
ಬೆಂಗಳೂರು, (ಏಪ್ರಿಲ್ 07): ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru 2nd airport )ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಮೂರು ಸ್ಥಳಗಳನ್ನು ಆಯ್ಕೆ ಮಾಡಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಇದರ ಬೆನ್ನಲ್ಲೇ ಇದೀಗ ನಾಗರೀಕ ವಿಮಾನಯಾನ ಇಲಾಖೆ ಅಧಿಕಾರಿಗಳ (central team) ತಂಡ ಬೆಂಗಳೂರಿಗೆ (Bengaluru) ಆಗಮಿಸಿದ್ದು, ನಾಳೆ (ಏಪ್ರಿಲ್ 08) ನಿಗದಿತ ಮೂರು ಸ್ಥಳಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ. ಆಯ್ಕೆ ಮಾಡಲಾಗಿರುವ ಕನಕಪುರ ರಸ್ತೆಯಲ್ಲಿ 2 ಸ್ಥಳ ಹಾಗೂ ನೆಲಮಂಗಲ ಹಾಸನ ಹೆದ್ದಾರಿ ಸಮೀಪ ಇನ್ನೊಂದು ಸ್ಥಳಗಳ ಪರಿಶೀಲನೆ ಮಾಡಲಿದೆ. ಬಳಿಕ ಅಧಿಕಾರಿಗಳು ಬುಧವಾರ (ಏಪ್ರಿಲ್ 09) ಕೈಗಾರಿಕ ಸಚಿವ ಎಂ.ಬಿ.ಪಾಟೀಲ್ ಜೊತೆಗೆ ಚರ್ಚಿಸಲಿದ್ದಾರೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸೂಕ್ತವಾದ ಸ್ಥಳ ಗುರುತಿಸಲು ಬಂದಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ತಂಡಕ್ಕೆ ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬು ಗೋಯಲ್ ಅವರು ಉದ್ದೇಶಿತ ಮೂರು ಸ್ಥಳಗಳ ಬಗ್ಗೆ ಮಾಹಿತಿ ನೀಡಿದರು. ಈ ತಂಡ ನಾಳೆ ಕನಕಪುರ ರಸ್ತೆಯ ಎರಡು ಮತ್ತು ನೆಲಮಂಗಲ- ಕುಣಿಗಲ್ ರಸ್ತೆಯ ಒಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಕೇಂದ್ರ ತಂಡವು ಮೊದಲು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಕನಕಪುರ ರಸ್ತೆ ಕಡೆಯಿಂದ ಸ್ಥಳ ವೀಕ್ಷಣೆ ಆರಂಭಿಸಲಿದೆ. ನಂತರ ನೆಲಮಂಗಲ ಜಾಗಕ್ಕೆ ತೆರಳಲಿದ್ದು, ಬಳಿಕ ಬುಧವಾರ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಲಿದೆ.
ಬೆಂಗಳೂರು ಸಮೀಪದ ಮೂರು ಸ್ಥಳಗಳಲ್ಲಿ ವಾಯುಪ್ರದೇಶ, ಅಡಚಣೆ ಮಿತಿ, ಮೇಲ್ಮೈ ಸಮೀಕ್ಷೆ (OLS) ಸೇರಿ ವಿವಿಧ ಅಧ್ಯಯನಗಳನ್ನು ನಡೆಸಿ ವಿವರವಾದ ವರದಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನೀಡಲಿದೆ. ಮೂರು ಸ್ಥಳ ಉತ್ತಮವಾಗಿದ್ದರೆ ಮೂರು ಸ್ಥಳ ಸೂಕ್ತ ಎಂದು ಪ್ರಾಧಿಕಾರ ವರದಿ ನೀಡುತ್ತದೆ. ಆನಂತರ ರಾಜ್ಯ ಸರ್ಕಾರವು ಅಂತಿಮ ಸ್ಥಳ ಆಯ್ಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಂತಿಮಪಡಿಸಿರುವ ತಾಣಗಳನ್ನು ಬಂದು ಪರಿಶೀಲಿಸುವಂತೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ನಮ್ಮ ಇಲಾಖೆಯಿಂದ ಪತ್ರ ಬರೆಯಲಾಗಿತ್ತು. ಅದರಂತೆ ತಂಡವು ಬರುತ್ತಿದೆ. ತಂಡದ ಸೂಚನೆಯಂತೆ ನಾವು ಈ ತಾಣಗಳ ಕಂದಾಯ ನಕಾಶೆ, 10 ವರ್ಷಗಳ ಹವಾಮಾನ ವರದಿ, ಈ ಜಾಗಗಳ ಜಾಮಿತೀಯ ಲಕ್ಷಣಗಳನ್ನು ವಿವರಿಸುವ ಚಿತ್ರ, ಭಾರತೀಯ ಸರ್ವೇ ಇಲಾಖೆಯ ನಕಾಶೆ, ಉದ್ದೇಶಿತ ನಿಲ್ದಾಣದಲ್ಲಿನ ಕಾರ್ಯಾಚರಣೆ ಸ್ವರೂಪ (ವಿಎಫ್ಆರ್/ಐಎಫ್ಆರ್) ತಿಳಿಸುವ ವಿವರ ಮುಂತಾದವನ್ನು ಸಿದ್ಧಪಡಿಸಿಕೊಂಡಿದ್ದೇವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:46 pm, Mon, 7 April 25