ಬೋರ್ಡ್ ಪರೀಕ್ಷೆಗಳು ಜನವರಿ- ಫೆಬ್ರವರಿ ತಿಂಗಳಲ್ಲಿ ನಡೆಯುವುದಿಲ್ಲ: ಕೇಂದ್ರ ಸಚಿವ ರಮೇಶ್ ಪೋಕ್ರಿಯಾಲ್
JEE 2020 ಪರೀಕ್ಷೆಯನ್ನು ಆನ್ಲೈನ್ನಲ್ಲೇ ನಡೆಸಲಾಗಿತ್ತು. ಹೀಗಾಗಿ, ಎಲ್ಲಾ ಪರೀಕ್ಷೆಗಳನ್ನು ಆನ್ಲೈನ್ನಲ್ಲಿ ಮಾಡಿ ಎನ್ನುವ ಆಗ್ರಹ ಕೇಳಿ ಬಂದಿತ್ತು. ಇದಕ್ಕೂ ರಮೇಶ್ ಪೋಕ್ರಿಯಾಲ್ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿ: ಯಾವುದೇ ಬೋರ್ಡ್ ಪರೀಕ್ಷೆಗಳು ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ನಡೆಯುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಸ್ಪಷ್ಟಪಡಿಸಿದ್ದಾರೆ.
ಶಿಕ್ಷಕರ ಜೊತೆ ಆನ್ಲೈನ್ ಸಂವಾದ ನಡೆಸಿದ ರಮೇಶ್ ಪೋಕ್ರಿಯಾಲ್ ಈ ಸ್ಪಷ್ಟನೆ ನೀಡಿದ್ದಾರೆ. 10 ಹಾಗೂ 12ನೇ ತರಗತಿ ಸಿಬಿಎಸ್ಇ ಬೋರ್ಡ್ ಪರೀಕ್ಷೆ ಯಾವುದೇ ಕಾರಣಕ್ಕೂ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ನಡೆಯುವುದಿಲ್ಲ. ಪರೀಕ್ಷೆ ಯಾವಾಗ ನಡೆಸಬೇಕು ಎನ್ನುವ ಬಗ್ಗೆ ನಂತರದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ರಮೇಶ್ ಹೇಳಿದ್ದಾರೆ.
JEE 2020 ಪರೀಕ್ಷೆಯನ್ನು ಆನ್ಲೈನ್ನಲ್ಲೇ ನಡೆಸಲಾಗಿತ್ತು. ಹೀಗಾಗಿ, ಎಲ್ಲಾ ಪರೀಕ್ಷೆಗಳನ್ನು ಆನ್ಲೈನ್ನಲ್ಲಿ ಮಾಡಿ ಎನ್ನುವ ಆಗ್ರಹ ಕೇಳಿ ಬಂದಿತ್ತು. ಇದಕ್ಕೂ ಉತ್ತರಿಸಿರುವ ಅವರು, ಯಾವುದೇ ಕಾರಣಕ್ಕೂ 10 ಹಾಗೂ 12ನೇ ತರಗತಿ ಪರೀಕ್ಷೆಗಳು ಆನ್ಲೈನ್ನಲ್ಲಿ ನಡೆಯುವುದಿಲ್ಲ. ಎಲ್ಲ ಬೋರ್ಡ್ ಪರೀಕ್ಷೆಗಳು ಲಿಖಿತ ರೂಪದಲ್ಲೇ ನಡೆಯಲಿದೆ ಎಂದರು.
ಈ ಮೊದಲು ವಿದ್ಯಾರ್ಥಿಗಳ ಜೊತೆ ಆನ್ಲೈನ್ ಸಂವಾದ ನಡೆಸಿದ್ದ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. 2021ರ ನೀಟ್ ಪರೀಕ್ಷೆ ರದ್ದಾಗಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಸರ್ಕಾರ ಆ ರೀತಿ ನಿರ್ಧಾರ ಕೈಗೊಳ್ಳುತ್ತಿಲ್ಲ. ಮುಂದಿನ ವರ್ಷ ನೀಟ್ ಪರೀಕ್ಷೆ ನಡೆಯುತ್ತದೆ. ಇದನ್ನು ರದ್ದು ಮಾಡಿದರೆ ವಿದ್ಯಾರ್ಥಿ ಸಮುದಾಯ ಹಾಗೂ ದೇಶಕ್ಕೆ ಭಾರೀ ನಷ್ಟ ಉಂಟಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.