ಉಘೇ ಉಘೇ ಮಾದಪ್ಪ, ಚಾಮರಾಜನಗರದ ಮಲೆ ಮಹದೆಶ್ವರ ಜಾತ್ರೆಗೆ ಹರಿದು ಬಂದ ಜನಸಾಗರ
ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆಮಹದೆಶ್ವರ ಬೆಟ್ಟದಲ್ಲಿ ನೆಲಸಿರುವ ಮಲೆಮಹದಪ್ಪನ ದೀಪಾವಳಿ ಉತ್ಸವ ಅದ್ಧೂರಿಯಾಗಿ ಜರುಗಿತು
ಎಲ್ಲಿ ನೋಡಿದರಲ್ಲಿ ಜನಸಾಗರ, ಉಘೇ ಉಘೇ ಮಾದಪ್ಪ ಎನ್ನುವ ಜಯಕಾರ, ಕುಣಿದು ಕುಪ್ಪಳಿಸಿ ಭಕ್ತಿಯ ಪರಾಕಾಷ್ಟೆ ಮೆರದ ಮಹಿಳೆಯರು, ಇದೆಲ್ಲ ಕಂಡು ಬಂದಿದ್ದು ಮಲೆ ಮಹದೇಶ್ವರನ ದೀಪಾವಳಿ ರಥೋತ್ಸವದಲ್ಲಿ. ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆಮಹದೆಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳ. ಬೆಟ್ಟದಲ್ಲಿ ನೆಲಸಿರುವ ಮಲೆಮಹದಪ್ಪ ಲಕ್ಷಾಂತರ ಭಕ್ತರ ಆರಾಧ್ಯ ದೈವ. ಈ ಬೆಟ್ಟದಲ್ಲಿ ವರ್ಷಕ್ಕೆ ಒಂದಲ್ಲ ಎರಡಲ್ಲ ಮೂರು ಬಾರಿ ಅಂದರೆ ಶಿವರಾತ್ರಿ ,ಯುಗಾದಿ ಹಾಗು ದೀಪಾವಾಳಿಯಂದು ರಥೋತ್ಸವ ನಡೆಯುತ್ತದೆ.
ಇದೇ ರೀತಿ ಈ ಬಾರಿಯು ಬೆಟ್ಟದಲ್ಲಿಂದು ಮಾದಪ್ಪನ ದೀಪಾವಾಳಿ ರಥೋತ್ಸವ ಲಕ್ಷಾಂತರ ಭಕ್ತರ ಜಯಘೋಷಗಳ ನಡುವೆ ಸಂಭ್ರಮ ಸಡಗರಗಳೊಂದಿಗೆ ನಡೆಯಿತು. ಉಘೇ ಉಘೇ ಮಾದಪ್ಪ ಎನ್ನುತ್ತಾ ಅಸಂಖ್ಯಾತ ಭಕ್ತರು ಮಾದಪ್ಪನ ತೇರು ಎಳೆದು ತಮ್ಮ ಭಕ್ತಿ ಸಮರ್ಪಿಸಿದರು.
ಮಹಿಳೆಯರಂತು ಕುಣಿದು ಕುಪ್ಪಳಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು, ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪಗಳು ಮಾದಪ್ಪನ ರಥದೊಂದಿಗೆ ಸಾಗಿ ರಥೋತ್ಸವಕ್ಕೆ ಮೆರಗು ತಂದವು. ಮಾದಪ್ಪನ ಭಕ್ತರು ಉರುಳುಸೇವೆ, ಪಂಜಿನಸೇವೆ, ಮುಡಿಸೇವೆ ಮೂಲಕ ಹರಕೆ ತೀರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಜಾತ್ರೆಗೆ ರಾಜ್ಯದ ಮೂಲೆಮೂಲೆಗಳಿಂದ ಭಕ್ತ ಸಾಗರ ಹರಿದುಬಂದಿತ್ತು. ಕಳೆದ ಮೂರು ದಿನಗಳಿಂದ ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತರಿಗೆ ವಿಶೇಷ ಅನ್ನದಾಸೋಹ ಏಪರ್ಡಿಸಲಾಗಿತ್ತು. ಕಳೆದ ಮೂರು ದಿನಗಳಿಂದ ನಡೆದ ಜಾತ್ರೆಯಲ್ಲಿ ಮೂರಲಕ್ಷಕ್ಕು ಅಧಿಕ ಲಾಡು ಪ್ರಸಾದ ಮಾರಾಟವಾಗಿದೆ.
ಮಾದಪ್ಪನ ಸನ್ನಿದಿಯಲ್ಲಿ ದೀಪಾವಳಿಯ ಮೊದಲನೆ ದಿನ ಎಣ್ಣೆಮಜ್ಜನ ಸೇವೆ ನಡೆದರೆ, ಎರಡನೇ ದಿನ ಹಾಲರುವೆ ಉತ್ಸವ ನಡೆದಿತ್ತು. ಮೂರನೇ ದಿನವಾದ ಇಂದು ರಥೋತ್ಸವ ನಡೆಯುವುದರೊಂದಿಗೆ ಮೂರು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಸಂಪನ್ನಗೊಂಡಿದೆ.
ವರದಿ- ದಿಲೀಪ್ ಚೌಡಹಳ್ಳಿ ಟಿವಿ9 ಚಾಮರಾಜನಗರ
Published On - 6:53 pm, Wed, 26 October 22