ಮೈಸೂರು, ಮಾರ್ಚ್.28: ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನ (Lok Sabha Election) ಸಿಎಂ ಸಿದ್ದರಾಮಯ್ಯ (Siddaramaiah) ಗಂಭೀರವಾಗಿ ಪರಿಗಣಿಸಿದ್ದಾರೆ. ಶತಾಯಗತಾಯ 2 ಕ್ಷೇತ್ರಗಳನ್ನ ಕೈ ತೆಕ್ಕೆಗೆ ತೆಗೆದುಕೊಳ್ಳಲು ಸಾಕಷ್ಟು ತಂತ್ರ ರೂಪಿಸಿದ್ದಾರೆ. ಹೀಗಾಗಿ ರೆಸಾರ್ಟ್ನಲ್ಲಿ ಕೂತು ಅನೇಕರಿಗೆ ಗಾಳ ಹಾಕಿ ತನ್ನ ಕಡೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ (Srinivas Prasad) ಬೆಂಬಲ ಪಡೆಯಲು ಸಿಎಂ ಮುಂದಾಗಿದ್ದು ರಣತಂತ್ರ ಹೆಣೆಯುತ್ತಿದ್ದಾರೆ. ಆದರೆ ಬಿಜೆಪಿಯನ್ನೂ ಬಿಡಲಾಗದೆ, ಕಾಂಗ್ರೆಸ್ಗೂ ಹೋಗಲಾಗದೆ ಶ್ರೀನಿವಾಸ್ ಪ್ರಸಾದ್ ಧರ್ಮ ಸಂಕಟಕ್ಕೆ ಸಿಲುಕಿದ್ದಾರೆ.
ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ್ದು, ಯಾವ ಪಕ್ಷದ ಪರವು ಪ್ರಚಾರ ಮಾಡಲ್ಲ ಎಂದಿದ್ದಾರೆ. ಆದ್ರೆ, ಶತಾಯಗತಾಯ ಪ್ರಸಾದ್ ಬೆಂಬಲ ಪಡೆಯಲು ಸಿಎಂ ಸಿದ್ದರಾಮಯ್ಯ ತಂತ್ರ ಹೆಣೆಯುತ್ತಿದ್ದಾರೆ. ಇತ್ತ ಬಿಜೆಪಿಯನ್ನು ಬಿಡಲಾಗದೆ, ಅತ್ತ ಕಾಂಗ್ರೆಸ್ಗು ಹೋಗಲಾಗದೆ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕುಟುಂಬ ಹಾಗೂ ಬೆಂಬಲಿಗರು ಧರ್ಮ ಸಂಕಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಡಾ.ಮೋಹನ್ ಬಿಜೆಪಿಯಿಂದ ಚಾಮರಾಜನಗರ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮತ್ತೊಂದೆಡೆ ಮತ್ತೊಬ್ಬ ಅಳಿಯ, ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್ ಅವರು ಬಿಜೆಪಿಯಿಂದ ಶಾಸಕರಾಗಿದ್ದರು. ಸದ್ಯ ಓರ್ವ ಅಳಿಯನಿಗೆ ಟಿಕೆಟ್ ಕೈತಪ್ಪಿದ ಬೇಸರದಲ್ಲಿ ಅನ್ಯಾಯ ಆಯ್ತು ಅಂತ ಕಾಂಗ್ರೆಸ್ ಬೆಂಬಲಿಸಿದರೆ ಮತ್ತೊಬ್ಬ ಅಳಿಯನ ಭವಿಷ್ಯ ಏನು ಅನ್ನೋ ಚಿಂತೆ ಕಾಡುತ್ತಿದೆ. ಇಲ್ಲ ಒಂದೇ ಕುಟುಂಬ ಎರಡು ಪಕ್ಷದಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಕೋಲಾರದಲ್ಲಿ ಕಾಂಗ್ರೆಸ್ ಶಾಸಕರ ರಾಜೀನಾಮೆ ನಿರ್ಧಾರಕ್ಕೆ ಖರ್ಗೆ ‘ಮಲತಾಯಿ ಧೋರಣೆ’ ಕಾರಣವಾಯ್ತಾ?
ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶ್ರೀನಿವಾಸ್ ಪ್ರಸಾದ್ ಅಳಿಯ ಡಾ.ಮೋಹನ್ ಟಿಕೆಟ್ ಪಡೆದರೆ ಹರ್ಷವರ್ಧನ್ ದಾರಿ ಏನು ಅನ್ನೋ ಪ್ರಶ್ನೆ ಎದ್ದಿದೆ. ಈಗಾಗಲೇ ದರ್ಶನ್ ದೃವನಾರಾಯಣ್ ಕಾಂಗ್ರೆಸ್ ಪಕ್ಷದಿಂದ ನಂಜನಗೂಡಿನಿಂದ ಆಯ್ಕೆ ಆಗಿದ್ದಾರೆ. ಹೀಗಾಗಿ ಶ್ರೀನಿವಾಸ್ ಪ್ರಸಾದ್ ಕುಟುಂಬ ಹಾಗೂ ಬೆಂಬಲಿಗರು ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ. ಈಗಾಗಲೇ ರಾಜಕೀಯ ನಿವೃತ್ತಿ ಪಡೆದಿರುವ ಶ್ರೀನಿವಾಸ್ ಪ್ರಸಾದ್ ಸದ್ಯ ಗೊಂದಲದಲ್ಲಿದ್ದಾರೆ.
ಚಾಮರಾಜನಗರ ಕ್ಷೇತ್ರವನ್ನ ಗೆಲ್ಲಲು ಸಿಎಂ ಸಿದ್ದರಾಮಯ್ಯ ರಣತಂತ್ರ ರೂಪಿಸಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಾಮರಾಜನಗರ ಕಳೆದ ಬಾರಿ ಕೈ ತಪ್ಪಿತ್ತು. ಮತ್ತೆ ಕೈ ತೆಕ್ಕೆ ತೆಗೆದಕೊಳ್ಳಲು ಸಿಎಂ ಚಿತ್ತ ನೆಟ್ಟಿದ್ದಾರೆ. ಅದಕ್ಕಾಗಿ ಖುದ್ದು ಸಿದ್ದರಾಮಯ್ಯ ಶ್ರೀನಿವಾಸನ್ ಪ್ರಸಾದ್ ಅವರಿಗೆ ಫೋನ್ ಮೂಲಕ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ. ಆರೋಗ್ಯ ವಿಚಾರಿಸುವ ನೆಪದಲ್ಲಿ ಮಾತುಕತೆ ಆರಂಭಿಸಿದ್ದಾರೆ. ಮೈಸೂರು ಚಾ.ನಗರ ಭಾಗದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗುವಂತೆ ಸುನೀಲ್ ಬೋಸ್ಗೆ ತಿಳಿಸಲಾಗಿದ್ದು ಸುನೀಲ್ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಸುನೀಲ್ ಬೋಸ್ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ. ಆದರೆ ಇನ್ನು ಘೋಷಣೆಯಾಗಿಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:00 am, Thu, 28 March 24