ಮಹದೇಶ್ವರ ಬೆಟ್ಟದಲ್ಲಿ ಮದ್ಯಪಾನ; ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಮಾಹಿತಿ ನೀಡಿದ ಅಬಕಾರಿ ಡಿಸಿ, ಪ್ರಕರಣ ದಾಖಲಿಸಿದ್ದೇವೆ ಎಂದು ಉತ್ತರಿಸಿದರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ, ಪ್ರಕರಣ ದಾಖಲಿಸಿದರೆ ಏನು ಪ್ರಯೋಜನವಾಗುತ್ತದೆ? ಎಲ್ಲದಕ್ಕು ಕಡಿವಾಣ ಹಾಕಬೇಕು, ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಚಾಮರಾಜನಗರ, ಸೆಪ್ಟೆಂಬರ್ 23: ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ಯಾರೂ ಮದ್ಯಪಾನ ಮಾಡಬಾರದು. ಆದರೆ, ಅಲ್ಲಿ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲಿ ಯಾವುದೇ ಮದ್ಯದಂಗಡಿ ಇಲ್ಲ. ಆದರೂ ಅಲ್ಲಿ ಮದ್ಯ ಹೇಗೆ ಸಿಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಚಾಮರಾಜನಗರದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಸಿದ್ದರಾಮಯ್ಯ, ಇನ್ನು ಇಂತಹ ಪ್ರಕರಣಗಳು ಕಂಡು ಬಂದರೆ ಪೊಲೀಸರು ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿ ಕುಡಿಯಲು ಯಾರಿಗೂ ಅವಕಾಶ ಕೊಡಬಾರದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಾಹಿತಿ ನೀಡಿದ ಅಬಕಾರಿ ಡಿಸಿ, ಪ್ರಕರಣ ದಾಖಲಿಸಿದ್ದೇವೆ ಎಂದು ಉತ್ತರಿಸಿದರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ, ಪ್ರಕರಣ ದಾಖಲಿಸಿದರೆ ಏನು ಪ್ರಯೋಜನವಾಗುತ್ತದೆ? ಎಲ್ಲದಕ್ಕು ಕಡಿವಾಣ ಹಾಕಬೇಕು, ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಶಿಕ್ಷೆ ಪ್ರಮಾಣ ಶೂನ್ಯ; ಸಿದ್ದರಾಮಯ್ಯ ಅಚ್ಚರಿ
ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸ್‌ನಲ್ಲಿ ಶಿಕ್ಷೆ ಪ್ರಮಾಣ ಶೂನ್ಯ ಇರುವ ಬಗ್ಗೆ ಕೆಡಿಪಿ ಸಭೆಯಲ್ಲಿ ಮಾಹಿತಿ ಕೇಳಿ ಸಿಎಂ ಸಿದ್ದರಾಮಯ್ಯ ಅಚ್ಚರಿ ವ್ಯಕ್ತಪಡಿಸಿದರು. ಎಸ್ಪಿ ಪದ್ಮಿನಿ ಸಾಹು ಉದ್ದೇಶಿಸಿ ಮಾತನಾಡಿದ ಅವರು, ನೀನು ಹೊಸಬಳು ಇರಬಹುದು. ಸುಮ್ಮನೆ ವಾದ ಮಾಡಬೇಡ ಎಂದು ಸೂಚನೆ ನೀಡಿದರು.
ಪ್ರತಿ ವರ್ಷ 20- 25 ಕೇಸ್ ದಾಖಲಾಗುತ್ತಿವೆ. ಮೂರು ವರ್ಷಗಳಿಂದ ಒಂದೇ ಒಂದು ಕೇಸ್‌ನಲ್ಲಿ ಶಿಕ್ಷೆ ಆಗಿಲ್ಲ. 5 ಕೇಸ್ ವಜಾ ಆಗಿವೆ ಎಂದು ಎಸ್ಪಿ ವಿವರಿಸಿದರು. ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಅಲ್ಲಮ್ಮ, ಶಿಕ್ಷೆ ಆಗಲ್ಲ ಅಂದ್ರೆ ಭಯ ಹೇಗೆ ಬರುತ್ತೆ ? ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದರು. ಜತೆಗೆ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯಗೆ ಸೂಚನೆ ನೀಡಿದರು.
ಇದನ್ನೂ ಓದಿ: ಕೃಷಿಗೆ ನಿಗದಿತ ಪ್ರಮಾಣದ ನೀರು ಬಿಟ್ಟಿಲ್ಲ; ಸಿಎಂ ಸಿದ್ದರಾಮಯ್ಯ ಎದುರು ಸತ್ಯ ಒಪ್ಪಿದ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್
ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದ ಆಕ್ಸಿಜನ್ ದುರಂತ
ಕೋವಿಡ್ ಸಂಕ್ರಾಮಿಕದ ಸಂದರ್ಭದಲ್ಲಿ ಆಕ್ಸಿಜನ್ ದುರಂತದಿಂದ ಮೃತಪಟ್ಟವರ ಕುಟುಂಬದವರಿಗೆ ಖಾಯಂ ಉದ್ಯೋಗಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೆಡಿಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಕ್ಸಿಜನ್ ದುರಂತದಲ್ಲಿ 32 ಕೊರೊನಾ ರೋಗಿಗಳು ಮೃತಪಟ್ಟಿದ್ದರು. ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಲು ಸೂಚಿಸಲಾಗಿತ್ತು. ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡುವುದು ಬೇಡ, ಖಾಯಂ ಉದ್ಯೋಗ ನೀಡೋಣ ಎಂದು ಪ್ರಯತ್ನ ಮಾಡುತ್ತಿದ್ದೇವೆ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ