ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ: ಗಾಯಾಳು ಆರೋಗ್ಯ ವಿಚಾರಿಸಿದ ರಾಜ್ಯಪಾಲ, ಬಿಜೆಪಿ ನಾಯಕರು

ಇಂದಿರಾ ನಗರ ಮತ್ತು ವೈಟ್​ಫೀಲ್ಡ್​ ನಡುವಿನ ಕುಂದಲಹಳ್ಳಿಯ ಬ್ರೂಕ್ ಫೀಲ್ಡ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ನಗರದ ಪ್ರಮುಖ ಹೋಟೆಲ್​​ನಲ್ಲಿ ನಡೆದಿರುವ ಬಾಂಬ್​ ಬ್ಲಾಸ್ಟ್​​​​​​​​​​​, ಇಡೀ ಏರಿಯಾವನ್ನೇ ಆತಂಕಕ್ಕೆ ದೂಡಿದೆ. ಘಟನೆ ಬಳಿಕ ಬ್ರೂಕ್​ಫೀಲ್ಡ್​ ಆಸ್ಪತ್ರೆಗೆ ಬಿಜೆಪಿ ನಾಯಕರಾದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ವಿಪಕ್ಷ ನಾಯಕ ಆರ್.ಅಶೋಕ್​ ಭೇಟಿ ನೀಡಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ: ಗಾಯಾಳು ಆರೋಗ್ಯ ವಿಚಾರಿಸಿದ ರಾಜ್ಯಪಾಲ, ಬಿಜೆಪಿ ನಾಯಕರು
ಗಾಯಾಳುಗಳ ಆರೋಗ್ಯ ವಿಚಾರಿಸುತ್ತಿರುವ ನಾಯಕರು
Edited By:

Updated on: Mar 01, 2024 | 10:23 PM

ಬೆಂಗಳೂರು, ಮಾರ್ಚ್​ 1: ಇಂದಿರಾ ನಗರ ಮತ್ತು ವೈಟ್​ಫೀಲ್ಡ್​ ನಡುವಿನ ಕುಂದಲಹಳ್ಳಿಯ ಬ್ರೂಕ್ ಫೀಲ್ಡ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆ (Rameswaram Cafe) ಯಲ್ಲಿ ಬಾಂಬ್ ಸ್ಫೋಟವಾಗಿದೆ. ನಗರದ ಪ್ರಮುಖ ಹೋಟೆಲ್​​ನಲ್ಲಿ ನಡೆದಿರುವ ಬಾಂಬ್​ ಬ್ಲಾಸ್ಟ್​​​​​​​​​​​, ಇಡೀ ಏರಿಯಾವನ್ನೇ ಆತಂಕಕ್ಕೆ ದೂಡಿದೆ. ಸದ್ಯ ರಾಮೇಶ್ವರಂ ಕೆಫೆ ಬ್ಲಾಸ್ಟ್​​ ಪ್ರಕರಣದ ಬೆನ್ನತ್ತಿರುವ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆ ಬಳಿಕ ಬ್ರೂಕ್​ಫೀಲ್ಡ್​ ಆಸ್ಪತ್ರೆಗೆ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್ ಸೇರಿದಂತೆ ಬಿಜೆಪಿ ನಾಯಕರಾದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ವಿಪಕ್ಷ ನಾಯಕ ಆರ್.ಅಶೋಕ್​, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ಪಿ.ಸಿ.ಮೋಹನ್ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.

ಬಿ.ಕೆ.ಹರಿಪ್ರಸಾದ್ ಕುಮ್ಮಕ್ಕು ಸಹ ಈ ಘಟನೆಗೆ ಕಾರಣ: ಪ್ರಲ್ಹಾದ್​ ಜೋಶಿ ಕಿಡಿ

ಆಸ್ಪತ್ರೆಗೆ ಭೇಟಿ ಬಳಿಕ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಪ್ರತಿಕ್ರಿಯಿಸಿದ್ದು, ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಘಟನೆ ಅತ್ಯಂತ ಖಂಡನೀಯ. ಕಾಂಗ್ರೆಸ್​ ಸರ್ಕಾರದ ತುಷ್ಟೀಕರಣದಿಂದ ಬಾಂಬ್ ಸ್ಫೋಟ ಆಗಿದೆ. ಬಿ.ಕೆ.ಹರಿಪ್ರಸಾದ್ ಕುಮ್ಮಕ್ಕು ಸಹ ಈ ಘಟನೆಗೆ ಕಾರಣವಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ: ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲು

ಮೂವರು ಗಾಯಾಳುಗಳಿಗೂ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕಾಂಗ್ರೆಸ್​ನ ತುಷ್ಟೀಕರಣ ರಾಜಕಾರಣವೇ ಇವತ್ತಿನ ಸ್ಥಿತಿಗೆ ಕಾರಣ. 4 ದಿನದ ಹಿಂದೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದರು. ಕುಮ್ಮಕ್ಕು ನೀಡುವ ರೀತಿ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಡುತ್ತಿದೆ. ಬಾಂಬ್ ಸ್ಫೋಟ ಪ್ರಕರಣವನ್ನು NIA ತನಿಖೆಗೆ ವಹಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇಂತಹ ಘಟನೆಗಳು ಯಾವತ್ತು ನಡೆಯಬಾರದು: ಪಿಸಿ ರಾವ್​ 

ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್​ ಪ್ರತಿಕ್ರಿಯಿಸಿದ್ದು, ಮುಖೇಶ್ ಅಂಬಾನಿಯವರ ಮಗನ ಮದುವೆಗೆ ಸೌತ್ ಇಂಡಿಯನ್ ಫುಡ್ ತಯಾರಿಸಲು ರಾಮೇಶ್ವರಂ ಕೆಫೆ ಆಯ್ಕೆ ಆಗಿದೆ. ಐದು ದಿನದ ಹಿಂದೆಯೆ ಅವರು ಮದುವೆಗೆ ಹೋಗಿದ್ದಾರೆ. ರಾಮೇಶ್ವರಂ‌ನಾ ಸ್ಪೇಷಲ್​ ತಂಡ 50 ಜನ ಮದುವೆಗೆ ಹೋಗಿದ್ದಾರೆ. ಅವರು ಸೌತ್ ಇಂಡಿಯನ್​ ಎಲ್ಲಾ ಫುಡ್​ಗಳನ್ನ ತಯಾರಿಸಲಿದ್ದಾರೆ. ಇದು ನಮಗೆ ತುಂಬ ಖುಷಿ ತಂದು ಕೊಟ್ಟಿತ್ತು. ಆದರೆ ಇಂದು ನಡೆದಿರುವ ಘಟನೆ ತುಂಬ ಬೇಸರ ತಂದಿದೆ. ಈಗಾಗಲೇ ರಾಮೇಶ್ವರಂ ಕೆಫೆಯ ಎಂಡಿ ಬೆಂಗಳೂರಿಗೆ ಬರುತ್ತಿದ್ದಾರೆ. ಇಂತಹ ಘಟನೆಗಳು ಯಾವತ್ತು ನಡೆಯಬಾರದು. ಸರ್ಕಾರ ಇದಕ್ಕೆ ತಕ್ಕ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:16 pm, Fri, 1 March 24