ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್‌: ಗ್ರಾಮ ತೊರೆದ ನೂರಾರು ಕುಟುಂಬಗಳು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 10, 2025 | 9:07 PM

ಚಾಮರಾಜನಗರ ಜಿಲ್ಲೆಯಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅತಿರೇಕದ ಕಿರುಕುಳದಿಂದ ನೂರಾರು ಕುಟುಂಬಗಳು ತಮ್ಮ ಗ್ರಾಮಗಳನ್ನು ತೊರೆದಿವೆ. ಸುಲಭ ಸಾಲದ ಆಮಿಷದಿಂದ ಬಡವರು ಸಾಲದ ಬಲೆಗೆ ಬಿದ್ದು, ಅತಿಯಾದ ಬಡ್ಡಿ ಮತ್ತು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಜಿಲ್ಲಾಧಿಕಾರಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್‌: ಗ್ರಾಮ ತೊರೆದ ನೂರಾರು ಕುಟುಂಬಗಳು
ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್‌: ಗ್ರಾಮ ತೊರೆದ ನೂರಾರು ಕುಟುಂಬಗಳು
Follow us on

ಚಾಮರಾಜನಗರ, ಜನವರಿ 10: ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ (Microfinance) ಕಂಪನಿಗಳ ಕಿರುಕುಳ ಮಿತಿ ಮೀರಿದೆ. ಇವರ ಕಿರುಕುಳ ತಾಳಲಾರದೆ ಜಿಲ್ಲೆಯ ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಗ್ರಾಮ ತೊರೆದಿವೆ. ಈ ಫೈನಾನ್ಸ್​ಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆ ಮೂಲಕ ಗಡಿ ನಾಡು ಚಾಮರಾಜನಗರದಲ್ಲಿ ಎಗ್ಗಿಲ್ಲದೆ ಕರಾಳ ದಂಧೆ ಸಾಗಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಹೌದು.. ಕೆಲವು ಮೈಕ್ರೋ ಫೈನಾನ್ಸ್ ಕಂಪನಿಗಳು ಬಡ ಜನರ ರಕ್ತ ಹೀರುತ್ತಿವೆ. ಯಾವುದೇ ಭದ್ರತೆ ಇಲ್ಲದೆ ಕೇವಲ ಒಂದು ಆಧಾರ್ ಕಾರ್ಡ್ ಜೆರಾಕ್ಸ್ ಪಡೆದು ಸುಲಭವಾಗಿ ಸಾಲ ನೀಡುತ್ತಿವೆ. ಸುಲಭವಾಗಿ ಸಾಲ ಸಿಗುತ್ತೆ ಎಂಬ ಕಾರಣಕ್ಕೆ ಕೂಲಿ ಕಾರ್ಮಿಕರು, ಮಹಿಳೆಯರು ಇವರ ಸಾಲದ ಜಾಲಕ್ಕೆ ಬಿದ್ದು ದೈನಂದಿನ ವ್ಯವಹಾರಗಳಿಗೆ ಸಾಲ ಪಡೆಯುತ್ತಿದ್ದಾರೆ. ಬಡ್ಡಿಯೊಂದಿಗೆ ವಾರದ ಕಂತು, ತಿಂಗಳ ಕಂತು ಹೀಗೆ ಸಾಲ ತೀರಿಸುತ್ತಾರೆ. ಆದರೆ ಸಾಲ ಮರುಪಾವತಿ ಮಾಡುವುದು ಒಂದು ದಿನ ತಡವಾದರೂ ಹೊತ್ತಲ್ಲದ ಹೊತ್ತಿನಲ್ಲಿ ಕಿರುಕುಳ ನೀಡುತ್ತಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ 24 ಸರ್ಕಾರಿ ಶಾಲೆಗಳಿಗೆ ಬಿತ್ತು ಬೀಗ!

ಬಡ್ಡಿಗೆ ಬಡ್ಡಿ ಸೇರಿಸಿ ಸಾಲ ಜಾಸ್ತಿಯಾಗಿ ಇವರ ಕಿರುಕುಳ ತಡೆಯಲಾರದೆ ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಗ್ರಾಮ ತೊರೆದಿವೆ. ಸಾಲ ತೀರಿಸಲಾಗದೆ ಮನೆಗೆ ಬೀಗ ಹಾಕಿ ಊರು ಖಾಲಿ ತಲೆಮರೆಸಿಕೊಂಡಿವೆ. ಹಲವೆಡೆ ಮಕ್ಕಳನ್ನು ಶಾಲೆ ಬಿಡಿಸಿ ತಮ್ಮ ಜೊತೆ ‌ಕರೆದೊಯ್ದಿವೆ ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕಾಗುತ್ತಿದೆ.

ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರದ ನಿವಾಸಿ ಶ್ರೀಕಂಠ ಎಂಬುವವರು ಖಾಸಗಿ ಫೈನಾನ್ಸ್ ಬಳಿ 3 ಲಕ್ಷ ರೂ. ಸಾಲ ಪಡೆದಿದ್ದರು. ಬಡ್ಡಿಗೆ ಬಡ್ಡಿ ಬೆಳೆದು ಸಾಲ 6 ಲಕ್ಷಕ್ಕೆ ಏರಿದೆ. ಇದರಿಂದ ಬೆಸತ್ತು ಈಗ ಸಾಲ ತೀರಿಸಲಾಗದೆ ಮಕ್ಕಳನ್ನ ತನ್ನ ತಮ್ಮನ ಮನೆಯಲ್ಲಿ ಬಿಟ್ಟು ಈಗ ಗ್ರಾಮವನ್ನೆ ತೊರೆದಿದ್ದಾರೆ. ರಿಕವರಿಗೆ ಬರುವವರು ಬಾಯಿಗೆ ಬಂದಂತೆ ಬೈಯುತ್ತಾರಂತೆ. ರಾತ್ರಿ ವೇಳೆ ಹೊತ್ತಿಲ್ಲದ ಹೊತ್ತಿನಲ್ಲಿ ಬಂದು ಅಶ್ಲೀಲವಾಗಿ ನಿಂದಿಸುತ್ತಾರಂತೆ.

ನನ್ನ ಕಿಡ್ನಿ ಮಾರುವುದಕ್ಕೆ ಅನುಮತಿ ಕೊಡಿಸಿ ಸರ್​

ಹಾಗಾಗಿ ಮೋಹನ್​ ಹೆಗ್ಗವಾಡಿಪುರ ಎಂಬ ಬಾಲಕ ನಿಮ್ಮ ಕೈ ಮುಗಿದು ಕೇಳಿಕೊಳ್ತಿನಿ ನನ್ನ ಕಿಡ್ನಿ ಮಾರುವುದಕ್ಕೆ ಪರ್ಮಿಷನ್ ಕೊಡಿಸಿ ಸರ್. ಸರ್ಕಾರ ಪರ್ಮಿಷನ್ ಕೊಟ್ಟರೆ ನನ್ನ ಕಿಡ್ನಿ ಮಾರಿ ಅಪ್ಪ ಅಮ್ಮನ ಸಾಲ ತೀರಿಸುತ್ತೇನೆ. ಮೈಕ್ರೋ ಫೈನಾನ್ಸ್​ನವರ ಕಾಟ ತಡೆಯುವುದಕ್ಕೆ ಆಗುತ್ತಿಲ್ಲ ಅಂತ ಕಣ್ಣೀರು ಹಾಕಿದ್ದಾನೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಶಿಲ್ಪಾನಾಗ್, ಯಾರೂ ಊರು ಖಾಲಿ ಮಾಡಬೇಡಿ. ನಾವು ನಿಮ್ಮ ಜೊತೆ ಇದ್ದೇವೆ. ಕಿರುಕುಳ ನೀಡಿದರೆ ನಮ್ಮ ಗಮನಕ್ಕೆ ತನ್ನಿ ಸಮಸ್ಯೆ ಪರಿಹರಿಸುತ್ತೇವೆ ಎಂದು ಅಭಯ ನೀಡಿದ್ದಾರೆ.

ಇದನ್ನೂ ಓದಿ: ಅಯ್ಯೋ ವಿಧಿಯೇ! ಶಿಕ್ಷಕಿಗೆ ನೋಟ್ಸ್ ತೋರಿಸುವಾಗ ಕುಸಿದುಬಿದ್ದು 3ನೇ ಕ್ಲಾಸ್ ವಿದ್ಯಾರ್ಥಿನಿ ಸಾವು

ಒಟ್ಟಾರೆ ಇದು ಚಾಮರಾಜನಗರ ಜಿಲ್ಲೆಯೊಂದರ ಕಥೆಯಲ್ಲ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಇನ್ನಿಲ್ಲದಂತೆ ಕಿತ್ತು ತಿನ್ನುತ್ತಿವೆ. ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಈ ಕಿರುಹಣಕಾಸು ಸಂಸ್ಥೆಗಳ ಕಾರ್ಯನಿರ್ವಹಣೆಗೆ ಕಡಿವಾಣ ಹಾಕುವ ನೀತಿ ರೂಪಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.