ಚಾಮರಾಜನಗರ: ನೆಲಕಚ್ಚಿದ್ದ ರೇಷ್ಮೆ ಕೃಷಿಗೆ ಸರ್ಕಾರದಿಂದ ಉತ್ತೇಜನ, ರೈತರಿಗೆ ಸಕಲ ಸವಲತ್ತು
ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಒಂದು ಕಾಲದಲ್ಲಿ ಅತ್ಯಂತ ಫಲಪ್ರದವಾಗಿತ್ತು. ಆದರೆ, ಕಾಲಕ್ರಮೇಣ ಇದು ಕುಸಿಯಿತು. ಆದರೆ, ಇದೀಗ ರೇಷ್ಮೆ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಸಾಲ ಸೌಲಭ್ಯಗಳು ಮತ್ತು ತರಬೇತಿಯೊಂದಿಗೆ ರೈತರಿಗೆ ಬೆಂಬಲ ನೀಡುವ ಮೂಲಕ ರೇಷ್ಮೆ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಚಾಮರಾಜನಗರ, ಮೇ 17: ಗಡಿ ಜಿಲ್ಲೆಯ ಚಾಮರಾಜನಗರ (Chamarajanagar) ಒಂದು ಕಾಲದಲ್ಲಿ ರೇಷ್ಮೆ ಕೃಷಿಗೆ (Sericulture) ಹೆಸರುವಾಸಸಿಯಾಗಿತ್ತು. ರೇಷ್ಮೆ ಕೃಷಿ ಅವಲಂಬಿಸಿ ಸಾಕಷ್ಟು ಕುಟುಂಬಗಳು ಬದುಕು ಕಟ್ಟಿಕೊಂಡಿದ್ದವು. ಆದರೆ ತದನಂತರ ಚಾಮರಾಜನಗರ, ಕೊಳ್ಳೇಗಾಲ ಭಾಗದಲ್ಲಿ ರೇಷ್ಮೆ ಬೇಸಾಯ ಕುಸಿದು ಹೋಗಿತ್ತು. ಇದೀಗ ಸರ್ಕಾರ ರೇಷ್ಮೆ ಕೃಷಿಗೆ ಮತ್ತೆ ಚೈತನ್ಯ ಕೊಡಲು ಮುಂದಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಯಳಂದೂರು ಭಾಗದಲ್ಲಿ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ವ್ಯವಸಾಯ ಮಾಡಲಾಗುತ್ತಿತ್ತು. ಕಾಲ ಕ್ರಮೇಣ ರೇಷ್ಮೆ ಬೇಸಾಯ ಮಾಡುವ ರೈತರ ಸಂಖ್ಯೆಯಲ್ಲಿ ಕೂಡ ತೀರಾ ಇಳಿಮುಖವಾಗಿದೆ. ಇದೀಗ ಸರ್ಕಾರ ಕೂಡ ರೇಷ್ಮೆ ಕೃಷಿಗೆ ಉತ್ತೇಜನ ನೀಡಲು ಮುಂದಾಗಿದೆ. ಅದಕ್ಕಾಗಿ ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೂಡ ಹಣ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ನೇಕಾರಿಕೆಗೆ ಕೂಡ ಉತ್ತೇಜನ ನೀಡಲು ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ಪಶು ಸಂಗೋಪನಾ ಸಚಿವರ ಜಿಲ್ಲೆಯಲ್ಲೇ ಪಶು ವೈದ್ಯರ ಕೊರತೆ: 900ಕ್ಕೂ ಹೆಚ್ಚು ರಾಸುಗಳು ಸಾವು
ಇನ್ನೂ ಪಶುಸಂಗೋಪನೆ ಹಾಗೂ ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್, ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಆ ಹಿನ್ನಲೆ ರೇಷ್ಮೆ ಕೃಷಿಯ ಗತವೈಭವವನ್ನು ಮತ್ತೆ ಸೃಷ್ಟಿಸುವ ಸಲುವಾಗಿ ರೇಷ್ಮೆ ಕೃಷಿಗೆ ಸರ್ಕಾರದಿಂದ ಕೊಡಬೇಕಾದ ಸವಲತ್ತುಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ನಡೆಸಿದ್ದಾರೆ.
ಕೊಳ್ಳೇಗಾಲದ ಮುಡಿಗುಂಡಂ ಬಳಿ ಈಗಾಗಲೇ ರೇಷ್ಮೆ ಮಾರುಕಟ್ಟೆ ಕೂಡ ಇದೆ. ಅಲ್ಲದೇ ಜಿಲ್ಲೆಯ ಬಹುತೇಕ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೂ ಕೂಡ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಲು ಮುಂದಾಗಿದೆ. ಹೀಗಾಗಿ ಸಚಿವ ಕೆ. ವೆಂಕಟೇಶ್, ರೇಷ್ಮೆ ಕೃಷಿಯ ಹೊಸ ಆವಿಷ್ಕಾರಗಳ ಬಗ್ಗೆ ಚಿಂತಿಸಲು ಕೂಡ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಇದನ್ನೂ ಓದಿ: ಭಾರತೀಯ ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಪೂಜೆ ವೇಳೆ ಬಲಭಾಗದಿಂದ ಹೂ ನೀಡಿದ ದೇವರು
ಒಟ್ಟಿನಲ್ಲಿ ಒಂದು ಕಾಲದಲ್ಲಿ ರೇಷ್ಮೆ ಬೇಸಾಯಕ್ಕೆ ಚಾಮರಾಜನಗರ ಜಿಲ್ಲೆ ಹೆಸರುವಾಸಿಯಾಗಿತ್ತು. ಆದರೆ ಕಾಲಕ್ರಮೇಣ ತನ್ನ ಗತವೈಭವವನ್ನು ಕಳೆದುಕೊಂಡಿತ್ತು. ಇದೀಗ ಮತ್ತೆ ರೇಷ್ಮೆ ಬೆಳೆ ಬೆಳೆಯಲು ಸಾಲ ಸೌಲಭ್ಯದ ಜೊತೆಗೆ ಅಗತ್ಯ ಮಾರ್ಗದರ್ಶನ ನೀಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:41 pm, Sat, 17 May 25







