ಸಮಾಜದ ಹೆಸರಿನಲ್ಲಿ ಸಭೆ ಸಂಘಟಿಸಬೇಡಿ: ಬೆಂಬಲಿಗರಿಗೆ ಕರೆ ನೀಡುವ ಮೂಲಕ ಯತ್ನಾಳ್ ಬಣಕ್ಕೆ ವಿಜಯೇಂದ್ರ ಟಕ್ಕರ್

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೆಲವು ಹಿತೈಷಿಗಳು ಏರ್ಪಡಿಸಲು ಯೋಚಿಸುತ್ತಿದ್ದ ವೀರಶೈವ ಲಿಂಗಾಯತ ಸಮುದಾಯದ ಸರಣಿ ಸಭೆಗಳಿಗೆ ತಡೆ ಹಾಕಿದ್ದಾರೆ. ಪಕ್ಷ ಸಂಘಟನೆಗೆ ಆದ್ಯತೆ ನೀಡುವಂತೆ ಅವರು ಮನವಿ ಮಾಡಿದ್ದಾರೆ. ಈ ಮೂಲಕ ಯತ್ನಾಳ್ ಬಣದ ಚಟುವಟಿಕೆಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಸಮಾಜದ ಹೆಸರಿನಲ್ಲಿ ಸಭೆ ಸಂಘಟಿಸಬೇಡಿ: ಬೆಂಬಲಿಗರಿಗೆ ಕರೆ ನೀಡುವ ಮೂಲಕ ಯತ್ನಾಳ್ ಬಣಕ್ಕೆ ವಿಜಯೇಂದ್ರ ಟಕ್ಕರ್
ವಿಜಯೇಂದ್ರ

Updated on: Mar 01, 2025 | 10:53 AM

ಬೆಂಗಳೂರು, ಮಾರ್ಚ್ 1: ಮಾರ್ಚ್ 4ರಂದು ವೀರಶೈವ ಲಿಂಗಾಯತ ಮುಖಂಡರ ಸಭೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ನಿರ್ಧಾರ ಕೈಗೊಂಡಿರುವ ಬೆನ್ನಲ್ಲೇ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪರ ವೀರಶೈವ ಲಿಂಗಾಯತ ಸಮುದಾಯದ ಸರಣಿ ಸಭೆಗಳನ್ನು ನಡೆಸಲು ಹಿತೈಷಿಗಳು ನಿರ್ಧರಿಸಿದ್ದರು. ಆದರೆ, ಇದಕ್ಕೆ ತಡೆಯೊಡ್ಡಿರುವ ವಿಜಯೇಂದ್ರ, ಆ ಮೂಲಕ ಯತ್ನಾಳ್ ಬಣಕ್ಕೆ ಟಕ್ಕರ್ ಕೊಟ್ಟಿದ್ದಾರೆ. ಸಮಾಜದ ಹೆಸರಿನಲ್ಲಿ ಸಭೆ ಸಂಘಟಿಸಬೇಡಿ, ಅದರ ಬದಲು ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದು ಅವರು ಬೆಂಬಲಿಗರಲ್ಲಿ ವಿನಂತಿ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿರುವ ವಿಜಯೇಂದ್ರ, ಸಮ ಸಮಾಜ ಕಟ್ಟಲು ತಮ್ಮನ್ನು ಸಮರ್ಪಿಸಿಕೊಂಡ ಅಣ್ಣ ಬಸವಣ್ಣನವರ ತತ್ವ ಅನುಸರಿಸಿ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ “ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು” ಎಂಬ ಧ್ಯೇಯ ಪಾಲಿಸಿ ಆಡಳಿತ ನಡೆಸಿದವರು ಮಾನ್ಯ ಬಿ.ಎಸ್. ಯಡಿಯೂರಪ್ಪನವರು. ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿರುವ ನಾನು ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದವನು ಎಂಬ ಬಗ್ಗೆ ಕಾಳಜಿ ಪೂರ್ವಕ ಹೆಮ್ಮೆ ಇರಿಸಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಸಮಾಜದ ಆಶಯಕ್ಕೆ ಪೂರಕವಾಗಿ ಸರ್ವ ಸಮಾಜಗಳ ಬಗ್ಗೆ ಸಮಭಾವ ಇಟ್ಟುಕೊಂಡು ಒಟ್ಟು ಸಮಾಜದ ಏಳಿಗೆ ಹಾಗೂ ಅಭಿವೃದ್ಧಿಗಾಗಿ ಚಿಂತಿಸುವವನು, ಆ ಮೂಲಕ ಸಮಗ್ರ ಕರ್ನಾಟಕದ ಶ್ರೇಯೋಭಿವೃದ್ಧಿಗಾಗಿ ಹಾಗೂ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಮಹಾ ಸಂಕಲ್ಪದ ಗುರಿ ಸಾಧಿಸಲು ಪರಿಶ್ರಮಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ ಸಿದ್ದಾಂತ ಪ್ರತಿಪಾದಿಸುವ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಹೆಜ್ಜೆ ಇಡುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ
ಇಶಾ ಫೌಂಡೇಷನ್​​​​ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿಯಾಗುವುದಕ್ಕೆ ಆಕ್ಷೇಪ
ವಿಜಯೇಂದ್ರ ವಿರುದ್ಧ ಲಿಂಗಾಯತ ಅಸ್ತ್ರ ಹೂಡಿದ ಯತ್ನಾಳ್!
ಸಚಿವರಾಗಿ ನೀವೇನು ಮಾಡಿದ್ದೀರಿ ಬೆಂಗಳೂರಿಗೆ: ಖರ್ಗೆಗೆ ಪೈ ಪ್ರಶ್ನೆ
ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಬಹಿರಂಗ ಪತ್ರ: ಕುತೂಹಲ ಮೂಡಿಸಿದ ನಡೆ

ವಿಜಯೇಂದ್ರ ಎಕ್ಸ್​ ಸಂದೇಶ


ಕೆಲವು ಹಿತೈಷಿಗಳು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನನ್ನ ಹಾಗೂ ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಮೇಲಿನ ಅಭಿಮಾನದ ಕಾರಣಕ್ಕಾಗಿ ವೀರಶೈವ ಲಿಂಗಾಯತ ಸಮುದಾಯದ ಸರಣಿ ಸಭೆಗಳನ್ನು ನಡೆಸಲು ಹೊರಟಿರುವ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣದಲ್ಲೇ ಇದನ್ನು ನಿಲ್ಲಿಸುವಂತೆ ತಿಳಿಸಿದ್ದೇನೆ. ಸಭೆಗಳನ್ನು ಮಾಡುವುದರಿಂದ ಪಕ್ಷಕ್ಕೂ ಸಹ ಮುಜುಗರದ ಸನ್ನಿವೇಶ ಸೃಷ್ಟಿ ಆಗುತ್ತದೆ. ಆದ್ದರಿಂದ ನಮ್ಮ ಹಿತೈಷಿಗಳು ಹಾಗೂ ಅಭಿಮಾನಿಗಳು ತಮ್ಮ ಗಮನವನ್ನು ಪಕ್ಷ ಸಂಘಟನೆಯತ್ತ ಕೇಂದ್ರೀಕರಿಸಬೇಕೆ ಹೊರತು, ಸಮಾಜದ ಹೆಸರಿನಲ್ಲಿ ಸಭೆಗಳನ್ನು ಸಂಘಟಿಸುವ ಪ್ರಯತ್ನಗಳನ್ನು ಈ ಕೂಡಲೇ ನಿಲ್ಲಿಸುವಂತೆ ಈ ಮೂಲಕ ವಿನಂತಿಸುವೆ ಎಂದು ವಿಜಯೇಂದ್ರ ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us