ಫೈಬರ್ ಕೇಬಲ್ ಅಳವಡಿಕೆಯಲ್ಲಿ ಅಕ್ರಮ ಆರೋಪ: ವಿಜಯಪುರದ BSNL ಕಚೇರಿ ಮೇಲೆ CBI ದಾಳಿ
ನಗರದ ಬಸವೇಶ್ವರ ವೃತ್ತದ ಬಳಿಯಿರುವ ಬಿಎಸ್ಎನ್ಎಲ್ ಕಚೇರಿ ಮೇಲೆ ದಾಳಿ ನಡೆದಿದೆ. ಫೈಬರ್ ಕೇಬಲ್ ಅಳವಡಿಕೆ ವಿಚಾರದಲ್ಲಿ ಅಕ್ರಮದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು.
ವಿಜಯಪುರ: ನಗರದ BSNL ಕಚೇರಿ ಮೇಲೆ CBI ದಾಳಿ ನಡೆದಿದೆ. ದೆಹಲಿಯಿಂದ ಆಗಮಿಸಿದ ಸಿಬಿಐ ಟೀಮ್ ದಾಳಿ ಮಾಡಿದೆ. ನಾಲ್ಕರಿಂದ ಐವರು ಸಿಬಿಐ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ನಗರದ ಬಸವೇಶ್ವರ ವೃತ್ತದ ಬಳಿಯಿರುವ ಬಿಎಸ್ಎನ್ಎಲ್ ಕಚೇರಿ ಮೇಲೆ ದಾಳಿ ನಡೆದಿದೆ. ಫೈಬರ್ ಕೇಬಲ್ ಅಳವಡಿಕೆ ವಿಚಾರದಲ್ಲಿ ಅಕ್ರಮದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು.
ಕೇಂದ್ರದ ಡಿಜಿಟಲ್ ಇಂಡಿಯಾ ಯೋಜನೆಯಡಿ ಫೈಬರ್ ಕೇಬಲ್ಗಳ ಅಳವಡಿಕೆ ಮಾಡಲಾಗಿತ್ತು. ಗ್ರಾ.ಪಂ.ಗೆ ಫೈಬರ್ ಕೇಬಲ್ ಸಂಪರ್ಕ ನೀಡಬೇಕಿದ್ದ BSNL ಅಧಿಕಾರಿಗಳು ಕೆಲವು ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಸಂಪರ್ಕ ಕಲ್ಪಿಸಿ ಬಹುತೇಕ ಗ್ರಾ.ಪಂ.ಗೆ ಸಂಪರ್ಕ ಕಲ್ಪಿಸದಿದ್ರೂ ಬಿಲ್ ಪಾವತಿಸಿದ್ದರು ಎಂದು ತಿಳಿದುಬಂದಿದೆ. ಗುತ್ತಿಗೆದಾರರಿಂದ ಹಣ ಪಡೆದು ಅಕ್ರಮವೆಸಗಿರುವ ಆರೋಪ ಸಹ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ, BSNL ಕೇಂದ್ರ ಕಚೇರಿ ಮೇಲೆ ಸಿಬಿಐ ದಾಳಿ ನಡೆದಿದೆ. ಕಚೇರಿಯ 2ನೇ ಮಹಡಿಯಲ್ಲಿ BSNL ಅಧಿಕಾರಿಗಳ ವಿಚಾರಣೆ ಸಹ ನಡೆಸಲಾಯಿತು. ಮತ್ತೊಂದು ತಂಡ ಕಚೇರಿಯ ದಾಖಲೆಗಳನ್ನು ಪರಿಶೀಲಿಸಿದರು. ಮಾಹಿತಿ ಕಲೆಹಾಕಿ, ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ತಂಡವು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ವಾಪಸ್ ಆದರು. ಮಹಿಳಾ ಅಧಿಕಾರಿ ಸೇರಿ ಐದು ಜನ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು.
ಇದನ್ನೂ ಓದಿ: ಅಪಘಾತದಲ್ಲಿ ಅಗಲಿದ ಕಟ್ಟಾ ಅಭಿಮಾನಿಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಹೊನ್ನಾಳಿ ಶಾಸಕ ರೇಣುಕಾಚಾರ್ಯ