
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ವರ್ಷಕ್ಕೊಮ್ಮೆ ನೀರಿನ ದರ ಪರಿಷ್ಕರಿಸಲು ಅವಕಾಶ ನೀಡಬೇಕು ಎಂದು ಬೆಂಗಳೂರು ಜಲಮಂಡಳಿಯು ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳ ಆರ್ಥಿಕ ಸ್ಥಿತಿಗತಿ ಗಮನಿಸಿ ವಿದ್ಯುತ್ ದರ ಪರಿಷ್ಕರಿಸುವ ಮಾದರಿಯಲ್ಲಿಯೇ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಿಸಲು ಅವಕಾಶ ನೀಡಬೇಕು ಎಂದು ಜಲಮಂಡಳಿಯು ಕೋರಿದೆ. ಮಂಡಳಿಯ ಆಡಳಿತ ನಿರ್ವಹಣೆ ವೆಚ್ಚ ಸರಿದೂಗಿಸುವುದು ದೊಡ್ಡ ಸವಾಲಾಗಿದೆ. ಹೀಗಾಗಿ ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ನೀರಿನ ದರ ಪರಿಷ್ಕರಿಸಲು ಅವಕಾಶ ನೀಡಬೇಕು ಎಂದು ಜಲಮಂಡಳಿಯು ಕೋರಿದೆ.
ಪ್ರಸ್ತುತ ಜಲಮಂಡಳಿಯ ಪ್ರಸ್ತಾವವು ರಾಜ್ಯ ಸರ್ಕಾರದ ಮುಂದಿದೆ. ಈ ಪ್ರಸ್ತಾವಕ್ಕೆ ಒಂದು ವೇಳೆ ಸರ್ಕಾರವು ಹಸಿರು ನಿಶಾನೆ ತೋರಿಸಿದರೆ ವಿದ್ಯುತ್ ಬಿಲ್ ಮಾದರಿಯಲ್ಲಿ ನೀರಿನ ಬಿಲ್ ಸಹ ಹೆಚ್ಚಾಗುತ್ತದೆ. ‘ಪ್ರತಿ ವರ್ಷವೂ ನೀರಿನ ದರ ಹೆಚ್ಚಳಕ್ಕ ಅವಕಾಶ ಸಿಗಬೇಕು. ಅಕ್ಟೋಬರ್ 20, 2014ರಿಂದ ಈವರೆಗೆ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಪರಿಷ್ಕರಣೆ ಆಗಿಲ್ಲ. ಆದರೆ ಇದೇ ಅವಧಿಯಲ್ಲಿ 10 ಬಾರಿ ವಿದ್ಯುತ್ ದರ ಪರಿಷ್ಕರಣೆ ಆಗಿದೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ‘ನಮ್ಮ ಪ್ರಸ್ತಾವಕ್ಕೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
ಕಳೆದ ಜನವರಿ 21ರಂದು ಸಹ ಜಲಮಂಡಳಿಯು ನೀರಿನ ದರ ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಈ ಪ್ರಸ್ತಾವವನ್ನು ಸರ್ಕಾರ ತಳ್ಳಿ ಹಾಕಿತ್ತು. 8 ವರ್ಷಗಳ ಬಳಿಕ ನೀರಿನ ದರ ಪರಿಷ್ಕರಣೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದ ಜಲಮಂಡಳಿಯು ಗೃಹ ಬಳಕೆಗೆ ಶೇ 16, ವಾಣಿಜ್ಯ ಬಳಕೆಗೆ ಶೇ 21ರಷ್ಟು ದರ ಹೆಚ್ಚಿಸಲು ಅವಕಾಶ ನೀಡಬೇಕು ಎಂದು ಕೋರಿತ್ತು. 2 ವರ್ಷಗಳ ಹಿಂದೆಯೂ ಜಲಮಂಡಳಿಯು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿತ್ತಾದರೂ ಕೊವಿಡ್ ಕಾರಣದಿಂದ ಸರ್ಕಾರ ದರ ಏರಿಕೆಗೆ ಒಪ್ಪಿರಲಿಲ್ಲ.
ಜಲಮಂಡಳಿಯ ಆಡಳಿತ, ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚ ಪ್ರತಿ ವರ್ಷ ಹೆಚ್ಚಾಗುತ್ತಿದೆ. 2013-14ರಲ್ಲಿ ₹ 390 ಕೋಟಿ ಮೊತ್ತವನ್ನು ವಿದ್ಯುತ್ ಬಿಲ್ ಪಾವತಿಗೆ ಬಳಸಲಾಗಿತ್ತು. ಆದರೆ ಈ ಮೊತ್ತವು 2020-21ರಲ್ಲಿ ₹ 669 ಕೋಟಿಗೆ ಏರಿಕೆಯಾಗಿತ್ತು. ಅಂದರೆ ಕಳೆದ 8 ವರ್ಷದಲ್ಲಿ ವಿದ್ಯುತ್ ವೆಚ್ಚವು ಶೇ 79.26ರಷ್ಟು ಹೆಚ್ಚಾಗಿದೆ. ಜಲಮಂಡಳಿಯು ಈ ಅಂಶವನ್ನು ಸರ್ಕಾರದ ಮುಂದೆ ಮುಖ್ಯವಾಗಿ ಪ್ರಸ್ತಾಪಿಸಿದೆ.
ಸರ್ಕಾರಿ ಸಂಸ್ಥೆಗಳಿಂದ ಬಾಕಿ
ಬೆಂಗಳೂರು ಜಲಮಂಡಳಿಗೆ ನಿರ್ವಹಣೆ ಶುಲ್ಕವೇ ಮುಖ್ಯ ಆದಾಯ ಮೂಲವಾಗಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳು ₹ 147 ಕೋಟಿ ಶುಲ್ಕ ಬಾಕಿ ಉಳಿಸಿಕೊಂಡಿವೆ. ಇದರಿಂದ ಜಲಮಂಡಳಿಯು ನಷ್ಟಕ್ಕೆ ಸಿಲುಕುವಂತಾಗಿದೆ. ಪ್ರಸ್ತುತ ಜಲಮಂಡಳಿಯು 10.55 ಲಕ್ಷ ಮನೆಗಳಿಗೆ ನೀರು ಪೂರೈಸುತ್ತಿದೆ. ಇದರ ಜೊತೆಗೆ ಒಳಚರಂಡಿ ಸೇವೆಯನ್ನೂ ನೀಡಲಾಗುತ್ತಿದೆ. ಇವುಗಳಿಂದ ವರ್ಷಕ್ಕೆ ₹ 1,300 ಆದಾಯ ಬರುತ್ತಿದೆ. ಆದರೆ ವೆಚ್ಚಕ್ಕೆ ಹೋಲಿಸಿದರೆ ಇದು ಏನೂ ಸಾಲುತ್ತಿಲ್ಲ ಎಂದು ಮಂಡಳಿಯ ಮೂಲಗಳು ಹೇಳುತ್ತವೆ.