ಸೋಲಿಗರಿಗೆ ಸೂರು: ‘ಸಿದ್ದು ನಿವಾಸ’ ಹೆಸರಿನಡಿ ಕಾಡಿನ ಮಕ್ಕಳಿಗೆ ಸಿಗಲಿದೆ ಮನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 05, 2024 | 6:40 PM

ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 32,000 ಸೋಲಿಗ ಕುಟುಂಬಗಳು ಅರಣ್ಯ ಮತ್ತು ಅರಣ್ಯದಂಚಿನಲ್ಲಿ ಕಳಪೆ ವಾಸಸ್ಥಿತಿಯಲ್ಲಿ ವಾಸಿಸುತ್ತಿವೆ. ಜಿಲ್ಲಾಡಳಿತವು 2995 ಮನೆಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸಿದ್ದು ನಿವಾಸ ಎಂದು ಯೋಜನೆಗೆ ಹೆಸರಿಡುವ ಚಿಂತನೆ ಮಾಡಲಾಗುತ್ತಿದೆ. ಒಟ್ಟು 150 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ ಸರ್ಕಾರದ ಅನುಮೋದನೆ ನಿರೀಕ್ಷಿಸಲಾಗಿದೆ.

ಸೋಲಿಗರಿಗೆ ಸೂರು: ಸಿದ್ದು ನಿವಾಸ ಹೆಸರಿನಡಿ ಕಾಡಿನ ಮಕ್ಕಳಿಗೆ ಸಿಗಲಿದೆ ಮನೆ
ಸೋಲಿಗರಿಗೆ ಸೂರು: 'ಸಿದ್ದು ನಿವಾಸ' ಹೆಸರಿನಡಿ ಕಾಡಿನ ಮಕ್ಕಳಿಗೆ ಸಿಗಲಿದೆ ಮನೆ
Follow us on

ಚಾಮರಾಜನಗರ, ಡಿಸೆಂಬರ್​ 05: ಅವರೆಲ್ಲಾ ಕಾಡಿನ ಮಕ್ಕಳು. ಸ್ವಾತಂತ್ರ್ಯಪೂರ್ವದಿಂದಲೂ ಕಾಡಿನಲ್ಲಿ ವಾಸಿಸುತ್ತಿದ್ದಾರೆ. ಸೋಲಿಗರು ಸೋರುವ ಹಳೆಯ ಮನೆ (house) ಜೋಪುಡಿಗಳಲ್ಲಿ ಇಂದಿಗೂ ವಾಸಿಸುತ್ತಿದ್ದಾರೆ. ಇಂತಹ ಸೋಲಿಗರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ವಿಶೇಷ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ. ಸಿದ್ದು ನಿವಾಸ ಹೆಸರಿನಡಿ ಸೋಲಿಗರಿಗೆ ಸೂರು ಸಿಗಲಿದೆ.

ಜಿಲ್ಲಾಡಳಿತದಿಂದ ಸರ್ಕಾರಕ್ಕೆ 2995 ಮನೆ ನಿರ್ಮಿಸಲು ಪ್ರಸ್ತಾವನೆ

ಗಡಿ ಜಿಲ್ಲೆ ಚಾಮರಾಜನಗರದ ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ಸುಮಾರು 32 ಸಾವಿರಕ್ಕೂ ಹೆಚ್ಚು ಬುಡಕಟ್ಟು ಸೋಲಿಗ ಕುಟುಂಬಗಳು ವಾಸ ಮಾಡುತ್ತಿವೆ. ಬಹುತೇಕ ಸೋಲಿಗರು ವಾಸ ಮಾಡ್ತಿರುವ ಮನೆಗಳು ಸುಸ್ಥಿತಿಯಲ್ಲಿಲ್ಲ. ಚಿಕ್ಕ ಮಣ್ಣಿನ ಗೋಡೆಯ ಮನೆಗಳು ಹಾಗೂ ಜೋಪುಡಿಗಳಲ್ಲಿ ಇಂದಿಗೂ ಕೂಡ ಸೋಲಿಗರು ವಾಸ ಮಾಡ್ತಿದ್ದಾರೆ. ಅರಣ್ಯದಂಚಿನಲ್ಲಿರುವ ಜೇನು ಕುರುಬರಿಗೆ ಮಾತ್ರ ಹಿಂದಿನಿಂದಲೂ ಸರ್ಕಾರದ ವತಿಯಿಂದ ಪಾರಂಪರಿಕವಾಗಿ ಅವರಿಗೆ 4.50 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದೆ.

ಇದನ್ನೂ ಓದಿ: ಚಾಮರಾಜನಗರ: ಖಾಸಗಿ ಶಾಲೆಗಳನ್ನೂ ಮೀರಿಸಿದೆ ಸುಸಜ್ಜಿತ ಸರ್ಕಾರಿ ಶಾಲೆ! ಹಳೆ ವಿದ್ಯಾರ್ಥಿಗಳೇ ಕಟ್ಟಿದ್ರು ಹೈಟೆಕ್ ಸ್ಕೂಲ್

ಆದರೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಜೇನು ಕುರುಬ ಸಮುದಾಯಕ್ಕಿಂತ ಹೆಚ್ಚಾಗಿ ಬೇರೆ ಸಮುದಾಯದ ಸೋಲಿಗರು ವಾಸ ಮಾಡಿಕೊಂಡು ಬರುತ್ತಿದ್ದಾರೆ. ಇತರ ಸಮುದಾಯದ ಸೋಲಿಗರಿಗೂ ಕೂಡ ಮನೆ ಕಟ್ಟಿಕೊಡಲೂ ಜಿಲ್ಲಾಡಳಿತ ಪ್ಲ್ಯಾನ್ ಮಾಡಿದ್ದು, ಸರ್ಕಾರಕ್ಕೆ 2995 ಮನೆ ನಿರ್ಮಿಸುವ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದೆ.

ನಿವೇಶನದ ಜೊತೆಗೆ ಮನೆ ನಿರ್ಮಿಸಿ ಕೊಡಲು ತೀರ್ಮಾನ

ಇನ್ನೂ ಸೋಲಿಗರಿಗೆ ಮನೆ ನಿರ್ಮಿಸಿಕೊಡುವ ಬಗ್ಗೆ ಚಿಂತನೆ ನಡೆಸಿದ್ದ ಜಿಲ್ಲಾಡಳಿತ ಮೊದಲಿಗೆ ಸರ್ವೇ ಕಾರ್ಯ ನಡೆಸಿತ್ತು. ಈ ವೇಳೆ 243 ಕುಟುಂಬಗಳಿಗೆ ಮನೆಯಷ್ಟೇ ಅಲ್ಲ ನಿವೇಶನ ಕೂಡ ಇಲ್ಲದಿರುವುದು ಕಂಡು ಬಂದಿದೆ. ಅಂತಹ ಕುಟುಂಬಗಳಿಗೂ ಕೂಡ ನಿವೇಶನದ ಜೊತೆಗೆ ಮನೆ ನಿರ್ಮಿಸಿ ಕೊಡಲು ತೀರ್ಮಾನಿಸಲಾಗಿದೆ.

ಒಟ್ಟಾರೆ ಈ ಯೋಜನೆಗೆ ಒಂದು ಮನೆಗೆ 5 ಲಕ್ಷದಂತೆ 3 ಸಾವಿರ ಮನೆಗಳಿಗೆ 150 ಕೋಟಿ ರೂ. ಅಂದಾಜು ವೆಚ್ಚ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕೊಟ್ಟಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕೂಡ ಕೈ ಜೋಡಿಸಿದ್ದಾರೆ. ಅಲ್ಲದೇ ಸರ್ಕಾರ ಅನುಮೋದನೆ ಕೊಟ್ಟರೆ ಈ ಯೋಜನೆಗೆ ಸಿದ್ದು ನಿವಾಸ ಯೋಜನೆ ಎಂದು ಹೆಸರಿಡಲೂ ಕೂಡ ಚಿಂತಿಸಿದ್ದಾರೆ.

ಇದನ್ನೂ ಓದಿ: ಫೆಂಗಲ್ ಚಂಡಮಾರುತ ಎಫೆಕ್ಟ್: ವರ್ಷದಲ್ಲೇ ಎರಡೆರಡು ಬಾರಿ ತುಂಬಿದ ಸುವರ್ಣಾವತಿ ಡ್ಯಾಂ

ಒಟ್ಟಾರೆಯಾಗಿ, ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುವ ಸೋಲಿಗರಿಗೆ ಸೂರನ್ನು ಒದಗಿಸಿ ಕೊಡಲು ಜಿಲ್ಲಾಡಳಿತ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಡಿ ಜನರ ಕಷ್ಟಗಳನ್ನು ಅರಿತಿದ್ದಾರೆ. ಆದ್ರಿಂದ ಸಿಎಂ ಸಿದ್ದರಾಮಯ್ಯ ಹಾಗೂ ಸಂಪುಟ ಈ ವಿಶೇಷ ಯೋಜನೆಗೆ ಅಸ್ತು ಅಂತಾರಾ ಅಥವಾ ಇಲ್ವಾ ಅನ್ನೋದ್ನ ಕಾದುನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.