AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ ಕ್ಷೇತ್ರದ ಟಿಕೆಟ್ ಫೈನಲ್: ಮತ್ತೋರ್ವ ಸಚಿವರ ಪುತ್ರನಿಗೆ ಕಾಂಗ್ರೆಸ್ ಮಣೆ

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ರಂಗೇರಿದೆ. ಈಗಾಗಲೇ ಕಾಂಗ್ರೆಸ್ 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ನಾಲ್ಕು ಕ್ಷೇತ್ರಗಳ ಟಿಕೆಟ್​ ಬಾಕಿ ಉಳಿಸಿಕೊಂಡಿದೆ. ಈ ನಾಲ್ಕು ಕ್ಷೇತ್ರಗಳಲ್ಲಿ ಇದೀಗ ಚಾಮರಾಜನಗರ ಎಸ್​ಸಿ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.

ಚಾಮರಾಜನಗರ ಕ್ಷೇತ್ರದ ಟಿಕೆಟ್ ಫೈನಲ್: ಮತ್ತೋರ್ವ ಸಚಿವರ ಪುತ್ರನಿಗೆ ಕಾಂಗ್ರೆಸ್ ಮಣೆ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Mar 27, 2024 | 5:28 PM

Share

ಬೆಂಗಳೂರು/ಮೈಸೂರು, (ಮಾರ್ಚ್ 27): ಚಾಮರಾಜನಗರ (Chamarajanagar) ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಸಚಿವ ಹೆಚ್.ಸಿ ಮಹದೇವಪ್ಪ (Dr HC Mahadevappa) ಅವರ ಪುತ್ರ ಸುನೀಲ್ ಬೋಸ್ (Sunil Bose) ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ (Mysuru Congress Committee) ಇಂದು (ಮಾರ್ಚ್ 27) ಬಹಿರಂಗಪಡಿಸಿದ್ದು, ಎಐಸಿಸಿಯಿಂದ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ನಾಳೆ (ಮಾರ್ಚ್ 28) ಸಂಜೆ ವೇಳೆಗೆ ಪಟ್ಟಿ ಹೊರಬೀಳುವ ಸಾಧ್ಯತೆಗಳಿವೆ.

ಈಗಾಗಲೇ ರಾಜ್ಯದ ನಾಲ್ವರು ಸಚಿವರ ಮಕ್ಕಳಿಗೆ ಲೋಕಸಭೆ ಟಿಕೆಟ್ ನೀಡಲಾಗಿದೆ. ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾಗೆ ಚಿಕ್ಕೋಡಿ ಕ್ಷೇತ್ರ, ಬೀದರ್ ಟಿಕೆಟ್ ಈಶ್ವರ್ ಖಂಡ್ರೆ ಮಗನಿಗೆ ನೀಡಲಾಗಿದೆ. ಇನ್ನು ಬೆಳಗಾವಿ ಕ್ಷೇತ್ರದ ಟಿಕೆಟ್ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರನಿಗೆ ಕೊಡಲಾಗಿದೆ. ಹಾಗೇ ಶಿವಾನಂದ ಪಾಟೀಲ್ ಪುತ್ರಿ ಸಯುಕ್ತ ಪಾಟೀಲ್​ಗೆ ಬಾಗಲಕೋಟೆ ಟಿಕೆಟ್ ನೀಡಲಾಗಿದೆ. ಇದೀಗ ಈ ಪಟ್ಟಿಗೆ ಸಚಿವ ಮಹಾದೇವಪ್ಪ ಸೇರಿಕೊಂಡಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಒಟ್ಟು ಐವರು ಸಚಿವರ ಮಕ್ಕಳಿಗೆ ಈ ಬಾರಿ ಲೋಕಸಭಾ ಟಿಕೆಟ್ ನೀಡಿದಂತಾಗಿದೆ.

ಇದನ್ನೂ ಓದಿ: ಕೋಲಾರ ಕಾಂಗ್ರೆಸ್​ನಲ್ಲಿ ಕೋಲಾಹಲ: ಟಿಕೆಟ್‌ ಕಗ್ಗಂಟು ಬಿಡಿಸಲು ಅಖಾಡಕ್ಕಿಳಿದ ಸಿಎಂ, ಡಿಸಿಎಂ!

ಮಹಾದೇವಪ್ಪನವರನ್ನೇ ಕಣಕ್ಕಿಳಿಸಲು ಪ್ರಯತ್ನಿಸಿದ್ದ ಕೈ

ಸಚಿವ ಡಾ ಹೆಚ್​ಸಿ ಮಹಾದೇವಪ್ಪ ಅವರನ್ನೇ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಹೇಳಿತ್ತು. ಅಲ್ಲದೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಹ ಮನವೊಲಿಸುವ ಕಸರತ್ತು ನಡೆಸಿದ್ದರು. ಆದ್ರೆ, ಮಹಾದೇವಪ್ಪ ಯಾವುದೇ ಕಾರಣಕ್ಕೂ ನಾನು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಬೇಕಿದ್ದರೆ ನನ್ನ ಪುತ್ರ ಸುನೀಲ್ ಬೋಸ್​ಗೆ ಟಿಕೆಟ್ ಕೊಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೈಕಮಾಂಡ್​ಗೆ ಹೇಳಿದ್ದರು. ಇದರ ಮಧ್ಯೆ ತಮಗೆ ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕೆಂದು ನಂಜುಂಡಸ್ವಾಮಿ ಪಟ್ಟು ಹಿಡಿದಿದ್ದರು. ಆದ್ರೆ, ಅಂತಿಮವಾಗಿ ಕಾಂಗ್ರೆಸ್​, ಮಹದೇವಪ್ಪ ಪುತ್ರ ಸುನೀಲ್ ಬೋಸ್​ಗೆ ಮಣೆ ಹಾಕಿದೆ.

ಮಹಾದೇವಪ್ಪ ಫುಲ್ ಆ್ಯಕ್ಟೀವ್

ಪುತ್ರನಿಗೆ ಟಿಕೆಟ್ ಫೈನಲ್​ ಆದ ಬೆನ್ನಲ್ಲೇ ಸಚಿವ ಮಹಾದೇವಪ್ಪ ಫುಲ್ ಆಕ್ಟೀವ್ ಆಗಿದ್ದು, ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ. ಯಳಂದೂರು, ಕೊಳ್ಳೆಗಾಲ ಭಾಗದಲ್ಲಿ ರೌಂಡ್ಸ್ ಮೇಲೆ ರೌಂಡ್ಸ್ ಹಾಕುತ್ತಿದ್ದಾರೆ. ಅಲ್ಲದೇ ಅಸಮಾಧಾನಿತ ರೆಬೆಲ್ ನಾಯಕರ ಮನೆಗಳಿಗೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನಿ ನಡೆಸಿದ್ದಾರೆ. ಅದರಂತೆ ಇಂದು ಮಹಾದೇವಪ್ಪ ಅವರು ನಂಜುಂಡಸ್ವಾಮಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಇನ್ನು  ಚಾಮರಾಜನಗರ ಕಣದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಬಾಲರಾಜ್​ ಕಣದಲ್ಲಿದ್ದು, ಭಾರೀ ಪೈಪೋಟಿ ಏರ್ಪಟ್ಟಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀನಿವಾಸ್ ಪ್ರಸಾದ್ ಗೆಲುವು ಸಾಧಿಸಿದ್ದರು. ಈ ಬಾರಿ ಫಲಿತಾಂಶ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ