25 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಲಾಕ್​ಡೌನ್ ಪ್ಯಾಕೇಜ್​ನಡಿ ತಲಾ 3 ಸಾವಿರ ಜಮಾ ಕಾರ್ಯಕ್ರಮಕ್ಕೆ ಚಾಲನೆ

Karnataka Lockdown Package: ಕೊವಿಡ್ 19 ಸಾಂಕ್ರಾಮಿಕದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಘೋಷಿಸಲಾದ ಪ್ಯಾಕೇಜ್​ನಡಿ ಈ ಕಾರ್ಯಕ್ರಮದಲ್ಲಿ ಸುಮಾರು 25 ಲಕ್ಷ ಕಾರ್ಮಿಕರಿಗೆ ತಲಾ 3 ಸಾವಿರ ರೂ. ಆರ್ಥಿಕ ನೆರವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗುತ್ತಿದೆ. ಇದಕ್ಕಾಗಿ 749.55 ಕೋಟಿ ಪರಿಹಾರ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ.

25 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಲಾಕ್​ಡೌನ್ ಪ್ಯಾಕೇಜ್​ನಡಿ ತಲಾ 3 ಸಾವಿರ ಜಮಾ ಕಾರ್ಯಕ್ರಮಕ್ಕೆ ಚಾಲನೆ
ಸಿಎಂ ಯಡಿಯೂರಪ್ಪ ಮತ್ತು ಸಚಿವ ಶಿವರಾಮ ಹೆಬ್ಬಾರ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಘೋಷಣೆ ಮಾಡಿರುವ ತಲಾ ₹ 3 ಸಾವಿರ ಸಹಾಯಧನವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊವಿಡ್ 19 ಸಾಂಕ್ರಾಮಿಕದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಘೋಷಿಸಲಾದ ಪ್ಯಾಕೇಜ್​ನಡಿ ಈ ಕಾರ್ಯಕ್ರಮದಲ್ಲಿ ಸುಮಾರು 25 ಲಕ್ಷ ಕಾರ್ಮಿಕರಿಗೆ ತಲಾ 3 ಸಾವಿರ ರೂ. ಆರ್ಥಿಕ ನೆರವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗುತ್ತಿದೆ. ಇದಕ್ಕಾಗಿ 749.55 ಕೋಟಿ ಪರಿಹಾರ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ.

ಕ್ಷೌರಿಕರು, ಅಗಸರು, ಟೈಲರುಗಳು, ಹಮಾಲರು, ಗೃಹ ಕಾರ್ಮಿಕರು, ಮೆಕ್ಯಾನಿಕ್ ಗಳು, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರು ಸೇರಿದಂತೆ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರೂ. ನೆರವು ಘೋಷಿಸಲಾಗಿದ್ದು, ಇದಕ್ಕಾಗಿ ಸೇವಾ ಸಿಂಧುವಿನಡಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು. ಸುಮಾರು 3.3 ಲಕ್ಷ ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಕೊವಿಡ್ ನಿಯಂತ್ರಣಕ್ಕಾಗಿ ವಿಧಿಸಲಾದ ನಿರ್ಬಂಧಗಳಿಂದ ಸಂಕಷ್ಟಕ್ಕೊಳಗಾದ ದುರ್ಬಲ ವರ್ಗದವರು, ಅಸಂಘಟಿತ ವಲಯದ ಕಾರ್ಮಿಕರಿಗೆ, ಶ್ರಮಿಕರಿಗೆ 1250 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದೆ. ಇದರೊಂದಿಗೆ ಮೀನುಗಾರರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೂ ಪರಿಹಾರ ಘೋಷಿಸಲಾಗಿದೆ.

ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಲಸಿಕೆ ಅಭಿಯಾನವೂ ಉತ್ತಮವಾಗಿ ನಡೆಯುತ್ತಿದೆ. ಈ ವರೆಗೆ 1.47 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ನಿರ್ಮಾಣ ಕಾರ್ಮಿಕರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಲು ಕ್ರಮ ವಹಿಸಲಾಗುತ್ತಿದೆ. ನಿರ್ಮಾಣ ಸಂಸ್ಥೆಗಳೂ ತಮ್ಮ ಕಾರ್ಮಿಕರಿಗೆ ಲಸಿಕೆ ಒದಗಿಸಬೇಕೆಂದು ಮುಖ್ಯಮಂತ್ರಿಗಳು ಸಲಹೆ ಮಾಡಿದರು.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಕಾರ್ಮಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿ. ಕಲ್ಪನಾ, ಇ-ಆಡಳಿತ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ರಮಣರೆಡ್ಡಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಮ್ ಪಾಷಾ ಮತ್ತು ಇತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:  CET 2021: ಪಿಯು ಪರೀಕ್ಷೆ ರದ್ದುಗೊಂಡರೂ ಸಿಇಟಿ ನಡೆಯಲಿದೆ: ಡಿಸಿಎಂ ಅಶ್ವತ್ಥ್ ನಾರಾಯಣ

ಕೊವಿಡ್ 19 ಲಸಿಕೆ ಸರ್ಟಿಫಿಕೇಟ್​ ಮೇಲೆ ಇನ್ಮುಂದೆ ಮಮತಾ ಬ್ಯಾನರ್ಜಿ ಫೋಟೋ; ಟಿಎಂಸಿ ಸರ್ಕಾರದ ನಿರ್ಧಾರ

( Karnataka CM Yediyurappa Launching a Lockdown Package distribution for 25 Lakh Building Workers to 3000)