ಉಡುಪಿ ಜಿಲ್ಲೆಯ ಉಚಿತ ಹೆರಿಗೆ ಆಸ್ಪತ್ರೆಯ ನಿರ್ವಹಣೆಯನ್ನು ಕೈಬಿಟ್ಟ ಬಿ.ಆರ್​.ಶೆಟ್ಟಿ; 250 ಸಿಬ್ಬಂದಿ ಬದುಕು ಅತಂತ್ರ

| Updated By: preethi shettigar

Updated on: Jun 12, 2021 | 2:33 PM

ಅಂತಾರಾಷ್ಟ್ರಿಯ ಗುಣಮಟ್ಟದ ಈ ಸುಸಜ್ಜಿತ ಕಟ್ಟಡದಲ್ಲಿ 10 ಸಾವಿರಕ್ಕೂ ಅಧಿಕ ಹೆರಿಗೆ ನಡೆಸಿದ ಆಸ್ಪತ್ರೆ ಈಗ ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ. ಅಬುದಾಬಿಯಲ್ಲಿ ಬಿ.ಆರ್. ಶೆಟ್ಟರ ಸಾಮ್ರಾಜ್ಯ ಮುಳುಗಿದೆ. ಅದರ ಜೊತೆಗೆ ಉಡುಪಿಯ ಆಸ್ಪತ್ರೆಯ 250 ಸಿಬ್ಬಂದಿಗಳ ಬದುಕು ಅತಂತ್ರವಾಗಿದೆ.

ಉಡುಪಿ ಜಿಲ್ಲೆಯ ಉಚಿತ ಹೆರಿಗೆ ಆಸ್ಪತ್ರೆಯ ನಿರ್ವಹಣೆಯನ್ನು ಕೈಬಿಟ್ಟ ಬಿ.ಆರ್​.ಶೆಟ್ಟಿ; 250 ಸಿಬ್ಬಂದಿ ಬದುಕು ಅತಂತ್ರ
ಕೂಸಮ್ಮ ಶಂಭು ಶೆಟ್ಟರ ಹೆಸರಲ್ಲಿ 200 ಬೆಡ್​ನ ಆಸ್ಪತ್ರೆ
Follow us on

ಉಡುಪಿ: ಸರ್ಕಾರದ ಹೆರಿಗೆ ಆಸ್ಪತ್ರೆಯನ್ನು ತಾನು ನಡೆಸುತ್ತೇನೆ ಎಂದು ಅಬುದಾಬಿಯ ಉದ್ಯಮಿ ಬಿ.ಆರ್. ಶೆಟ್ಟಿ ತಾನೇ ಮುಂದೆ ಬಂದಿದ್ದರು. ಹೀಗಾಗಿ 200 ಬೆಡ್​ನ ಉಚಿತ ಹೆರಿಗೆಯ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ನಿರ್ವಹಣೆ ಮಾಡುವುದು ಮತ್ತು ಇದಕ್ಕೆ ಬದಲಾಗಿ 400 ಬೆಡ್​ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ನೂರಾರು ಕೋಟಿ ಮೌಲ್ಯದ ಸರ್ಕಾರದ 4.7 ಎಕರೆ ಭೂಮಿಯನ್ನು ಬಿ.ಆರ್. ಶೆಟ್ಟಿ ಅವರಿಗೆ ಕೊಡುವುದು ಎಂದು ಎಂಓಯು ಆಗಿತ್ತು. ಆದರೆ ಶೆಟ್ಟರ ಸಾಮ್ರಾಜ್ಯ ಮುಳುಗಿದೆ. ಆಸ್ಪತ್ರೆ ನಡೆಸಲು ಸಾಧ್ಯವಿಲ್ಲ ಎಂದು ಅವರು ಈಗ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸೆಂಟ್ರಲ್ ಎಸಿ ಅಳವಡಿಸಿರುವ ಈ ಬಹುಮಹಡಿ ಕಟ್ಟಡವನ್ನು ಆರೋಗ್ಯ ಇಲಾಖೆಯಿಂದ ನಿರ್ವಹಿಸುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಈ ಆಸ್ಪತ್ರೆಯ 250 ಸಿಬ್ಬಂದಿಗಳಿಗೆ ಈ ಸಂಬಳ ಕೊಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ಸರ್ಕಾರದ ನಿರ್ವಹಣೆಯಲ್ಲಿ 70 ಬೆಡ್​ನ ಹೆರಿಗೆ ಆಸ್ಪತ್ರೆ ಸುಸಜ್ಜಿತವಾಗಿಯೇ ನಡೆಯುತ್ತಿತ್ತು. ಆದರೆ ತನ್ನ ತಂದೆ-ತಾಯಿಯ ಹೆಸರಲ್ಲಿ ತವರು ಜಿಲ್ಲೆಯಲ್ಲಿ ಆಸ್ಪತ್ರೆ ಮಾಡುವ ಶೆಟ್ಟರ ಕನಸಿಗೆ ಸರ್ಕಾರ ತನ್ನ ಆಸ್ತಿಯನ್ನೇ ಮಾರಿಕೊಂಡಿತ್ತು. ಕೂಸಮ್ಮ ಶಂಭು ಶೆಟ್ಟರ ಹೆಸರಲ್ಲಿ 200 ಬೆಡ್​ನ ಆಸ್ಪತ್ರೆಯೂ ನಿರ್ಮಾಣ ಆಗಿತ್ತು ಮತ್ತು ಕೇವಲ ಎರಡುವರೆ ವರ್ಷದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ವಾತಾವರಣದಲ್ಲಿ 10 ಸಾವಿರ ಬಡ ಮಹಿಳೆಯರ ಹೆರಿಗೆ ನಡೆಯಿತು. ಆದರೆ ಈಗ ಬಿ.ಆರ್. ಎಸ್ ಗ್ರೂಪ್ ಹಿಂದಕ್ಕೆ ಸರಿದಿದೆ. ತಿಂಗಳಿಗೆ 15 ಲಕ್ಷ ಕರೆಂಟ್ ಬಿಲ್ ಸೇರಿದಂತೆ 25 ಲಕ್ಷ ನಿರ್ವಹಣಾ ವೆಚ್ಚ ಬರುವ ಆಸ್ಪತ್ರೆಯನ್ನು ಸರ್ಕಾರದಿಂದಲೂ ನಿರ್ವಹಿಸಲು ಸಾಧ್ಯವಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಸಿಬ್ಬಂದಿಗಳ ಸಂಬಳಕ್ಕೆ 45 ಲಕ್ಷ ರೂಪಾಯಿ ಬೇಕು. ಇಷ್ಟೆಲ್ಲಾ ಹಣ ಹೊಂದಿಸುವುದು ಸರ್ಕಾರದಿಂದ ಸಾಧ್ಯವೇ ಹೇಳಿ? ಏಳು ಮಹಡಿಯ ಸುಸಜ್ಜಿತ ಕಟ್ಟಡವೊಂದು ನಿರುಪಯುಕ್ತವಾಗಿ ಬಿಡುವ ಸಾಧ್ಯತೆ ಇದೆ. ಬಡವರಿಗೂ ಅಂತಾರಾಷ್ಟ್ರಿಯ ಗುಣಮಟ್ಟದ ಚಿಕಿತ್ಸೆ ಗಗನಕುಸುಮವಾಗಲಿದೆ. 70 ಬೆಡ್ ಸಾಮರ್ಥ್ಯದ ಒಂದು ಸರ್ಕಾರಿ ಯೂನಿಟ್​ಗೆ ಅನುದಾನ ಪಡೆದು, ಮತ್ತೆರಡು ಯೂನಿಟ್​ಗಳನ್ನು ಬಿ.ಆರ್.ಎಸ್ ನವರು ನಡೆಸುವ ಪ್ರಸ್ತಾವ ಇರಿಸಲಾಗಿತ್ತು. ಆದರೆ ಬಿ.ಆರ್.ಎಸ್ ಗ್ರೂಪ್ ಅದಕ್ಕೆ ಒಪ್ಪಿಲ್ಲ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದ್ದಾರೆ.

ಉಚಿತ ಆಸ್ಪತ್ರೆಗೆ ಪ್ರತಿಯಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ನೀಡಿದ್ದ ಎರಡೂವರೆ ಎಕರೆ ಭೂಮಿಯಲ್ಲಿ ಗುಂಡಿ ತೋಡಲಾಗಿದೆ. ಈ ಭೂಮಿಯಲ್ಲಿ ಯಾವುದೇ ನಿರ್ಮಾಣ ಮಾಡುವ ಪರಿಸ್ಥಿತಿ ಇಲ್ಲ. ಇತ್ತ ಹೆರಿಗೆ ಆಸ್ಪತ್ರೆಯ ಕಟ್ಡಡವೂ ನಿಷ್ಪ್ರಯೋಜಕವಾಗುವ ಅಪಾಯ ಎದುರಾಗಿದೆ. ಕೇವಲ ಎರಡು ಪುಟದ ಎಂಓಯೂ ಬಿಟ್ಟರೆ, ಅಂದಿನ ರಾಜ್ಯ ಸರ್ಕಾರ ಶಾಶ್ವತ ಅಗ್ರಿಮೆಂಟ್ ಕೂಡಾ ಮಾಡಿಕೊಂಡಿಲ್ಲ. ಒಟ್ಟಾರೆ ಅಂದಿನ ದುಡುಕಿನ ನಿರ್ಧಾರ ಇಂದು ಸರ್ಕಾರಕ್ಕೆ ಹೊರೆಯಾಗಿದೆ.

ಇದನ್ನೂ ಓದಿ:

25 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಲಾಕ್​ಡೌನ್ ಪ್ಯಾಕೇಜ್​ನಡಿ ತಲಾ 3 ಸಾವಿರ ಜಮಾ ಕಾರ್ಯಕ್ರಮಕ್ಕೆ ಚಾಲನೆ

ಕಣ್ಮುಂದೆಯೇ ನಮ್ಮ ಕಚೇರಿ ಕಟ್ಟಡ ಉರುಳಿ ಬಿತ್ತು, ಪ್ರಾಣಭಯದಿಂದ ನಾನು ಓಡಿದೆ: ಇಸ್ರೇಲ್ ವೈಮಾನಿಕ ದಾಳಿಯ ಬಗ್ಗೆ ಪತ್ರಕರ್ತನ ಅನುಭವ ಬರಹ