ಮಗು ಹುಟ್ಟಿದ ಬಳಿಕ ಯಡಿಯೂರಪ್ಪನವರ ಮೊಮ್ಮಗಳು ಖಿನ್ನತೆಗೆ ಒಳಗಾಗಿದ್ದರು; ಆತ್ಮಹತ್ಯೆ ಕಾರಣ ಬಿಚ್ಚಿಟ್ಟ ಆರಗ ಜ್ಞಾನೇಂದ್ರ
ಡಾ. ಸೌಂದರ್ಯ ಮಗು ಹುಟ್ಟಿದ ನಂತರ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ವಿಷಯ ನಮಗೆಲ್ಲರಿಗೂ ಗೊತ್ತಿತ್ತು. ಆಕೆ ಖುಷಿಯಾಗಿರಲೆಂದು ಕೆಲವೊಮ್ಮೆ ಯಡಿಯೂರಪ್ಪನವರೇ ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಇರಿಸಿಕೊಳ್ಳುತ್ತಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ (BS Yediyurappa) ಮೊಮ್ಮಗಳು ಸೌಂದರ್ಯ ಬೆಂಗಳೂರಿನ ವಸಂತನಗರದಲ್ಲಿರುವ ತಮ್ಮ ಫ್ಲಾಟ್ನಲ್ಲಿ ಇಂದು ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ನೀರಜ್ ಎಂಬುವವರನ್ನು 2018ರಲ್ಲಿ ಮದುವೆಯಾಗಿದ್ದ ಸೌಂದರ್ಯ ಕೂಡ ವೃತ್ತಿಯಲ್ಲಿ ವೈದ್ಯೆಯಾಗಿದ್ದರು. ಸೌಂದರ್ಯ- ನೀರಜ್ ದಂಪತಿಗೆ 9 ತಿಂಗಳ ಮಗುವಿದ್ದು, ಮಗುವಾದ ಬಳಿಕ ಡಾ. ಸೌಂದರ್ಯ ಡಿಪ್ರೆಷನ್‌ಗೆ (ಮಾನಸಿಕ ಖಿನ್ನತೆ) ಒಳಗಾಗಿದ್ದರು. ಕೆಲವು ತಿಂಗಳಿನಿಂದ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಅದೇ ಕಾರಣದಿಂದ ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ.
ಯಡಿಯೂರಪ್ಪನವರ ಮೊಮ್ಮಗಳು ಸೌಂದರ್ಯ ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ಅವರ ಪತಿ ಡಾ. ನಿರಂಜನ್ ಕೂಡ ಅದೇ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ಈ ದಂಪತಿಗೆ 9 ತಿಂಗಳ ಗಂಡು ಮಗು ಇದೆ. ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಸರ್ಜನ್ ಆಗಿದ್ದ ಸೌಂದರ್ಯ ತಮಗೆ ಮಗುವಾದ ನಂತರ ಕೆಲಸ ಬಿಟ್ಟಿದ್ದರು. ನಂತರ ಡಿಪ್ರೆಷನ್‌ಗೆ ಒಳಗಾಗಿದ್ದರು. ಕಳೆದ ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಕರ್ನಾಟಕದ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಕೂಡ ‘ಇಂಡಿಯಾ ಟುಡೆ’ಗೆ ಮಾಹಿತಿ ನೀಡಿದ್ದಾರೆ.
30 ವರ್ಷದ ಡಾ. ಸೌಂದರ್ಯ ಇಂದು ಬೆಳಗ್ಗೆ ತಮ್ಮ ಗಂಡ ಡಾ. ನೀರಜ್ ಆಸ್ಪತ್ರೆಗೆ ಹೋದ ನಂತರ ಮಗುವನ್ನು ಪಕ್ಕದ ರೂಮ್‌ನಲ್ಲಿ ಮಲಗಿಸಿ ತಾನು ಬೇರೊಂದು ರೂಮ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮನೆಯ ಕೆಲಸದವಳು ಬಂದು ರೂಮಿನ ಬಾಗಿಲು ಬಡಿದರೂ ಬಾಗಿಲು ತೆರೆಯದ ಕಾರಣ ಡಾ. ನೀರಜ್ಗೆ ಫೋನ್ ಮಾಡಿದ್ದರು. ಅವರು ಬಂದು ರೂಮಿನ ಬಾಗಿಲು ಒಡೆದು ನೋಡಿದಾಗ ಸೌಂದರ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿತ್ತು.
ಈ ಘಟನೆಯ ಬಗ್ಗೆ ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ, ಸೌಂದರ್ಯ ಪ್ರಸವಾನಂತರದ ಖಿನ್ನತೆಯೊಂದಿಗೆ ಹೋರಾಡುತ್ತಿದ್ದರು. ಈ ವಿಷಯ ಅವರ ಕುಟುಂಬಕ್ಕೂ ತಿಳಿದಿತ್ತು. ಆಕೆಯ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ. ಆಕೆ ಮಗು ಹುಟ್ಟಿದ ನಂತರ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ವಿಷಯ ನಮಗೆಲ್ಲರಿಗೂ ಗೊತ್ತಿತ್ತು. ಆಕೆ ಖುಷಿಯಾಗಿರಲೆಂದು ಕೆಲವೊಮ್ಮೆ ಯಡಿಯೂರಪ್ಪನವರೇ ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಇರಿಸಿಕೊಳ್ಳುತ್ತಿದ್ದರು. ಆಕೆಯನ್ನು ಎಷ್ಟೇ ಖುಷಿಯಾಗಿಟ್ಟುಕೊಳ್ಳಲು ನೋಡಿದರೂ ಇದೀಗ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಯಡಿಯೂರಪ್ಪ ತೀವ್ರವಾಗಿ ಬೇಸರಗೊಂಡಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಡಾ. ಸೌಂದರ್ಯ ಅವರ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಆಕೆಯ ಗಂಡನ ಮನೆಯಾದ ಅಬ್ಬಿಗೆರೆಗೆ ರವಾನೆ ಮಾಡಲಾಗುತ್ತಿದೆ. ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿರುವ ಡಾ. ನೀರಜ್ ಮನೆಯ ಬಳಿ ಸೌಂದರ್ಯ ಅವರ ಅಂತ್ಯಕ್ರಿಯೆ ನೆರವೇರಲಿದೆ.
ಇದನ್ನೂ ಓದಿ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ, ಮೂರೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ವೈದ್ಯೆ
ಬಿಎಸ್ ಯಡಿಯೂರಪ್ಪ ಮೊಮ್ಮಗಳ ಆತ್ಮಹತ್ಯೆ ಪ್ರಕರಣ: ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು