ಚಾಮರಾಜನಗರ: 9 ಕಾಡಾನೆಗಳ ಹಿಂಡು ದಾಳಿಗೆ ರೈತ ಬಲಿ; ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ

ಚಾಮರಾಜನಗರದ ಗಡಿ ಗ್ರಾಮವಾದ ತಮಿಳುನಾಡಿನ ಕರಳವಾಡಿಯಲ್ಲಿ, 9 ಕಾಡಾನೆ ಹಿಂಡಿನ ದಾಳಿಗೆ ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕಳೆದ ಹಲವು ತಿಂಗಳಿಂದ ಆನೆಗಳ ಹಾವಳಿಯಿಂದ ತೊಂದರೆಗೊಳಗಾದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಸತ್ಯಮಂಗಲ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಚಾಮರಾಜನಗರ: 9 ಕಾಡಾನೆಗಳ ಹಿಂಡು ದಾಳಿಗೆ ರೈತ ಬಲಿ; ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ
ಮೃತ ರೈತ, ಪ್ರತಿಭಟನೆ
Edited By:

Updated on: Feb 08, 2026 | 3:21 PM

ಚಾಮರಾಜನಗರ, ಫೆಬ್ರವರಿ 08: ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತನ ಮೇಲೆ 9 ಕಾಡಾನೆಗಳ (Wild Elephant) ಹಿಂಡು ದಾಳಿ ಮಾಡಿದ ಪರಿಣಾಮ ರೈತ ಬಲಿಯಾಗಿರುವಂತಹ (death) ಘಟನೆ ಚಾಮರಾಜನಗರ ಗಡಿ ಗ್ರಾಮವಾದ ತಮಿಳುನಾಡಿನ ಕರಳವಾಡಿಯಲ್ಲಿ‌ ನಡೆದಿದೆ. ಗಜಪಡೆಯ ಅಟ್ಟಹಾಸಕ್ಕೆ ಕರಳವಾಡಿ ಗ್ರಾಮದ ಮಹೇಶ್ ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳಕ್ಕೆ ಸತ್ಯಮಂಗಲ ಟೈಗರ್ ರಿಸರ್ವ್ ಫಾರೆಸ್ಟ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು?

ರೈತ ಮಹೇಶ್​​, ಜಮೀನಿನಲ್ಲಿ ಕಾವಲು ಕಾಯುತ್ತಿದ್ದರು. ಈ ವೇಳೆ 9 ಕಾಡಾನೆಗಳ ಹಿಂಡು ದಾಳಿ ಮಾಡಿವೆ. ಈ ವೇಳೆ ಅಕ್ಕ, ಪಕ್ಕದ ಜಮೀನಿನವರು ಎಷ್ಟೇ ಕೂಗಾಡಿದರೂ ಕಾಡಾನೆ ಹಿಂಡು ಬಿಟ್ಟಿಲ್ಲ. ಗಜಪಡೆಯ ಅಟ್ಟಹಾಸಕ್ಕೆ ಮಹೇಶ್​ ಬಲಿಯಾಗಿದ್ದಾರೆ. ಕಳೆದ ಮೂರ್‍ನಾಲ್ಕು ತಿಂಗಳಿಂದಲೂ ಕಾಡಾನೆಗಳ ಹಿಂಡು ಓಡಾಟ ಮಾಡುತ್ತಿವೆ. ಸದ್ಯ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರಿಂದ ರಸ್ತೆ ತಡೆ ಪ್ರತಿಭಟನೆ ಮಾಡಿದ್ದಾರೆ.

ಕೂಲಿ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದಾಗ ಕಾಡಾನೆ ದಾಳಿ: ವ್ಯಕ್ತಿ ಸಾವು

ಇನ್ನು ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಜಲ್ಲಿಪಾಳ್ಯ ಸಮೀಪ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದ ಘಟನೆ ನಡೆದಿತ್ತು. ತಮಿಳುನಾಡಿನ ಮಾಕಪಾಳ್ಯ ಗ್ರಾಮದ ನಿವಾಸಿ ಶಿವಮೂರ್ತಿ ಮೃತ ದುರ್ದೈವಿ.

ಕೂಲಿ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ಶಿವಮೂರ್ತಿ, ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಅರಣ್ಯ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಹೂಗ್ಯಂ ವಲಯದ ಜಲ್ಲಿಪಾಳ್ಯ ಭಾಗದಲ್ಲಿ ಕಾಡಾನೆಗಳ ಹಿಂಡು ಅಡ್ಡ ಬಂದಿದ್ದು, ಏಕಾಏಕಿ ಆನೆಗಳು ದಾಳಿ ನಡೆಸಿದ್ದವು.

ಇದನ್ನೂ ಓದಿ: ಹಾಸನ: ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ, ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು

ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಶಿವಮೂರ್ತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಘಟನೆ ನಡೆದ ಬಳಿಕ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ಭಾಗದಲ್ಲಿ ಕಾಡಾನೆಗಳ ಓಡಾಟ ಹೆಚ್ಚಿರುವುದರಿಂದ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಮಾರ್ಗಗಳಲ್ಲಿ ಸಂಚರಿಸುವಾಗ ಎಚ್ಚರ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.