
ಚಾಮರಾಜನಗರ, ಜನವರಿ 24: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara) ಚಿರತೆ (Leopard) ದಾಳಿಗೆ ಮಾದಪ್ಪನ ಭಕ್ತನೊಬ್ಬ ಬಲಿಯಾದ ಘಟನೆ ಹಿನ್ನೆಲೆ, ಚಾಮರಾಜನಗರ ಜಿಲ್ಲಾಡಳಿತ ಪಾದಯಾತ್ರಿಕರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಸಂಬಂಧಿಸಿದಂತೆ ಹೊಸ ಆದೇಶವನ್ನು ಹೊರಡಿಸಿದೆ. ಮಾದಪ್ಪನ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ. ಪಾದಯಾತ್ರಿಕರು, ದ್ವಿಚಕ್ರ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಕ್ರಮಕೈಗೊಂಡಿರುವ ಈ ಆದೇಶ ಜನವರಿ 25ರಿಂದ ಜಾರಿಗೆ ಬರಲಿದೆ.
ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತರು ಜಿಲ್ಲಾಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.
ಚಿರತೆ ದಾಳಿ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಜನವರಿ 24ವರೆಗೆ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ಪಾದಯಾತ್ರೆಗೆ ನಿರ್ಬಂಧ ಹೇರಿತ್ತು. ಆದರೆ ಇದೀಗ ಪಾದಯಾತ್ರಿಗರಿ ಜಿಲ್ಲಾಡಳಿತ ಸಮಯದ ಡೈಡ್ಲೈನ್ ನೀಡಿದೆ. ನಾಳೆಯಿಂದ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮಾತ್ರ ಪಾದಯಾತ್ರಿಕರಿಗೆ ಹಾಗೂ ದ್ವಿಚಕ್ರ ವಾಹನಕ್ಕೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಬೆಳಗ್ಗೆ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಮೂಲದ ಪ್ರವೀಣ್ ಎಂಬ ಭಕ್ತನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ತಿಂದ ಘಟನೆ ನಡೆದಿತ್ತು. ಈ ಘಟನೆಯ ಬಳಿಕ ಜಿಲ್ಲಾಡಳಿತವು ತಕ್ಷಣ ಕ್ರಮಕೈಗೊಂಡಿದ್ದು, ಮೊದಲ ಹಂತದಲ್ಲಿ ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಪಾದಯಾತ್ರೆಗೆ ನಿರ್ಬಂಧ ವಿಧಿಸಲಾಗಿತ್ತು. ಈ ನಿರ್ಬಂಧವನ್ನು ಜನವರಿ 24ರವರೆಗೆ ಜಾರಿಗೊಳಿಸಲಾಗಿತ್ತು.
ಇದನ್ನೂ ಓದಿ: ಕಾಪಾಡಲಿಲ್ಲ ಮಹದೇಶ್ವರ: ಚಿರತೆ ದಾಳಿಗೆ ಭಕ್ತ ಬಲಿ; ಪಾದಯಾತ್ರೆಗೆ 4 ದಿನಗಳ ಕಾಲ ನಿರ್ಬಂಧ
ಚಿರತೆ ದಾಳಿ ಸಂಭವಿಸುವ ಮೊದಲು ಪಾದಯಾತ್ರಿಕರು ಮತ್ತು ದ್ವಿಚಕ್ರ ವಾಹನಗಳಿಗೆ 24 ಗಂಟೆಗಳ ಕಾಲವೂ ಸಂಚಾರಕ್ಕೆ ಅವಕಾಶವಿತ್ತು. ಆದರೆ ಇತ್ತೀಚಿನ ದುರ್ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊಸ ಸಮಯ ಮಿತಿಯನ್ನು ವಿಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:45 pm, Sat, 24 January 26