ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ: ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲು

| Updated By: ಗಂಗಾಧರ​ ಬ. ಸಾಬೋಜಿ

Updated on: Mar 01, 2024 | 9:04 PM

ಬೆಂಗಳೂರಿನ ಕುಂದಲಹಳ್ಳಿಯ ಬ್ರೂಕ್ ಫೀಲ್ಡ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಇದೀಗ ನಗರದ ಹೆಚ್ಎಎಲ್ ಠಾಣೆಯಲ್ಲಿ ಯುಎಪಿಎ (ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವ ಕಾಯ್ದೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲಾಗಿದೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ: ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲು
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ
Follow us on

ಬೆಂಗಳೂರು, ಮಾರ್ಚ್​ 1: ಬೆಂಗಳೂರಿನ ಕುಂದಲಹಳ್ಳಿಯ ಬ್ರೂಕ್ ಫೀಲ್ಡ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ (Rameswaram Cafe blast) ವಾಗಿದೆ. ಇದೀಗ ನಗರದ ಹೆಚ್ಎಎಲ್ ಠಾಣೆಯಲ್ಲಿ ಯುಎಪಿಎ (ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವ ಕಾಯ್ದೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲಾಗಿದೆ. ಘಟನೆಯಲ್ಲಿ 10 ಜನರಿಗೆ ಗಾಯವಾಗಿದ್ದು, ಮಧ್ಯಾಹ್ನ 12 :50 ರಿಂದ 1 ಘಂಟೆ ಸುಮಾರಿನಲ್ಲಿ ಘಟನೆ ಸಂಭವಿಸಿದೆ. ಯಾರೋ ಅನುಮಾನಾಸ್ಪದ ವ್ಯಕ್ತಿ ಬ್ಯಾಗ್ ತಂದಿಟ್ಟು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬಾಂಬ್ ಸ್ಕ್ವಾಡ್, ಹಿರಿಯ ಅಧಿಕಾರಿಗಳು, ಎನ್​ಐಎ ಆಫೀಸರ್ಸ್ ಕೂಡ ಸ್ಥಳದಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಕೂಡ ಮಾಹಿತಿ ಪಡೆದುಕೊಂಡಿದ್ದಾರೆ.

ಘಟನಾ ಸ್ಥಳದಲ್ಲಿ ವೈಟ್​ಫೀಲ್ಡ್, ಹೆಚ್​ಎಎಲ್​, ಇಂದಿರಾನಗರ ಮೂರು ಠಾಣೆಯ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ, ಎಫ್​ಎಸ್​ಎಲ್​, ರಾಷ್ಟ್ರೀಯ ತನಿಖಾ ತಂಡಗಳು ಇಂಚಿಂಚು ಜಾಲಾಡಿವೆ. ಸದ್ಯದಲ್ಲೇ ದುರುಳರನ್ನ ಪತ್ತೆ ಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಟೈಮರ್ ಬಳಸಿ ಐಇಡಿ ಸ್ಫೋಟಿಸಿದ್ದಾರೆ. ಸ್ಫೋಟವಾದ ಸ್ಥಳದಲ್ಲಿ ಪತ್ತೆಯಾದ ಟೈಮರ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಮಾಂಡ್ ಸೆಂಟರ್​ನಲ್ಲಿ ಆರೋಪಿ ಚಲನವಲನದ ಬಗ್ಗೆ ಶೋಧ

ಕಮಾಂಡ್ ಸೆಂಟರ್​ನಲ್ಲಿ ಆರೋಪಿ ಚಲನವಲನದ ಬಗ್ಗೆ ಶೋಧ ಮಾಡಲಾಗಿತ್ತಿದ್ದು, ರಾಮೇಶ್ವರಂ ಕೆಫೆ ಮಾರ್ಗದಲ್ಲಿರುವ ಸಿಸಿಕ್ಯಾಮರಾ ದೃಶ್ಯವನ್ನು ಸಿಬ್ಬಂದಿ ಪರಿಶೀಲಿಸುತ್ತಿದ್ದಾರೆ. ಆರೋಪಿ ಎಲ್ಲೆಲ್ಲಿ ಓಡಾಡಿದ್ದ ಅನ್ನೋ ಬಗ್ಗೆ ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ, ‘ಬಾಂಬ್ ಬೆಂಗಳೂರು’ ಕಳಂಕ ತರಬೇಡಿ ಎಂದ ಆರ್​. ಅಶೋಕ್

ಬೆಂಗಳೂರಿನಲ್ಲಿ ಡಿಜಿ & ಐಜಿಪಿ ಅಲೋಕ್ ಮೋಹನ್ ಪ್ರತಿಕ್ರಿಯೆ ನೀಡಿದ್ದು, ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಬಾಂಬ್ ಬ್ಲಾಸ್ಟ್ ಆಗಿದೆ. ಘಟನಾ ಸ್ಥಳಕ್ಕೆ ಎಫ್​ಎಸ್​​ಎಲ್ ತಂಡ ಭೇಟಿ ನೀಡಿ ಪರಿಶೀಲಿಸುತ್ತಿದೆ. ಬಾಂಬ್ ಸ್ಫೋಟದಲ್ಲಿ ಒಟ್ಟು 9 ಜನರಿಗೆ ಗಂಭೀರ ಗಾಯಗಳಾಗಿವೆ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಮಾಹಿತಿ ಪಡೆದಿದ್ದಾರೆ ಎಂದರು.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಸ್ಥಳದಲ್ಲಿ ಬ್ಯಾಟರಿ ಜತೆ ಟೈಮರ್ ಪತ್ತೆ, ಟೈಂ ಬಾಂಬ್‌ ಶಂಕೆ?

ಎಫ್ಎಸ್​ಎಲ್ ತಂಡ ಸಂಪೂರ್ಣ ಪರಿಶೀಲನೆ ಬಳಿಕ ಮಾಹಿತಿ ನೀಡ್ತೇವೆ. ತನಿಖೆ ಬಳಿಕ ಆರೋಪಿ ಏನು ತಂದಿದ್ದಾನೆ ಅನ್ನೋದು ಗೊತ್ತಾಗಲಿದೆ. ಎನ್​ಐಎ ಮತ್ತು ಐಬಿಗೆ ಮಾಹಿತಿ ನೀಡಿದ್ದೇವೆ, ತನಿಖೆ ನಡೆಸ್ತಿದ್ದಾರೆ ಎಂದು ಹೇಳಿದ್ದಾರೆ.

9 ಜನರಿಗೆ ಗಾಯ

ಬಾಂಬ್ ಸ್ಫೋಟದಿಂದ 9 ಜನರಿಗೆ ಗಾಯಗಾಳಾಗಿವೆ. ಹೋಟೆಲ್ ಸಿಬ್ಬಂದಿ ಫಾರುಖ್, ಅಮೆಜಾನ್ ಕಂಪನಿ ಸಿಬ್ಬಂದಿ ದೀಪಾಂಶು, ಗ್ರಾಹಕರಾದ ಸ್ವರ್ಣಾಂಬ, ಮೋಹನ್, ನಾಗಶ್ರೀ, ಬಲರಾಮ್ ಕೃಷ್ಣನ್, ಮೋಮಿ, ನವ್ಯಾ, ಶ್ರೀನಿವಾಸ್​ ಎಂಬುವರಿಗೆ​ ಬಾಂಬ್ ಸ್ಫೋಟದಲ್ಲಿ ಗಾಯಗಳಾಗಿವೆ. ಗಾಯಾಳುಗಳಿಗೆ ಬೆಂಗಳೂರಿನ ಮಣಿಪಾಲ್, ವೈದೇಹಿ ಮತ್ತು ಬ್ರೂಕ್​ಫೀಲ್ಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:46 pm, Fri, 1 March 24