ಅಡುಗೆ ಸಿಬ್ಬಂದಿ ದಲಿತ ಮಹಿಳೆ ಕಾರಣಕ್ಕೆ ಶಾಲೆ ತೊರೆದ ಮಕ್ಕಳು: ಅಧಿಕಾರಿ ಭೇಟಿ ವೇಳೆ ಅಸಲಿಯತ್ತು ಬಯಲು
ಚಾಮರಾಜನಗರ ಜಿಲ್ಲೆಯ ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆ ದಲಿತ ಮಹಿಳೆಯನ್ನು ನೇಮಕ ಮಾಡಿದ್ದಕ್ಕೆ ಪೋಷಕರು ತಮ್ಮ ಮಕ್ಕಳನ್ನು ಶಾಲೆ ತೊರೆಸಿ ಬೇರೆ ಶಾಲೆಗೆ ದಾಖಲಿಸುತ್ತಿದ್ದಾರೆ. 22 ಮಂದಿ ಮಕ್ಕಳಿದ್ದ ಶಾಲೆಯಲ್ಲಿ ಒಬ್ಬೇ ಒಬ್ಬ ವಿದ್ಯಾರ್ಥಿ ಇದ್ದಾನೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವರದಿ ಟಿವಿ9 ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಶಾಲೆಯತ್ತ ದೌಡಾಯಿಸುತ್ತಿದ್ದಾರೆ.

ಚಾಮರಾಜನಗರ, ಜೂನ್ 25: ಚಾಮರಾಜನಗರ (Chamarajanagar) ಜಿಲ್ಲೆಯ ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ (Government School) ಬಿಸಿಯೂಟಕ್ಕೆ ದಲಿತ ಮಹಿಳೆಯನ್ನು ನೇಮಕ ಮಾಡಿದರು ಎಂಬ ಒಂದೇ ಕಾರಣಕ್ಕೆ ಪೋಷಕರು ತಮ್ಮ 22 ಮಕ್ಕಳನ್ನು ಶಾಲೆ ಬಿಡಿಸಿರುವ ಬಗ್ಗೆ ಟಿವಿ9 ಡಿಜಿಟಲ್ನಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ, ಅಧಿಕಾರಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಎಸ್.ಪಿ ಡಾ ಬಿಟಿ ಕವಿತಾ, ಸಿಇಓ ಮೋನಾ ರೋತ್, ಡಿಡಿಪಿಐ ರಾಮಚಂದ್ರ ರಾಜೇ ಅರಸ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಶಾಲೆಗೆ ಆಗಮಿಸಿ, ಪೋಷಕರ ಜೊತೆ ಸಭೆ ನಡೆಸುಸಿದರು.
ಸಭೆಯಲ್ಲಿ ಸಿಇಓ ಮೋನಾ ರೋತ್ ಅವರು ಪೋಷಕರ ಕುಂದು ಕೊರತೆ ಆಲಿಸಿದರು. ಶಿಕ್ಷಕರು ಸರಿಯಾಗಿ ಪಾಠ ಮಾಡದ ಕಾರಣ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸಿದ್ದೇವೆ ಎಂದು ಕೆಲ ಪೋಷಕರು ಸಭೆಯಲ್ಲಿ ಅಧಿಕಾರಿಗಳಿಗೆ ಹೇಳಿದ್ದಾರೆ. ಕೊನೆಗೆ ಅಧಿಕಾರಿಗಳು 22 ಜನ ವಿದ್ಯಾರ್ಥಿಗಳಲ್ಲಿ ಏಳು ವಿದ್ಯಾರ್ಥಿಗಳ ಮನವೊಲಿಸಿ ಶಾಲೆಗೆ ವಾಪಸ್ ಕರೆತಂದಿದ್ದಾರೆ. ಈ 22 ಜನ ವಿದ್ಯಾರ್ಥಿಗಳಲ್ಲಿ ಏಳು ಮಂದಿ ಮಾತ್ರ ಶಾಲೆಯ ಬಿಸಿಯೂಟ ತಿನ್ನುತ್ತಿದ್ದರು ಎಂದು ಅಡುಗೆ ಸಿಬ್ಬಂದಿ ಹೇಳಿದ್ದಾರೆ.
ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೊಮ್ಮು ಗ್ರಾಮಕ್ಕೆ ಭೇಟಿ ನೀಡಿ, ಶಾಲೆಯ ವಾಸ್ತವ ಸ್ಥಿತಿಯನ್ನು ಅವಲೋಕಿಸಿದರು. ಶಾಲೆಯ ಮುಖ್ಯ ಶಿಕ್ಷಕರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಘಟನೆ ಸಂಬಂಧ ಸಮಗ್ರ ವರದಿ ಕೊಡುವಂತೆ ಸಿಇಒ ಸೂಚನೆ ನೀಡಿದರು. “ನಾನು ಅಡುಗೆ ಮಾಡಿದರೆ 22 ಮಕ್ಕಳ ಪೈಕಿ ಕೇವಲ 7 ಮಂದಿ ಮಾತ್ರ ಊಟ ಮಾಡುತ್ತಿದ್ದರು, ಉಳಿದವರು ಮನೆಗೆ ಹೋಗುತ್ತಿದ್ದರೆಂದು” ಅಡುಗೆ ಸಿಬ್ಬಂದಿ ಹೇಳಿದ್ದಾರೆ.
ಪ್ರಕರಣ ಸಂಬಂಧ ಸಿಇಓ ಹಾಗೂ ಪ್ರಭಾರ ಡಿಸಿ ಮೋನಾರೋತ್ ಮಾತನಾಡಿ, “ಹಾಲಿ ಇಲ್ಲಿರುವ ಶಿಕ್ಷಕರನ್ನು ವರ್ಗಾವಣೆ ಮಾಡುತ್ತೇವೆ. ಬೇರೆ ಶಾಲೆಗಳಿಗೆ ದಾಖಲಾಗಿರುವ ಮಕ್ಕಳನ್ನು ಮತ್ತೆ ವಾಪಾಸ್ ಕರೆತರುತ್ತೇವೆ. ಈಗಾಗಲೇ 8 ಮಕ್ಕಳನ್ನು ಕರೆತಂದಿದ್ದೇವೆ” ಎಂದು ಹೇಳಿದರು.
“ಮಕ್ಕಳು ಯಾಕೆ ಊಟ ಮಾಡುತ್ತಿರಲಿಲ್ಲ ಅಂತ ಕೂಲಂಕುಶ ತನಿಖೆ ಮಾಡುತ್ತೇವೆ. ಅಸ್ಪೃಶ ಆಚರಣೆ ಮಾಡಿದ್ದರೆ ದೂರು ಕೊಟ್ಟರೇ ತನಿಖೆ ಮಾಡುತ್ತೇವೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಚಾಮರಾಜನಗರ ಎಸ್ಪಿ ಡಾ. ಬಿಟಿ ಕವಿತಾ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ಸರ್ಕಾರಿ ಶಾಲೆಯಲ್ಲಿ ಒಬ್ಬನೇ ವಿದ್ಯಾರ್ಥಿ: ಏನಾಯ್ತು ಈ ಕನ್ನಡ ಶಾಲೆ..?
ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ
ಬಿಸಿಯೂಟಕ್ಕೆ ದಲಿತ ಮಹಿಳೆಯನ್ನು ನೇಮಕ ಮಾಡಿದ್ದಕ್ಕೆ ಪೋಷಕರು ಮಕ್ಕಳನ್ನು ಶಾಲೆ ಬಿಡಿಸುತ್ತಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಇತ್ತ ಕಡೆ ಗಮನ ಹರಿಸಬೇಕೆಂದು ಆಗ್ರಹ ವ್ಯಕ್ತವಾಗುತ್ತಿದೆ.
“ಚಾಮರಾಜನಗರ ಜಿಲ್ಲೆಯಲ್ಲಿ ಇದೆಂಥಾ ಘಟನೆ..?? ಚಾಮರಾಜನಗರ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮುಖ್ಯ ಅಡುಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಹೊಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಪೋಷಕರು ತಮ್ಮ ಮಕ್ಕಳ ಟಿಸಿ ಪಡೆದು ಬೇರೆ ಬೇರೆ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಪರಿಣಾಮವಾಗಿ ಶಾಲೆ ಮುಚ್ಚುವ ಹಂತಕ್ಕೆ ತಲುಪಿದೆ. ಅಡುಗೆ ಸಿಬ್ಬಂದಿ ದಲಿತ ಮಹಿಳೆ ಎಂಬ ಕಾರಣಕ್ಕೆ ಮಕ್ಕಳ ಟಿಸಿ ಪಡೆದು ಬೇರೆಡೆ ಸೇರಿಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಪೋಷಕರ ನಿರಾಕರಿಸಿದ್ದಾರೆ. ಸದ್ಯ ಶಾಲೆಗೆ ಒಬ್ಬ ವಿದ್ಯಾರ್ಥಿ ಮಾತ್ರ ದಾಖಲಾಗಿದ್ದಾನೆ” ಎಂದು ವಿಜಯಕುಮಾರ್ ಎಂಬುವರು ಪೋಸ್ಟ್ ಮಾಡಿದ್ದಾರೆ.







