ಚಾಮರಾಜನಗರ: ಖಾಸಗಿ ಶಾಲೆಗಳನ್ನೂ ಮೀರಿಸಿದೆ ಸುಸಜ್ಜಿತ ಸರ್ಕಾರಿ ಶಾಲೆ! ಹಳೆ ವಿದ್ಯಾರ್ಥಿಗಳೇ ಕಟ್ಟಿದ್ರು ಹೈಟೆಕ್ ಸ್ಕೂಲ್
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಗಳು ಮಾದರಿಯ ಕಾರ್ಯವೊಂದನ್ನು ಮಾಡಿದ್ದಾರೆ. ಈ ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಮರಿಸ್ವಾಮಿ ನೇತೃತ್ವದಲ್ಲಿ ಸರ್ಕಾರಿ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಬರೋಬ್ಬರಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಸರ್ಕಾರಿ ಶಾಲೆ ಲೋಕಾರ್ಪಣೆಗೆ ಸಿದ್ಧವಾಗಿದೆ.
ಚಾಮರಾಜನಗರ, ಡಿಸೆಂಬರ್ 5: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದಲ್ಲಿರುವ ಆ ಸರ್ಕಾರಿ ಶಾಲೆಯಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳ ಬದುಕು ಹಸನಾಗಿದೆ. ಕೆಲವರು ಉನ್ನತ ಅಧಿಕಾರಿಗಳಾಗಿದ್ದರೆ ಮತ್ತೆ ಕೆಲವರು ಉನ್ನತ ಸ್ಥಾನಗಳಲ್ಲಿದ್ದಾರೆ. ಆದರೆ, ಶಾಲೆಯ ಸ್ಥಿತಿ ಮಾತ್ರ ಶೋಚನೀಯವಾಗಿತ್ತು. ಇದನ್ನು ಕಂಡ ಹಳೇ ವಿದ್ಯಾರ್ಥಿಗಳು ಚಂದಾ ಎತ್ತಿ ಸಾವಿರ ಅಲ್ಲ, ಲಕ್ಷ ಅಲ್ಲ, ಬರೋಬ್ಬರಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಖಾಸಗಿ ಶಾಲೆಗಳನ್ನೂ ಮೀರಿಸುವಂತಹ ಸುಸಜ್ಜಿತ ಶಾಲೆಯನ್ನು ನಿರ್ಮಿಸಿಕೊಟ್ಟು ಮಾದರಿಯಾಗಿದ್ದಾರೆ.
ಸತ್ತೇಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾಸಗಿ ಶಾಲೆಗಳನ್ನೂ ಮೀರಿಸುವಂತಿದ್ದು, ಗಮನ ಸೆಳೆಯುತ್ತಿದೆ. 79 ವರ್ಷಗಳಷ್ಟು ಹಳೆಯದಾದ ಈ ಸರ್ಕಾರಿ ಶಾಲೆ ಬಹಳಷ್ಟು ಶಿಥಿಲಗೊಂಡಿತ್ತು. ಈವರೆಗೆ ಸಹಸ್ರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಕೆಲವರು ಅಧಿಕಾರಿಗಳಾಗಿದ್ದರೆ ಮತ್ತೆ ಕೆಲವರು ವ್ಯಾಪಾರ, ವ್ಯವಹಾರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಅವರ ಜೀವನ ಹಸನಾಗಿದೆ. ಆದರೆ ತಾವು ಓದಿದ ಶಾಲೆಯ ದುಸ್ಥಿತಿ ಕಂಡ ಹಳೆಯ ವಿದ್ಯಾರ್ಥಿಗಳು ತಮ್ಮೂರಿನ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಬೇಕೆಂದು ಯೋಜಿಸಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಿದ್ದಾರೆ. ಹಳೆಯ ವಿದ್ಯಾರ್ಥಿಗಳ ಜೊತೆಗೆ ಗ್ರಾಮಸ್ಥರು, ಕುಟುಂಬದವರು ಕೈಲಾದ ನೆರವನ್ನು ನೀಡಿದ್ದಾರೆ.
ಈ ಸರ್ಕಾರಿ ಶಾಲೆಯಲ್ಲಿ 70 ವರ್ಷಗಳ ಹಿಂದೆ ವ್ಯಾಸಂಗ ಮಾಡಿ ಐಪಿಎಸ್ ಅಧಿಕಾರಿಯಾಗಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಮರಿಸ್ವಾಮಿ ತಮ್ಮೂರಿನ ಶಾಲೆಗೆ ಕಾಯಕಲ್ಪ ನೀಡುವ ಯೋಜನೆಯ ಪ್ರಮುಖ ರೂವಾರಿಯಾಗಿದ್ದಾರೆ. ವಿಶಾಲವಾದ ಕೊಠಡಿಗಳು, ಪೀಠೋಪಕರಣ, ಕಂಪ್ಯೂಟರ್‌ಗಳನ್ನು ಒಳಗೊಂಡ ಸುಸಜ್ಜಿತ ಪ್ರಯೋಗಾಲಯ, ಶೌಚಾಲಯ, ಕಚೇರಿ, ಅಡುಗೆ ಕೋಣೆ, ಹೀಗೆ ಹಲವು ರೀತಿಯಲ್ಲಿ ಶಾಲೆಯನ್ನು ಅತ್ಯುತ್ತಮ ರೀತಿಯಲ್ಲಿ ನಿರ್ಮಾಣ ಮಾಡಿ ಸರ್ಕಾರಕ್ಕೆ ಹಸ್ತಾಂತರಿಸುತ್ತಿದ್ದಾರೆ.
ಇದನ್ನೂ ಓದಿ: ಫೆಂಗಲ್ ಚಂಡಮಾರುತ ಎಫೆಕ್ಟ್: ವರ್ಷದಲ್ಲೇ ಎರಡೆರಡು ಬಾರಿ ತುಂಬಿದ ಸುವರ್ಣಾವತಿ ಡ್ಯಾಂ
ಡಿಸೆಂಬರ್ 7 ರಂದು ಚಾಮರಾಜನಗರ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಶಾಲಾ ಕಟ್ಟಡವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ, ತಮಗೆ ಬದುಕು ಕಟ್ಟಿಕೊಟ್ಟ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಋಣ ತೀರಿಸುತ್ತಿರುವ ಹಳೆ ವಿದ್ಯಾರ್ಥಿಗಳ ನಡೆ ನಿಜಕ್ಕೂ ಮಾದರಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ