ಒತ್ತೆಹಣಕ್ಕಾಗಿ ಅಪಹೃತ ಬಾಲಕನ ಬರ್ಬರ ಹತ್ಯೆ: ನಂಜಾಪುರದಲ್ಲಿ ಶವ ಪತ್ತೆ

ಒತ್ತೆಹಣಕ್ಕಾಗಿ 3 ದಿನಗಳ ಹಿಂದೆ ಬಾಲಕನನ್ನು ಅಪಹರಿಸಲಾಗಿತ್ತು. ಒತ್ತೆಹಣ ಬಾರದ ಹಿನ್ನೆಲೆಯಲ್ಲಿ ಬಾಲಕನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಒತ್ತೆಹಣಕ್ಕಾಗಿ ಅಪಹೃತ ಬಾಲಕನ ಬರ್ಬರ ಹತ್ಯೆ: ನಂಜಾಪುರದಲ್ಲಿ ಶವ ಪತ್ತೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 06, 2021 | 4:40 PM

ಬೆಂಗಳೂರು: ನಗರದಲ್ಲಿ ಭಾನುವಾರ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೊಲೆಯ ಭೀಕರತೆ ಮತ್ತು ಕೊಲೆಗಾರರ ಕ್ರೌರ್ಯ ಎಂಥವರಲ್ಲಿಯೂ ಬೇಸರ ಹುಟ್ಟಿಸುವಂತಿದೆ. ಕೊಲೆಯಾದ ಬಾಲಕನನ್ನು ಬೆಂಗಳೂರು ದಕ್ಷಿಣ ತಾಲ್ಲೂಕಿನ ಶಿಕಾರಿಪಾಳ್ಯದ ಮೊಹಮ್ಮದ್ ಆಸಿಫ್ (10) ಎಂದು ಗುರುತಿಸಲಾಗಿದೆ. ಒತ್ತೆಹಣಕ್ಕಾಗಿ 3 ದಿನಗಳ ಹಿಂದೆ ಬಾಲಕನನ್ನು ಅಪಹರಿಸಲಾಗಿತ್ತು. ಒತ್ತೆಹಣ ಬಾರದ ಹಿನ್ನೆಲೆಯಲ್ಲಿ ಬಾಲಕನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಬಾಲಕನನ್ನು ಅಪಹರಿಸಿದ್ದ ದುಷ್ಕರ್ಮಿಗಳು ₹ 25 ಲಕ್ಷ ಒತ್ತೆ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಕೇಳಿದಷ್ಟು ಹಣ ನೀಡದಿದ್ದರೆ ಕೊಲ್ಲುವುದಾಗಿ ಧಮಕಿ ಹಾಕಿದ್ದರು. ಈ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು. ಪ್ರಕರಣದ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ ಬಾಲಕ ಮೊಹಮ್ಮದ್ ಆಸೀಫ್ ಮತ್ತು ಅಪಹರಣಕಾರರು ಎಲ್ಲಿದ್ದಾರೆ ಎಂಬುದು ಪತ್ತೆಯಾಗಿರಲಿಲ್ಲ.

ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಶನಿವಾರ ರಾತ್ರಿ ಜಿಗಣಿ ಸಮೀಪದ ನಂಜಾಪುರದ ಸೆಕ್ಯುರಿಟಿ ಶೆಡ್ ಒಂದರಲ್ಲಿ ಬಾಲಕನ ಶವ ಇರುವುದು ತಿಳಿದುಬಂತು. ಬಾಲಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

ಈ ನಡುವೆ ಬಾಲಕನ ಕೊಲೆಗೆ ಸಂಬಂಧಿಸಿದ ಮಹತ್ವದ ಸುಳಿವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕೊಲೆಯಾದ ಮೊಹಮ್ಮದ್ ಆಸೀಫ್​ನ ಸ್ನೇಹಿತ ಇರ್ಫಾನ್​ ಕೊಲೆಗಾರರ ಬಗ್ಗೆ ಸುಳಿವು ನೀಡಿದ್ದಾನೆ. ಬಾಲಕನ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿದೆ ಎಂದು ಇದೀಗ ಶಂಕಿಸಲಾಗಿದೆ. ಪೊಲೀಸರಿಗೆ ಲಭ್ಯವಾಗಿರುವ ಸುಳಿವಿನ ಪ್ರಕಾರ ಬಾಡಿಗೆದಾರ ಮೊಹಮ್ಮದ್ ಜಾವಿದ್ ಶೇಕ್​ನಿಂದಲೇ ಬಾಲಕನ ಹತ್ಯೆ ಶಂಕಿಸಲಾಗಿದೆ.

ಕಳೆದ ವಾರವೂ ಜಾವಿದ್ ಇರ್ಫಾನ್ ಕೊಲೆಗೆ ಯತ್ನಿಸಿದ್ದ ಎಂದು ಹೇಳಲಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಜಾವಿದ್ ನಿರ್ಜನ ಪ್ರದೇಶಕ್ಕೆ ಬಾಲಕನನ್ನು ಕರೆದೊಯ್ದಿದ್ದ. ಆದರೆ ಅಲ್ಲಿ ಕುರಿಗಾಹಿಗಳು ಇದ್ದುದರಿಂದ ಇರ್ಫಾನ್​ನನ್ನು ಬಿಟ್ಟು ಕಳಿಸಿದ್ದ ಎನ್ನಲಾಗಿದೆ. ಈತ 15 ದಿನಗಳ ಹಿಂದೆ ಛತ್ತೀಸಘಡದಿಂದ ಶಿಕಾರಿಪಾಳ್ಯದ ಶಿಕಾರಿಪಾಳ್ಯದ ಮಾವನ ಮನೆಗೆ ಬಂದಿದ್ದ. ತನ್ನ ವಿವಾಹಕ್ಕೆ ಹಣ ಹೊಂದಿಸಲು ಪ್ರಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ. ಶಂಕಿತ ಆರೋಪಿ ಮೊಹಮ್ಮದ್ ಜಾವಿದ್ ಶೇಖ್ ವಿಚಾರಣೆ ಮುಂದುವರಿದಿದೆ. ಪೊಲೀಸರು ಬಾಲಕನ ಹಂತಕರಿಗಾಗಿ ಶೋಧ ಮುಂದುವರಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.

(Boy Killed by Kidnappers for Hostage Money in Shikaripalya)

Published On - 4:38 pm, Sun, 6 June 21