AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಖುಷಿ: ಜೇನು ಗೂಡಿಗೆ ಕೈ ಹಾಕಿ ಲಕ್ಷಾಂತರ ರೂಪಾಯಿ ಆದಾಯ ಪಡೆಯುವ ಕೋಲಾರದ ಯುವಕ..

ಐಟಿಐ ಮುಗಿಸಿ ಕೆಲಸಕ್ಕೆ ಅಲೆದು ಸುಸ್ತಾದ ವಿನಯ್ ಕಳೆದ 8 ವರ್ಷಗಳಿಂದ ಜೇನು ಕೃಷಿಯಲ್ಲಿ ತೊಡಗಿದ್ದಾನೆ. ಮೊದಲಿಗೆ ಕಾಡಿನಿಂದ ಜೇನು ಸಂಗ್ರಹಿಸಿ ನಂತರ ಬಾಕ್ಸ್​ಗಳ ಮೂಲಕ ಸಾಕಣಿಕೆ ಮಾಡುತ್ತಿದ್ದ. ಈಗ ಕೆ.ಜಿಗಟ್ಟಲೆ ಜೇನು ಉತ್ಪಾದಿಸಿ, ನೂರಾರು ಕೆ.ಜಿ ಜೇನುತುಪ್ಪವನ್ನು ಮಾರಾಟ ಮಾಡಿ ವಾರ್ಷಿಕ 6 ರಿಂದ 7 ಲಕ್ಷ ಆದಾಯಗಳಿಸಿ ಯಶಸ್ಸು ಕಂಡುಕೊಂಡಿದ್ದಾನೆ.

ಕೃಷಿ ಖುಷಿ: ಜೇನು ಗೂಡಿಗೆ ಕೈ ಹಾಕಿ ಲಕ್ಷಾಂತರ ರೂಪಾಯಿ ಆದಾಯ ಪಡೆಯುವ ಕೋಲಾರದ ಯುವಕ..
ಜೇನು ಕೃಷಿಯಲ್ಲಿ ಯಶಸ್ಸು ಕಂಡ ಕೋಲಾರದ ಯುವಕ ವಿನಯ್​
Skanda
| Edited By: |

Updated on: Dec 23, 2020 | 6:35 AM

Share

ಕೋಲಾರ: ಇತ್ತೀಚಿನ ದಿನಗಳಲ್ಲಿ ಜೇನು ಕೃಷಿ ಎಂದರೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕ್ಷೇತ್ರ ಎನ್ನುವಂತಾಗಿದೆ. ಯುವಕರಂತೂ ಇತ್ತ ಮುಖಮಾಡುವುದೇ ಇಲ್ಲ ಎಂಬ ಆರೋಪಗಳೂ ಅಲ್ಲಲ್ಲಿ ಕೇಳುಬರುತ್ತದೆ. ಆದರೆ, ಇಲ್ಲೊಬ್ಬ ಯುವಕ ನಿರುದ್ಯೋಗದಿಂದ ಬೇಸತ್ತು ಏನಾದರೂ ಮಾಡಲೇಬೇಕೆಂದ ಜೇನು ಗೂಡಿಗೆ ಕೈ ಹಾಕಿದ್ದಾನೆ. ಕೆಲವೇ ದಿನಗಳಲ್ಲಿ ಜೇನನ್ನೇ ನೆಚ್ಚಿಕೊಂಡು ಅದನ್ನೇ ಆದಾಯದ ಮೂಲವಾಗಿ ಜೀವನ ಕಟ್ಟಿಕೊಂಡಿದ್ದಾನೆ.

ಕೋಲಾರ ತಾಲ್ಲೂಕಿನ ತೊಂಡಾಲ ಗ್ರಾಮದ ಯುವಕ ವಿನಯ್​ ಜೇನಿನ ಸುಗ್ಗಿ ಮಾಡುವ ಮೂಲಕ ಕೆ.ಜಿಗಟ್ಟಲೇ ನೈಸರ್ಗಿಕ ಜೇನು ತೆಗೆಯುತ್ತಿದ್ದಾನೆ. ಜೇನನ್ನೇ ನಂಬಿ ಜೀವನ ಕಟ್ಟಿಕೊಂಡು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾನೆ. ಅಷ್ಟೇ ಅಲ್ಲದೇ ಜೇನಿನ ಬಗ್ಗೆ ಅಧ್ಯಯನ ಮಾಡಿ ಸಾಕಷ್ಟು ಯುವ ರೈತರಿಗೆ ಮಾರ್ಗದರ್ಶನ ನೀಡುವ ಮಾದರಿ ಜೇನು ಕೃಷಿಕನಾಗಿದ್ದಾನೆ.

ಇತ್ತೀಚೆಗಂತೂ ನೈಸರ್ಗಿಕ ಜೇನಿಗೆ ಬೆಲೆ ಹಾಗೂ ಬೇಡಿಕೆ ಅತ್ಯಧಿಕವಾಗಿದೆ. ಜೇನುತುಪ್ಪದಲ್ಲಿ ಆಯುರ್ವೇದ ಗುಣಗಳಿರುವುದರಿಂದ ಆರೋಗ್ಯಕ್ಕೆ ತುಂಬಾ ಸಹಕಾರಿ. ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಜೇನುತುಪ್ಪದ ಹಾವಳಿ ಹೆಚ್ಚುತ್ತಿರುವುದರಿಂದ ಜನರು ನೈಸರ್ಗಿಕ ಜೇನು ಬಳಸಲು ಇಷ್ಟಪಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಜೇನಿಗೆ ಬೇಡಿಕೆ ಇರುವುದನ್ನ ಮನಗಂಡ ವಿನಯ್, ಸ್ಥಳೀಯ ರೈತರ ಸಹಾಯ ದೊಂದಿಗೆ ಕೃಷಿ ವಿಜ್ಞಾನಿಗಳ ಸಲಹೆ ಪಡೆದು 20 ಕ್ಕೂ ಹೆಚ್ಚು ಜೇನು ಪೆಟ್ಟಿಗೆಗೆಳ ಮೂಲಕ, 50 ಕ್ಕೂ ಅಧಿಕ ಜೇನು ಕುಟುಂಬಗಳನ್ನ ಪೋಷಣೆ ಮಾಡುತ್ತಿದ್ದಾನೆ.

ಐಟಿಐ ಮುಗಿಸಿ ಕೆಲಸಕ್ಕೆ ಅಲೆದು ಸುಸ್ತಾದ ವಿನಯ್ ಕಳೆದ 8 ವರ್ಷಗಳಿಂದ ಜೇನು ಕೃಷಿಯಲ್ಲಿ ತೊಡಗಿದ್ದಾನೆ. ಮೊದಲಿಗೆ ಕಾಡಿನಿಂದ ಜೇನು ಸಂಗ್ರಹಿಸಿ ನಂತರ ಬಾಕ್ಸ್​ಗಳ ಮೂಲಕ ಸಾಕಣಿಕೆ ಮಾಡುತ್ತಿದ್ದ. ಈಗ ಕೆ.ಜಿಗಟ್ಟಲೆ ಜೇನು ಉತ್ಪಾದಿಸಿ, ನೂರಾರು ಕೆ.ಜಿ ಜೇನುತುಪ್ಪವನ್ನು ಮಾರಾಟ ಮಾಡಿ ವಾರ್ಷಿಕ 6 ರಿಂದ 7 ಲಕ್ಷ ಆದಾಯಗಳಿಸಿ ಯಶಸ್ಸು ಕಂಡುಕೊಂಡಿದ್ದಾನೆ.

ಅಂದಹಾಗೆ, ಜೇನು ಸಾಕಾಣಿಕೆ ಸುಲಭದ ಕೆಲಸವೇನಲ್ಲ. ಜೇನುಹುಳು ಸಾಕಾಣಿಕೆಗೆ ಹಲವು ಸವಾಲುಗಳಿವೆ. ಹಾಗಾಗಿ, ಸುಲಭವಾಗಿ ಜೇನು ಸಂಗ್ರಹಿಸುವಂತಹ ಹುತ್ತ ಜೇನು, ತುಡುವೆ, ನಸರಿ, ಕೋಲುಜೇನು ಸಾಕಾಣಿಕೆ ಮಾಡಿ ಅದರಿಂದ ಜೇನು ಉತ್ಪತ್ತಿ ಮಾಡುವುದನ್ನು ವಿನಯ್​ ಕಂಡುಕೊಂಡಿದ್ದಾನೆ.

ಜೇನು ಕೃಷಿಗೂ ಮುನ್ನ ಅದಕ್ಕೆ ಬೇಕಾದ ವಾತಾವರಣ ಸೃಷ್ಠಿ ಮಾಡಬೇಕು, ಸುತ್ತಮುತ್ತ ಹೂ ಬಿಡುವ ಮರಗಳು, ಮಕರಂದ ದೊರೆಯುವ ಬೆಳೆಗಳಿದ್ದರೆ ಜೇನು ಸಂಗ್ರಹಿಸುವುದು ಸುಲಭ. ಮಾಲಿನ್ಯ ರಹಿತ ವಾತಾವರಣ, ಗಾಳಿ, ಮಳೆ ಬಿಸಿಲಿನಿಂದ ರಕ್ಷಣೆಯ ಜೊತೆಗೆ ಜೇನನ್ನು ಇತರೆ ಕೀಟಗಳಿಂದಲೂ ರಕ್ಷಣೆ ಮಾಡಬೇಕು. ಹಾಗಾಗಿ ವಾರಕ್ಕೊಮ್ಮೆ ಪರೀಕ್ಷೆ ಮಾಡುತ್ತಿರಬೇಕು. ವಿನಯ್​ ಕೇವಲ ಜೇನು ಕೃಷಿ ಮಾಡದೆ ಅದರ ಬಗ್ಗೆ ಸಾಕಷ್ಟು ಅಧ್ಯಯನ ಕೂಡಾ ಮಾಡಿರುವ ಕಾರಣ ಈ ಕೆಲಸಗಳು ಸುಲಭವಾಗುತ್ತಿದೆ.

ವಿನಯ್ ಶುರುಮಾಡಿದ ಜೇನು ಕೃಷಿಗೆ ಮನಸೋತ ಸಾಕಷ್ಟು ಜನ ಪ್ರಗತಿಪರ ರೈತರು, ಆಸಕ್ತರು ಆತ ಅನುಸರಿಸುತ್ತಿರುವ ಪದ್ಧತಿಯನ್ನು ವೀಕ್ಷಣೆ ಮಾಡುತ್ತಿದ್ದಾರೆ. ಆತನಲ್ಲಿ ಜೇನು ತುಪ್ಪಕ್ಕೆ ಮಾತ್ರವಲ್ಲದೇ ಹುಳಕ್ಕೂ ಬೇಡಿಕೆ ಇದೆ. ಒಂದು ಜೇನು ಹುಳದ ಕುಟುಂಬಕ್ಕೆ ಇಂತಿಷ್ಟು ಬೆಲೆ ಎಂದು ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ.

ಇದೊಂದು ಮಾದರಿ ಪ್ರಯೋಗವಾಗಿದ್ದು, ಇದನ್ನ ಇತರೆ ರೈತರು ಕೂಡ ಅಳವಡಿಸಿಕೊಂಡರೆ ಹೆಚ್ಚೆಚ್ಚು ಲಾಭ ಪಡೆಯಬಹುದು ಎಂಬುದು ಸ್ಥಳೀಯ ರೈತರ ಅಭಿಪ್ರಾಯ. ಯಾರ ನೆರವಿಲ್ಲದೆ, ಕೃಷಿ ತೋಟಗಾರಿಕಾ ಇಲಾಖೆಗಳು ಕೂಡ ನಾಚುವಂತೆ ಜೇನು ಕೃಷಿ ಮಾಡುವ ಮೂಲಕ ವಿನಯ್ ಮಾದರಿಯಾಗಿದ್ದಾನೆ. ಆಧುನಿಕ ಯುಗದಲ್ಲಿ ಜೇನು ಸಾಕಾಣಿಕೆ ಒಂದು ಕೃಷಿಯೇತರ ಚಟುವಟಿಕೆಯಾಗಿದ್ದು, ಕೃಷಿಯ ಜೊತೆಗೆ ಜೇನು ರೈತನ ಖುಷಿ ಜೀವನಕ್ಕೆ ದಾರಿಯಾಗಿದೆ ಅನ್ನೋದು ನಿಜಕ್ಕೂ ಸಂತಸದ ಸಂಗತಿ.

ಬೇಡಪ್ಪಾ ಬೇಡ ಜೇನುತುಪ್ಪ..! ಈ ಪ್ರತಿಷ್ಠಿತ ಕಂಪನಿಗಳ ‘ಪ್ಯೂರ್ ಹನಿ’ ನೀವು ಬಳಸುತ್ತಿದ್ದರೆ ಎಚ್ಚರ ಎಚ್ಚರಾ!