ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರಗೆ ಕೊಕ್? ಮುಂಚೂಣಿಯಲ್ಲಿ ಕೇಳಿಬರುತ್ತಿದೆ ಈ ನಾಯಕರ ಹೆಸರು!

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಅಧಿಕೃತ ಘೋಷಣೆಗೆ ದಿನಗಣನೆ ನಡೆಯುತ್ತಿರುವ ಕಾರಣ ಹಿನ್ನೆಲೆಯಲ್ಲಿ ಹಾಗೂ ಮುನ್ನೆಲೆಯಲ್ಲಿ ಸಾಕಷ್ಟು ಕಸರತ್ತುಗಳು ನಡೆದಿವೆ. ಕೇಂದ್ರ ಸಚಿವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಪ್ರಯತ್ನದ ಜೊತೆಗೆ ರಾಜ್ಯ ನಾಯಕರಿಂದ ವರಿಷ್ಠರು ಮಾಹಿತಿ ಸಂಗ್ರಹದ ಕೆಲಸವನ್ನೂ ನಡೆಸಿದ್ದಾರೆ. ಈ ಮಧ್ಯೆ ಮೂರು ದಿನಗಳಿಂದ ದೆಹಲಿಯಲ್ಲೇ ಇರುವ ವಿಪಕ್ಷ ನಾಯಕ ಅಶೋಕ್ ನಡೆ ಕುತೂಹಲವನ್ನು ಹೆಚ್ಚಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರಗೆ ಕೊಕ್? ಮುಂಚೂಣಿಯಲ್ಲಿ ಕೇಳಿಬರುತ್ತಿದೆ ಈ ನಾಯಕರ ಹೆಸರು!
ಆರ್ ಅಶೋಕ, ಬಿವೈ ವಿಜಯೇಂದ್ರ
Updated By: Ganapathi Sharma

Updated on: Jun 27, 2025 | 7:08 AM

ಬೆಂಗಳೂರು, ಜೂನ್ 27: ಬಾಕಿ ಇರುವ ಆರೇಳು ರಾಜ್ಯ ಘಟಕಗಳ ಜೊತೆಯಲ್ಲೇ ಕರ್ನಾಟಕ ಬಿಜೆಪಿ (BJP) ಅಧ್ಯಕ್ಷರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡುವುದು ಖಚಿತವಾಗಿದೆ. ಯಾವಾಗ ಮತ್ತು ಯಾರು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲವಾದರೂ ಜುಲೈ ಎರಡನೇ ವಾರದೊಳಗೆ ಈ ಪ್ರಕ್ರಿಯೆ ಮುಗಿಯುವುದು ನಿಚ್ಚಳವಾಗಿದೆ. ಈ ಮಧ್ಯೆ ರಾಜ್ಯಾಧ್ಯಕ್ಷ ಸ್ಥಾನದ ಕುರಿತಾಗಿ ಕಳೆದ ಆರು ತಿಂಗಳಿನಿಂದ ಕೆಲವು ಗಂಭೀರ ಬೆಳವಣಿಗೆಗಳು ನಡೆದಿರುವ ಬಗ್ಗೆ ಕುತೂಹಲಕರ ಮಾಹಿತಿಗಳು ಹೊರಬಿದ್ದಿವೆ. ಬಿಜೆಪಿಯಲ್ಲಿ ಆಗಾಗ ಸಕ್ರಿಯವಾಗಿರುವ ತಟಸ್ಥ ಬಣ ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೇರಿಸುವ ‌ನಿಟ್ಟಿನಲ್ಲಿ ತೀವ್ರ ಪ್ರಯತ್ನವನ್ನೂ ನಡೆಸಿತ್ತು. ಕೇಂದ್ರ ಸಚಿವ ಸ್ಥಾ‌ನದ ಜೊತೆಗೆ ಅಧ್ಯಕ್ಷ ಸ್ಥಾ‌ನ ಎಂದಾದರೆ ಒಪ್ಪಿಕೊಳ್ಳಬಹುದು ಎಂಬ ಮನಸ್ಥಿತಿಗೂ ಸೋಮಣ್ಣ ತಲುಪಿದ್ದರು. ಆದರೆ, ಅವರಿಗೆ ಕೇಂದ್ರ ಸಚಿವರಾಗಿಯೇ ಒಳ್ಳೆಯ ಕೆಲಸ ಮಾಡುವಂತೆ ಹೈಕಮಾಂಡ್ ಸೂಚಿಸಿದ ಕಾರಣ ಆ ಪ್ರಸ್ತಾಪ ಅಲ್ಲಿಗೆ ಕೊನೆಗೊಂಡಂತಾಗಿದೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ‌ ಬದಲಾಗಿ ಬೇರೆಯವರನ್ನು ನೇಮಿಸಲು ಹೈಕಮಾಂಡ್ ಆರು ತಿಂಗಳ ಹಿಂದೆ ಗಂಭೀರ ಚಿಂತನೆ ನಡೆಸಿತ್ತು ಎಂಬ ಮಾಹಿತಿಯೂ ಈಗ ಲಭ್ಯವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿಯೊಬ್ಬರು ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.

ಸುನೀಲ್ ಕುಮಾರ್ ಜತೆಗೆ ಮಾತುಕತೆ ನಡೆಸಿದ್ದ ಹೈಕಮಾಂಡ್!

ವಿಜಯೇಂದ್ರ‌ ಹೆಸರಿಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಕೋಟಾದಲ್ಲಿ ವಿ. ಸುನೀಲ್ ಕುಮಾರ್, ಲಿಂಗಾಯತ ಮತ್ತು ಪಂಚಮಸಾಲಿ ಕೋಟಾದಲ್ಲಿ ಅರವಿಂದ ಬೆಲ್ಲದ್ ಮತ್ತು ದಲಿತ ಕೋಟಾದಲ್ಲಿ ಅರವಿಂದ ಲಿಂಬಾವಳಿ ಅವನ್ನು ಪರಿಗಣಿಸಬಹುದು ಎಂಬ ಅಭಿಪ್ರಾಯವನ್ನೂ ಹೈಕಮಾಂಡ್ ಹೊಂದಿದೆ ಎಂಬುದನ್ನು ನಡ್ಡಾರನ್ನು ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಸ್ವತಃ ಸುನೀಲ್ ಕುಮಾರ್ ಜೊತೆಗೇ ವರಿಷ್ಠರು ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸಿದ್ದರು. ಆದರೆ, ಆಗ ಸುನೀಲ್ ಕುಮಾರ್ ಕಡೆಯಿಂದ ಸ್ಪಷ್ಟ ನಿಲುವು ವ್ಯಕ್ತವಾಗಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ
ಕಾಂಗ್ರೆಸ್ ಶಾಸಕರ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದ ಕೆಎನ್ ರಾಜಣ್ಣ
ಗ್ರಾಹಕರಿಗೆ ಮತ್ತೊಂದು ಶಾಕ್: ಬೆಸ್ಕಾಂ ವಿದ್ಯುತ್ ಬಿಲ್ ನೋಡಿ ಜನ ಬೇಸ್ತು
ವಿದ್ಯುತ್ ಕನಿಷ್ಠ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ತೀರ್ಪು
ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ

ಈ ಮಧ್ಯೆ, ಕಳೆದ ಮಂಗಳವಾರವೇ ದೆಹಲಿಗೆ ಹೋಗಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮೂರನೇ ದಿನವೂ ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ. ಅಸಮಾಧಾನಿತರ ಬಣ ಮತ್ತೆ ಬೆಂಗಳೂರಿನಲ್ಲಿ ಸಭೆ ಸೇರಿ ಜುಲೈ ಎರಡನೇ ವಾರದಲ್ಲಿ ನವದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುವ ಚಿಂತನೆಯಲ್ಲಿದೆ.

ವಿಜಯೇಂದ್ರ ಹೇಳಿದ್ದೇನು?

ಈ ಮಧ್ಯೆ ದೆಹಲಿ ಭೇಟಿಗೆ ಸ್ಪಷ್ಣನೆ ಕೊಟ್ಟಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ‌, ವಿಪಕ್ಷ ನಾಯಕರಾಗಿ ಅಶೋಕ್ ಉತ್ತಮ ಕೆಲಸ ಮಾಡಿದ್ದಾರೆ. ಅವರು ಬೇರೆ ಕೆಲಸಕ್ಕೆ ಹೋಗಿರಬಹುದು ಎಂದು ಹೇಳಿದ್ದಾರೆ. ಈ ಮೂಲಕ ತಮಗೂ ಒಳ್ಳೆಯದಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ನಾಯಕನ ಬದಲಾವಣೆಯಾಗುತ್ತಾ?

ಅಶೋಕ್ ದೆಹಲಿಗೆ ತೆರಳಿರುವ ಕಾರಣ ವಿಪಕ್ಷ ನಾಯಕರ ಸ್ಥಾನದಲ್ಲಿ ಏನಾದರೂ ಬದಲಾವಣೆಯಾಗಬಹುದಾ ಎಂಬ ಕುತೂಹಲವೂ ಶುರುವಾಗಿದೆ. ಒಂದು ವೇಳೆ, ಬದಲಾವಣೆ ಆದಲ್ಲಿ ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಹೆಗಲಿಗೆ ಜವಾಬ್ದಾರಿ ಏರಬಹುದು ಎಂದೂ ಹೇಳಲಾಗುತ್ತಿದೆ. ಆದರೆ ಅಶೋಕ್ ದೆಹಲಿ ಭೇಟಿಯ ನಿಜವಾದ ಗುಟ್ಟು ಏನೆಂಬುದು ಇನ್ನೂ ಬಹಿರಂಗವಾಗಿಲ್ಲ.

ಇದನ್ನೂ ಓದಿ: ದಿಲ್ಲಿಯಿಂದ ಮಹತ್ವದ ವಿಷಯ ಹೊತ್ತು ತಂದ ವಿಜಯೇಂದ್ರ, ಬಿಜೆಪಿಯಲ್ಲಿ ಬದಲಾವಣೆ ಪರ್ವ

ಇದೆಲ್ಲದರ ಮಧ್ಯೆ ಬಿಜೆಪಿಯ ಆಂತರಿಕ ವ್ಯತ್ಯಾಸಗಳನ್ನು ಸರಿಪಡಿಸಲು ಕಳೆದ ವಾರ ಸಭೆ ನಡೆಸಿದ್ದ ಆರ್​ಎಸ್​​ಎಸ್​​ ಇಂದು ಬೆಂಗಳೂರಿನಲ್ಲಿ ಮತ್ತಷ್ಟು ಬಿಜೆಪಿ ನಾಯಕರನ್ನೊಳಗೊಂಡ ಸಭೆ ನಡೆಸುವ ನಿರೀಕ್ಷೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ