಾರ್ಡನ್ ಗೆ ಕುಡಿಯೋ ನೀರು ಬಳಸುವವರಿಗೆ ದಂಡಾಸ್ತ್ರ ಪ್ರಯೋಗಿಸಿದೆ. ನೀರನ್ನ ವ್ಯರ್ಥ ಮಾಡಿದ್ರೆ 5 ಸಾವಿರ ದಂಡ ಅಂತಾ ಆದೇಶಿಸಿದ್ದ ಜಲಮಂಡಳಿ, ನೀರಿನ ದುರ್ಬಳಕೆ ಮಾಡಿದವರಿಂದ ಬರೋಬ್ಬರಿ 1 ಲಕ್ಷದ 10 ಸಾವಿರ ದಂಡ ವಸೂಲಿ ಮಾಡಿದೆ.
ಇನ್ನು ಹೋಳಿ ಆಚರಣೆ ವೇಳೆ ನೀರನ್ನ ವ್ಯರ್ಥ ಮಾಡಬೇಡಿ ಅಂತಾ ಮನವಿ ಮಾಡಿದ್ದ ಜಲಮಂಡಳಿಯ ಆದೇಶವನ್ನ ಕೆಲ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಉಲ್ಲಂಘಿಸಿ ಹೋಳಿ ಆಚರಿಸಿವೆ. ರೈನ್ ಡ್ಯಾನ್ಸ್ , ನೀರಿನ ವ್ಯರ್ಥ ಮಾಡದಂತೆ ಆದೇಶಿಸಿದ್ದ ಜಲಮಂಡಳಿಗೆ ಕ್ಯಾರೇ ಎನ್ನದ ವರ್ತೂರಿನ ಖಾಸಗಿ ರೆಸಾರ್ಟ್ ನಲ್ಲಿ ರೇನ್ ಡ್ಯಾನ್ಸ್ ಆಯೋಜಿಸಿದ್ರೆ, ಅತ್ತ ಚಿಕ್ಕನಾಯಕನಹಳ್ಳಿಯ ಅಪಾರ್ಟ್ ಮೆಂಟ್ ನಲ್ಲೂ ಅಸೋಯೇಷನ್ ನಿಂದ ನೀರು ವ್ಯರ್ಥ ಮಾಡಿ ಹೋಳಿ ಆಚರಿಸಲಾಗಿದೆ.
ಸದ್ಯ ನೀರನ ಅಭಾವ ಎದುರಾಗಿರೋ ಹೊತ್ತಲ್ಲೇ ನೀರನ್ನ ವ್ಯರ್ಥ ಮಾಡಬೇಡಿ ಅಂದ್ರು ಕೂಡ ಕೆಲ ಜಾಗಗಳಲ್ಲಿ ನೀರಿನ ದುರ್ಬಳಕೆ ಮಾಡಲಾಗಿದೆ. ಇತ್ತ ಹೋಳಿ ಆಚರಣೆ ನೆಪದಲ್ಲಿ ನೀರು ವ್ಯರ್ಥ ಮಾಡಿದವರಿಗೆ ಶಾಕ್ ನೀಡಿರೋ ಜಲಮಂಡಳಿ, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೊಟ್ಟಿದೆ.
ಇದನ್ನೂ ಓದಿ: ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ರಕ್ಷಿಸಲು ಎಐ, ಐಒಟಿ! ಜಲಮಂಡಳಿ ಹೊಸ ಯೋಜನೆ
ಕುಡಿಯಲು ನೀರಿಲ್ಲದ ಎಷ್ಟೋ ಜನರು ಸಾವಿರಾರು ರೂ ಹಣ ಕೊಟ್ಟು ಟ್ಯಾಂಕರ್ ಗಳನ್ನ ಖರೀದಿ ಮಾಡ್ತಿದ್ದಾರೆ. ಈ ಮಧ್ಯೆ ನೀರಿನ ಹಾಹಾಕಾರ ಇರುವ ಬಗ್ಗೆ ಮಾಹಿತಿ ಇದ್ರು ಕೂಡ ಅಪಾರ್ಟ್ಮೆಂಟ್ ಮಾಲೀಕರು ಹಾಗೂ ರೆಸಾರ್ಟ್ ಮಾಲೀಕರು ಹಣದಾಸೆಗೆ ರೈನ್ಸ್ ಡ್ಯಾನ್ಸ್ ಹಾಗೂ ಸ್ವಿಮ್ಮಿಂಗ್ ಡ್ಯಾನ್ಸ್ ಮಾಡಿರುವುದು ವಿಷಾದನೀಯ ಎಂದು ನಿವಾಸಿಯೊಬ್ಬರು ಅಸಮಾಧಾನ ಹೊರ ಹಾಕಿದರು.
ಒಟ್ಟಿನಲ್ಲಿ ಒಂದೆಡೆ ನಗರದ ಜಲದಾಹ ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋ ಹೊತ್ತಲ್ಲೇ, ಅತ್ತ ಜನರು ಮಾತ್ರ ಇರೋ ನೀರನ್ನ ಉಳಿಸಿಕೊಳ್ಳದೇ ವ್ಯರ್ಥ ಮಾಡಿರೋದು ನಿಜಕ್ಕೂ ದುರದೃಷ್ಟಕರ. ಸದ್ಯ ನೀರಿನ ಮಿತಬಳಕೆಗೆ ಜಲಮಂಡಳಿ ಪಣತೊಟ್ಟಿದ್ದು, ಜನರು ಕೂಡ ಇರೋ ನೀರನ್ನ ಹಿತಮಿತವಾಗಿ ಬಳಸಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ