ಕರ್ನಾಟಕದಲ್ಲಿಯೂ ಜಾರಿಯಾಗುತ್ತಾ ಸಿಎಎ? ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಿಷ್ಟು

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸಿಎಎ ಜಾರಿ ಮಾಡುತ್ತಾ ಎಂಬ ಕುತೂಹಲ ಸದ್ಯ ಜನತೆಯದ್ದಾಗಿದೆ. ಈ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ ಮಾತನಾಡಿದ್ದಾರೆ. ಇಷ್ಟೇ ಅಲ್ಲದೆ, ಬ್ಯಾಡಗಿ ಗಲಾಟೆ, ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಸಂಬಂಧವೂ ಅವರು ಮಾತನಾಡಿದ್ದಾರೆ. ಪರಮೇಶ್ವರ ಏನೇನಂದರು ಎಂಬ ವಿವರ ಇಲ್ಲಿದೆ.

ಕರ್ನಾಟಕದಲ್ಲಿಯೂ ಜಾರಿಯಾಗುತ್ತಾ ಸಿಎಎ? ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಿಷ್ಟು
ಜಿ ಪರಮೇಶ್ವರ
Updated By: Ganapathi Sharma

Updated on: Mar 13, 2024 | 10:39 AM

ಬೆಂಗಳೂರು, ಮಾರ್ಚ್​​ 13: ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯ (CAA) ಅಧಿಸೂಚನೆ ಹೊರಡಿಸಿದ್ದು, ಇದು ದೇಶದಾದ್ಯಂತ ಜಾರಿಯಾಗಬೇಕಿದೆ. ಈ ಮಧ್ಯೆ, ಪ್ರತಿಪಕ್ಷಗಳಿಂದ ಸಿಎಎ ಜಾರಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮತ್ತೊಂದೆಡೆ, ಕಾಂಗ್ರೆಸ್ (Congress) ಆಡಳಿತ ಇರುವ ಕರ್ನಾಟಕದಲ್ಲಿಯೂ (Karnataka) ಸಿಎಎ ಜಾರಿಯಾಗಲಿದೆಯೇ ಎಂಬ ಕುತೂಹಲ ಮೂಡಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ ಪರಮೇಶ್ವರ (G Parameshwara), ಸಿಎಎ ಜಾರಿ ವಿಚಾರವಾಗಿ ಇನ್ನೂ ಏನೂ ಚರ್ಚೆ ಮಾಡಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಸಿಎಎ ಜಾರಿ ವಿಚಾರವಾಗಿ ಇನ್ನೂ ಚರ್ಚೆ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಸಭೆ ನಡೆಸಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ. ಸಿಎಎ ಜಾರಿ ಮಾಡಬೇಕೇ ಅಥವಾ ತಿರಸ್ಕರಿಸಬೇಕೆ ಎಂಬುದನ್ನು ಅವೆಲ್ಲವನ್ನೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಬ್ಯಾಡಗಿ ಗಲಾಟೆ: ಹೊರಗಿನಿಂದ ಬಂದವರ ಬಂಧನಕ್ಕೆ ಕ್ರಮ

ಬ್ಯಾಡಗಿಯಲ್ಲಿ ಮೆಣಸಿನ ದರ ದಿಢೀರ್ ಕುಸಿತದ ವಿರುದ್ಧ ರೈತರ ಪ್ರತಿಭಟನೆ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ 42 ಜನರನ್ನು ಬಂಧಿಸಿ ಅವರ ಹೇಳಿಕೆಗಳನ್ನು ಪಡೆಯಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಘಟನೆ ವೇಳೆ ಹೊರಗಿನಿಂದ ಬಂದವರೂ ಇದ್ದರು. ಅವರೆಲ್ಲ ಓಡಿಹೋದ್ದಾರೆ. ಸಿಸಿಟಿವಿ ಪರಿಶೀಲನೆ ಮಾಡಿ, ಒಂದು ತಂಡವನ್ನು ಆಂಧ್ರ ಪ್ರದೇಶದ ನೆಲ್ಲೂರು ಕಡೆ ಕಳುಹಿಸಲಾಗಿದೆ. ತಪ್ಪಿಸಿಕೊಂಡವರನ್ನು ಹುಡುಕಿ ಕರೆ ತರಲು ತಂಡ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಮುಸ್ಲಿಮರು ಸಿಎಎ ಬಗ್ಗೆ ಚಿಂತಿತರಾಗಬೇಕಿಲ್ಲ, ಇದು ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ: ಕೇಂದ್ರ

ಯಾವ ಕಾರಣಕ್ಕೆ ಗಲಾಟೆ ಸಂಭವಿಸಿತು ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಬೆಲೆ ಕಡಿಮೆ‌ ಆಗಿದ್ದಕ್ಕೆ ಪ್ರತಿಭಟನೆ ಮಾಡಿದ್ದಾರೆ. ಬೆಲೆ ಕಡಿಮೆ ಮಾಡಿಸಿ ಗಲಾಟೆ ಮಾಡಿಸಿದ್ದರೇ ಎಂಬುದು ಗೊತ್ತಿಲ್ಲ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

ಖರ್ಗೆ ಸ್ಪರ್ಧೆ ಬಗ್ಗೆ ಮಾತನಾಡಲ್ಲ: ಪರಮೇಶ್ವರ್

ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಅವರು ನಮ್ಮ ಪಕ್ಷದ ಅಧ್ಯಕ್ಷರು. ಅವರ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡಲು ಆಗುವುದಿಲ್ಲ. ಅವರ ತೀರ್ಮಾನದಂತೆ ನಡೆದುಕೊಳ್ಳಲಿದ್ದಾರೆ. ಅವರ ಜೊತೆ ನಾವು ಇರುತ್ತೇವೆ. ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದರೆ ನಮಗೆ ಶಕ್ತಿ ಬರುತ್ತದೆ. ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಅವರೇ ತೀರ್ಮಾನ ಮಾಡಬೇಕಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ