ಯಡಿಯೂರಪ್ಪ ರಾಜ ಇದ್ದಂತೆ.. ಕೇಳುವುದು ಪ್ರಜೆಗಳ ಹಕ್ಕು, ಕೊಡುವ ಧರ್ಮ ಅವರದ್ದು- ನಿರಂಜನಾನಂದಪುರಿ ಶ್ರೀ
ಕುರುಬರಿಗೆ ಎಸ್ಟಿ ಮೀಸಲಾತಿ ನೀಡಲು ಕುಲಶಾಸ್ತ್ರ ಅಧ್ಯಯನ ಅಗತ್ಯವಿಲ್ಲ. ಒಂದು ವೇಳೆ ಕುಲಶಾಸ್ತ್ರ ಅಧ್ಯಯನ ಬೇಕು ಎಂದರೆ ಅದಕ್ಕೂ ಸಿದ್ಧ ಎಂದರು ನಿರಂಜನಾನಂದಪುರಿ ಶ್ರೀ.
ದಾವಣಗೆರೆ: ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕು ಎನ್ನುವ ಕುರಿತು ನಾವು ನಡೆಸಿದ ಪಾದಯಾತ್ರೆ ಸಾರ್ಥಕವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ ಇದ್ದಂತೆ. ಬೇಡುವುದು ಪ್ರಜೆಗಳಾದ ನಮ್ಮ ಹಕ್ಕು. ಅವರಿಗೆ ಕೊಡುವ ಧರ್ಮವಿದೆ. ಯಡಿಯೂರಪ್ಪ ನ್ಯಾಯ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ ಹೇಳಿದ್ದಾರೆ.
ಇಂದು ಪಾದಯಾತ್ರೆ ಮುಗಿಸಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯ ಕನಕ ಗುರುಪೀಠದ ಶಾಖಾ ಮಠಕ್ಕೆ ಮರಳಿದ ನಿರಂಜನಾನಂದಪುರಿ ಶ್ರೀ ಈ ಹೇಳಿಕೆ ನೀಡಿದ್ದಾರೆ. ಬೇರೆ ಸ್ವಾಮೀಜಿಗಳಂತೆ ನಾನು ಡೆಡ್ಲೈನ್ ಕೊಡುವುದಿಲ್ಲ. ಫೆಬ್ರವರಿ 14ರಂದು ಗೃಹ ಸಚಿವರ ಜೊತೆಗೆ ಮಾತುಕತೆ ಇದೆ. ಹೋರಾಟ ಸಮಿತಿಗಳ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನಾವು ಹೇಳಿದಾಗ ಭಕ್ತರು ಹೋರಾಟಕ್ಕೆ ಸಜ್ಜಾಗಿರಬೇಕು ಎಂದು ಕರೆ ನೀಡಿದ್ದಾರೆ.
ಕುರುಬರಿಗೆ ಎಸ್ಟಿ ಮೀಸಲಾತಿ ನೀಡಲು ಕುಲಶಾಸ್ತ್ರ ಅಧ್ಯಯನ ಅಗತ್ಯವಿಲ್ಲ. ಒಂದು ವೇಳೆ ಕುಲಶಾಸ್ತ್ರ ಅಧ್ಯಯನ ಬೇಕು ಎಂದರೆ ಅದಕ್ಕೂ ಸಿದ್ಧ. ಈಗಾಗಲೇ ಕುಲಶಾಸ್ತ್ರ ಅಧ್ಯಯನ ಶೇ.90 ರಷ್ಟು ಮುಕ್ತಾಯವಾಗಿದೆ. ಒಂದೆರಡು ತಿಂಗಳಲ್ಲಿ ಸಂಪೂರ್ಣವಾಗಿ ವರದಿ ಸಿದ್ಧವಾಗಲಿದೆ ಎಂದರು.
ಇನ್ನು, ಎಸ್ಟಿ ಮೀಸಲಾತಿ ಪಾದಯಾತ್ರೆಗೆ ಸಿದ್ದರಾಮಯ್ಯ ಬೆಂಬಲ ಸೂಚಿಸಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ನಿರಂಜನಾನಂದಪುರಿ ಶ್ರೀ, ಸಿದ್ದು ಅಹಿಂದ ನಾಯಕ. ಅವರು ಒಂದು ಜಾತಿಗೆ ಮಾತ್ರ ಸೀಮಿತ ಆಗುವುದಿಲ್ಲ. ಅವರದ್ದೇ ಆದ ಸೈದ್ಧಾಂತಿಕ ನಿಲುವುಗಳಿವೆ. ಅವರನ್ನ ಒಂದು ಜಾತಿಗೆ ಸೀಮಿತ ಮಾಡುವುದು ಬೇಡ ಎಂದರು.
ಇದನ್ನೂ ಓದಿ: ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಕಾಗಿನೆಲೆ ನಿರಂಜನಾನಂದಪುರಿ ಶ್ರೀ