ತಮಿಳುನಾಡಿಗೆ ಒಂದೇ ಒಂದು ಹನಿ ನೀರು ಬಿಡುತ್ತಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
CM Siddaramaiah in Chamarajanagara: ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಆರೋಪಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಪ್ರತಿಪಕ್ಷಗಳ ಆರೋಪ ಹಸಿ ಸುಳ್ಳು ಎಂದಿರುವ ಅವರು, ಇಂಥ ಪರಿಸ್ಥಿತಿಯಲ್ಲಿ ನೆರೆ ರಾಜ್ಯಕ್ಕೆ ನೀರು ಬಿಡುವುದು ಸಾಧ್ಯವೇ ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಬೆಂಗಳೂರು, ಮಾರ್ಚ್ 13: ಬೆಂಗಳೂರು ನಗರವು (Bengaluru) ತೀವ್ರ ನೀರಿನ ಬಿಕ್ಕಟ್ಟಿನಿಂದ (Water Crisis) ತತ್ತರಿಸಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗುತ್ತಿದೆ ಎಂಬ ಪ್ರತಿಪಕ್ಷ ಬಿಜೆಪಿ ಆರೋಪವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಂಗಳವಾರ ತಳ್ಳಿ ಹಾಕಿದ್ದಾರೆ. ಪ್ರತಿಪಕ್ಷಗಳ ಆರೋಪ ಸುಳ್ಳು ಎಂದಿರುವ ಸಿದ್ದರಾಮಯ್ಯ, ತಮಿಳುನಾಡಿಗೆ ಒಂದೇ ಒಂದು ಹನಿ ನೀರು ಬಿಡುತ್ತಿಲ್ಲ ಎಂದಿದ್ದಾರೆ. ಚಾಮರಾಜನಗರದಲ್ಲಿ (Chamarajanagara) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳ ಆರೋಪಗಳೆಲ್ಲ ಸುಳ್ಳು. ಈ ಪರಿಸ್ಥಿತಿಯಲ್ಲಿ ನೀರು ಹರಿಯಲು ಯಾರು ಬಿಡುತ್ತಾರೆ? ನಮ್ಮ ಬಳಕೆಗೆ ನೀರು ಉಳಿಸಿಕೊಳ್ಳದೆ ತಮಿಳುನಾಡಿಗೆ ಒಂದು ಹನಿ ನೀರು ಕೂಡ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ನೀರು ಬಿಡುವಂತೆ ತಮಿಳುನಾಡು ಕೇಳಿಲ್ಲ, ಕರ್ನಾಟಕಕ್ಕೆ ಯಾರೂ ನಿರ್ದೇಶನ ನೀಡಿಲ್ಲ ಎಂದು ಸಿಎಂ ಹೇಳಿದ್ದಾರೆ.
ಅವರು ಕೇಳದಿರುವಾಗ ನಾವೇಕೆ ಅವರಿಗೆ (ತಮಿಳುನಾಡಿಗೆ) ನೀರು ಕೊಡುತ್ತೇವೆ? ಅವರಿಗೆ ಕೊಡಲು ನಮ್ಮಲ್ಲಿ ನೀರು ಎಲ್ಲಿದೆ? ತಮಿಳುನಾಡು ಕೇಳಿದರೂ ಅಥವಾ ಕೇಂದ್ರ ಅಥವಾ ಬೇರೆಯವರು ನೀರು ಬಿಡುವಂತೆ ಸೂಚಿಸಿದರೂ ಅವರಿಗೆ ನೀರು ನೀಡುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಸೋಮವಾರ ಆರೋಪಿಸಿದ್ದರು. ರಾಜ್ಯ ಸರಕಾರ ಕೂಡಲೇ ನೆರೆ ರಾಜ್ಯಕ್ಕೆ ನೀರು ಬಿಡುವುದನ್ನು ನಿಲ್ಲಿಸಿ ಬೆಂಗಳೂರಿನ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದದರು. ಈ ಹಿನ್ನೆಲೆಯಲ್ಲಿ ಸಿಎಂ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ತೀವ್ರಗೊಂಡಿದ್ದು ಹಲವಾರು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಐಟಿ ಉದ್ಯೋಗಿಗಳು ನಗರ ತೊರೆದು ಊರುಗಳಿಗೆ ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕೂಡ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ಇದನ್ನೂ ಓದಿ: ಈ ಹಿಂದೆ 12 ಬಾರಿ ಬಂದಿದ್ದೆ, ಈಗ ಇದು 2ನೇ ಸಲ: ಚಾಮರಾಜನಗರಕ್ಕೆ ಬಂದಷ್ಟು ನನ್ನ ಖುರ್ಚಿ ಭದ್ರವಾಗುತ್ತೆ ಎಂದ ಸಿಎಂ
ಚಾಮರಾಜನಗರದ ಡಾ.ಅಂಬೇಡ್ಕರ್ ಮೈದಾನದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಅವರು ತಮಿಳುನಾಡಿಗೆ ನೀರು ಬಿಡುತ್ತಿಲ್ಲ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ