
ಬೆಂಗಳೂರು, ಅಕ್ಟೋಬರ್ 1: ರಾಜಧಾನಿ ಬೆಂಗಳೂರಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ದಸರಾ ಮುಗಿಯುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಜಿಬಿಎ (GBA) ಸಮೀಕ್ಷೆಗೆ ಸಜ್ಜಾಗುತ್ತಿದ್ದು, ವಿವಿಧ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿರುವ ಸರ್ಕಾರ, ಸಮೀಕ್ಷೆಗೆ ಹಾಜರಾಗದವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಜಿಬಿಎಗೆ ನೀಡಿದೆ.
ರಾಜ್ಯದಲ್ಲಿ ಈಗಾಗಲೇ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದೆ. ಇತ್ತ ಸಿಬ್ಬಂದಿ ಕೊರತೆಯಿಂದ ರಾಜಧಾನಿಯಲ್ಲಿ ಮುಂದೂಡಲಾಗಿದ್ದ ಸಮೀಕ್ಷೆ ಆರಂಭಕ್ಕೆ ಜಿಬಿಎ ಕೊನೆಗೂ ಮುಹೂರ್ತ ಫಿಕ್ಸ್ ಮಾಡಿದೆ. ಈಗಾಗಲೇ ವಿವಿಧ ಇಲಾಖೆಗಳ ನೌಕರರನ್ನು ಸಮೀಕ್ಷಕರಾಗಿ ನೇಮಿಸಿರುವ ಸರ್ಕಾರ, ಜಿಬಿಎ ಮೂಲಕ ತರಬೇತಿ ನೀಡುತ್ತಿದೆ. ದಸರಾ ಮುಗಿಯುತ್ತಿದ್ದಂತೆ ಬೆಂಗಳೂರಲ್ಲಿ ಸಮೀಕ್ಷೆ ಆರಂಭಿಸಲು ಜಿಬಿಎ ಸಜ್ಜಾಗುತ್ತಿದೆ. ಪ್ರತಿವಾರ್ಡ್ಗೆ ತಲಾ 70 ರಿಂದ 80 ಸಮೀಕ್ಷಕರನ್ನು ನಿಯೋಜಿಸಿರುವ ಜಿಬಿಎ ಸಮೀಕ್ಷೆ ಆರಂಭಕ್ಕೆ ತಯಾರಿ ನಡೆಸಿದೆ.
ಇದನ್ನೂ ಓದಿ ನಾಳೆಯಿಂದ ಜಾತಿಗಣತಿ: ಸಮೀಕ್ಷೆ ವೇಳೆ ನೀವು ಈ 60 ಪ್ರಶ್ನೆಗಳಿಗೆ ಉತ್ತರ ನೀಡಲು ಸಜ್ಜಾಗಿರಿ
ಈ ಸಮೀಕ್ಷೆಯಲ್ಲಿ 17 ಸಾವಿರ ಸಿಬ್ಬಂದಿ ಭಾಗಿಯಾಗಲಿದ್ದು, ಒಬ್ಬೊಬ್ಬ ಸಮೀಕ್ಷಕನಿಗೂ ತಲಾ 750 ಮನೆ ಸಮೀಕ್ಷೆ ಮಾಡುವ ಜವಾಬ್ದಾರಿ ವಹಿಸಲು ಜಿಬಿಎ ಸಜ್ಜಾಗಿದೆ. ಸದ್ಯ 10 ರಿಂದ 15 ದಿನಗಳ ಒಳಗೆ ಸಮೀಕ್ಷೆ ಮುಗಿಸಲು ಜಿಬಿಎ ಚಿಂತನೆ ಮಾಡಿದೆ. ಅಂದುಕೊಂಡ ಸಮಯದೊಳಗೆ ಸಮೀಕ್ಷೆ ಮುಗಿಯದಿದ್ದರೆ ಸಮೀಕ್ಷೆಯನ್ನು ಮತ್ತಷ್ಟು ಮುಂದುವರಿಸುವುದಾಗಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆ, ವಿಶೇಷಚೇತನ ಸಮೀಕ್ಷಕರು ಸೂಕ್ತ ದಾಖಲೆ ನೀಡಿದರೆ ಸಮೀಕ್ಷೆಯಿಂದ ವಿನಾಯಿತಿ ಪಡೆಯಬಹುದು ಎಂದು ಆಯುಕ್ತರು ಹೇಳಿದ್ದಾರೆ. ಸುಖಾಸುಮ್ಮನೆ ಸಮೀಕ್ಷೆಗೆ ಗೈರಾದರೆ ಅವರ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಇಷ್ಟು ದಿನಗಳ ವಿಳಂಬದ ಬಳಿಕ ಇದೀಗ ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆ ಆರಂಭಿಸಲು ತಯಾರಿ ನಡೆಸುತ್ತಿದೆ. ಇನ್ನು ಚುನಾವಣಾ ಆಯೋಗದ ಕೆಲಸ ಕಾರ್ಯಕ್ಕೂ ಸಿಬ್ಬಂದಿ ಬೇಕಾಗಿದ್ದಾರೆ. ಹೀಗಾಗಿ ಸಮೀಕ್ಷೆ ಕಾರ್ಯಕ್ಕೆ ಮತ್ತೆಸಿಬ್ಬಂದಿ ಕೊರತೆ ಎದುರಾಗುವ ಸಾಧ್ಯತೆ ಕೂಡ ಇದ್ದು, ಸದ್ಯ ರಾಜಧಾನಿಯಲ್ಲಿ ಅಂದುಕೊಂಡ ಸಮಯದೊಳಗೆ ಸಮೀಕ್ಷೆ ಪೂರ್ಣಗೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ.