ನಮ್ಮ ಮೆಟ್ರೋ ಹಂತ-2 ರ ರೀಚ್ – 2 ವಿಸ್ತರಿತ ಮಾರ್ಗದ ಪರಿಶೀಲನೆ ನಡೆಸಲಿರುವ ಸಿಎಂ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ನಾಯಂಡಹಳ್ಳಿ ಮೆಟ್ರೋ‌ ನಿಲ್ದಾಣದಿಂದ ಕೆಂಗೇರಿ ಮೆಟ್ರೋ‌ ನಿಲ್ದಾಣದವರೆಗೆ ಪರಿವೀಕ್ಷಣೆ ಮಾಡಲಿದ್ದು, ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ.

ನಮ್ಮ ಮೆಟ್ರೋ ಹಂತ-2 ರ ರೀಚ್ - 2 ವಿಸ್ತರಿತ ಮಾರ್ಗದ ಪರಿಶೀಲನೆ ನಡೆಸಲಿರುವ ಸಿಎಂ ಯಡಿಯೂರಪ್ಪ
ಮೆಟ್ರೋ

Updated on: May 25, 2021 | 7:57 AM

ಬೆಂಗಳೂರು: ನಮ್ಮ ಮೆಟ್ರೋ ಹಂತ 2ರ ರೀಚ್ 2 ವಿಸ್ತರಿತ ಮಾರ್ಗವನ್ನು ಇಂದು ಸಂಜೆ 4 ಘಂಟೆಗೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಪರಿಶೀಲಿಸಲಿದ್ದಾರೆ. ನಾಯಂಡಹಳ್ಳಿ ಮೆಟ್ರೋ‌ ನಿಲ್ದಾಣದಿಂದ ಕೆಂಗೇರಿ ಮೆಟ್ರೋ‌ ನಿಲ್ದಾಣದವರೆಗೆ ಪರಿವೀಕ್ಷಣೆ ಮಾಡಲಿದ್ದು, ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ.

ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ಸೇವೆ ಶೀಘ್ರ ಆರಂಭ
ಮೈಸೂರು ರಸ್ತೆ ಹಾಗೂ ಕೆಂಗೇರಿ ನಡುವಿನ 7.5 ಕಿ.ಮೀ. ಉದ್ದದ ನಮ್ಮ ಮೆಟ್ರೋ ಜೂನ್ ತಿಂಗಳಲ್ಲಿ ಕಾರ್ಯಾರಂಭಿಸಲಿರುವ ನಿರೀಕ್ಷೆ ಇದೆ. ಈ ಮೆಟ್ರೋ ಯೋಜನೆಯ ವಿಸ್ತರಣೆಯಿಂದ ಸುಮಾರು 75,000 ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮೆಟ್ರೋ ಪಶ್ಚಿಮ ವಿಸ್ತೃತ ಮಾರ್ಗದಲ್ಲಿ (ನೇರಳೆ ಬಣ್ಣ) ಈ ತಿಂಗಳ ಅಂತ್ಯದಲ್ಲಿ, ರೈಲು ಪ್ರಯೋಗ ಪ್ರಯಾಣ ಆರಂಭಿಸಲಿದೆ.

ಈ ವಿಭಾಗದಲ್ಲಿ ಸುಮಾರು 75,000 ಪ್ರಯಾಣಿಕರು ರೈಲು ಬಳಸುವ ನಿರೀಕ್ಷೆ ಇದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ನಿಯಮಿತ (BMRCL) ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ. ಆದರೆ, ಕೊವಿಡ್-19 ಹಾಗೂ ವರ್ಕ್ ಫ್ರಮ್ ಹೋಮ್ ಕಾರಣದಿಂದ ಆರಂಭದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರಲೂಬಹುದು ಎಂದು ಅವರು ತಿಳಿಸಿದ್ದಾರೆ.

ಹೊಸ ಮೆಟ್ರೋ ಮಾರ್ಗದ ನಿಲ್ದಾಣಗಳಿವು..
ಮೆಟ್ರೋ ರೈಲು ಸುರಕ್ಷತಾ ಕಮಿಷನರ್ (CMRS) ರೈಲು ಕಾರಿಡಾರ್​ನ್ನು ಮೇ ತಿಂಗಳಲ್ಲಿ ಪರಿಶೀಲಿಸಲಿದ್ದಾರೆ. ಬಳಿಕ, BMRCL ಮೆಟ್ರೋ ಸೇವೆಯನ್ನು ಆರಂಭಿಸಲು ಸಾಧ್ಯವಾಗಲಿದೆ ಎಂದು ಮೂಲಗಳ ಮಾಹಿತಿ ಲಭ್ಯವಾಗಿದೆ. ಮೈಸೂರು ರಸ್ತೆ ಮತ್ತು ಕೆಂಗೇರಿ ನಡುವಿನ ಪ್ರಯಾಣದ ಸಮಯ 15 ನಿಮಿಷ ಆಗಿರಲಿದೆ. ಈ ವಿಸ್ತೃತ ರಸ್ತೆಯು ಏಳು ನಿಲ್ದಾಣಗಳನ್ನು ಹೊಂದಿರಲಿದೆ. ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ನಿಲ್ದಾಣ, ಕೆಂಗೇರಿ ಹಾಗೂ ಚಲ್ಲಘಟ್ಟ ನಿಲ್ದಾಣಗಳನ್ನು ಗುರುತಿಸಲಾಗಿದೆ.

ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ ಹಾಗೂ ಜ್ಞಾನಭಾರತಿ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ ಇರಲಿದೆ. ಕೆಂಗೇರಿ ಬಸ್ ನಿಲ್ದಾಣ ಸಮೀಪದ ಮೆಟ್ರೋ ಸ್ಟೇಷನ್​ನಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್ ಸೌಲಭ್ಯ ಇರಲಿದೆ. ಎಲ್ಲಾ ನಿಲ್ದಾಣಗಳಲ್ಲೂ ಸೋಲಾರ್ ಪ್ಯಾನೆಲ್​ಗಳನ್ನು ಅಳವಡಿಸಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ತಿಳಿಸಿದ್ದಾರೆ.

ಮೆಟ್ರೋ ರೈಲು ಮಾರ್ಗ ಅಥವಾ ನಿಲ್ದಾಣದ ಕೆಳಗೆ ಮಳೆಗಾಲದ ಸಮಯದಲ್ಲಿ ನೀರು ಸೋರಿಕೆ ಆಗುವುದನ್ನು ತಡೆಗಟ್ಟಲು ವಾಟರ್​ಪ್ರೂಫಿಂಗ್ ಕೆಲಸಕ್ಕೆ ಟೆಂಡರ್ ಕರೆಯಲಾಗಿದೆ. ಚಿಕ್ಕಪೇಟೆ ಮತ್ತು ಕೆಆರ್ ಮಾರ್ಕೆಟ್ ಸ್ಟೇಷನ್​ಗಳಲ್ಲಿ ₹ 71 ಲಕ್ಷ ಮೌಲ್ಯದ ವಾಟರ್​ಪ್ರೂಫಿಂಗ್ ಕೆಲಸ ಆಗಲಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ನಮ್ಮ ಮೆಟ್ರೋ ಹಂತ 2ಎ, 2ಬಿ ಯೋಜನೆ ಅನುಮೋದನೆಗೆ ಬೆಂಗಳೂರು ಮಹಾನಗರ ಯೋಜನಾ ಸಮಿತಿ ಸಭೆ

ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ಸೇವೆ ಶೀಘ್ರ ಆರಂಭ; 75 ಸಾವಿರ ಪ್ರಯಾಣಿಕರಿಗೆ ಅನುಕೂಲ!

preethi shettigar
Follow Us