
ಚಾಮನರಾಹನಗರ, (ಜೂನ್ 27): ಮಲೆ ಮಹದೇಶ್ವರ ವನ್ಯಧಾಮದಲ್ಲಿ (Male mahadeshwara hills forest) ಅಹಜವಾಗಿ ಸಾವನ್ನಪ್ಪಿರುವ 5 ಹುಲಿಗಳ (five tigers) ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಎನ್ ಟಿ ಸಿ ನಿಯಮಾನುಸಾರ 5 ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಿದ ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಿದ್ದಾರೆ. 1 ತಾಯಿ ಹುಲಿ ಇನ್ನುಳಿದ ನಾಲ್ಕು ಮರಿಗಳನ್ನ ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಗಿದ್ದು, ಇನ್ನು ಹುಲಿಗಳ ಪಕ್ಕದಲ್ಲೇ ಸತ್ತು ಬಿದ್ದಿದ್ದ ಹಸುವನ್ನು ಸಹ ಪ್ರತ್ಯೇಕವಾಗಿ ಅಂತ್ಯಕ್ರಿಯೆ ಮಾಡಲಾಗಿದೆ. ಇನ್ನು ಅಂತ್ಯಕ್ರಿಯೆಗೂ ಮುನ್ನ ಹುಲಿಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಈ ವೇಳೆ ಐದು ಹುಲಿಗಳು ಸಾವನ್ನಪ್ಪಿರುವುದಕ್ಕೆ ವಿಷಪ್ರಾಶಾನವೇ ಕಾರಣ ಎಂಬುದು ಧೃಡಪಟ್ಟಿದೆ.
ಮಲೆ ಮಹದೇಶ್ವರ ವನ್ಯಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ಸಾವನ್ನಪ್ಪಿರುವುದಕ್ಕೆ ವಿಷಪ್ರಾಶಾನವೇ ಕಾರಣ ಎಂಬುದು ಧೃಡಪಟ್ಟಿದೆ. ಸ್ವತಃ ಅರಣ್ಯ ಸಚಿವರೇ ಸ್ಥಳಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ್ದು, ವಿಷ ಪ್ರಾಶನದ ಬಗ್ಗೆ ಖಚಿತ ಪಡಿಸಿದ್ದಾರೆ . ಸದ್ಯ ಹುಲಿಗೆ ವಿಷ ಹಾಕಿದವರ ಪತ್ತೆಗೆ ಶೋಧ ಮುಂದುವರಿದಿದ್ದು, ಈಗಾಗಲೇ ಕೆಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
8 ವರ್ಷದ ತಾಯಿ ಹುಲಿ ಹಾಗು ಅದರ 10 ತಿಂಗಳು ವಯಸ್ಸಿನ ನಾಲ್ಕು ಮರಿಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ವಿಷಪ್ರಾಶನದಿಂದಲೇ ಮೃತಪಟ್ಟಿರುವುದನ್ನು ಸಚಿವರು ಹಾಗು ಅಧಿಕಾರಿಗಳು ದೃಢಪಡಿಸಿದ್ದಾರೆ. ಹುಲಿಗಳ ಶವದ ಅನತಿ ದೂರದಲ್ಲೇ ಹಸುವೊಂದರ ಕಳೇಬರವೂ ಪತ್ತೆಯಾಗಿದ್ದು, ಈ ಹಸುವಿನ ಮಾಂಸಕ್ಕೆ ವಿಷ ಬೆರೆಸಿ ಹುಲಿಗಳನ್ನು ಹತ್ಯೆ ಮಾಡಿರುವುದು ಬಯಲಾಗಿದೆ. ವಿಷಮಿಶ್ರಿತ ಹಸುವಿನ ಮಾಂಸ ತಿಂದ ಹುಲಿಗಳು ಸಾವನ್ನಪ್ಪಿವೆ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇನ್ನಷ್ಟು ಖಚಿತತೆಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆ ವೇಳೆ ಹುಲಿ ಹಾಗೂ ಹಸುವಿನ ಅಂಗಾಂಶಗಳ ಮಾದರಿಗಳನ್ನು ಸಂಗ್ರಹಿಸಿದ್ದು ವಿಷ ಯಾವುದು ಹಾಗೂ ಎಷ್ಟು ಪ್ರಮಾಣ ಎಂಬುದನ್ನು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಹಸುವಿನ ಮೇಲೆ ವನ್ಯಪ್ರಾಣಿ ದಾಳಿ ನಡೆಸಿ ಕೊಂದಿದ್ದಕ್ಕೆ ಸೇಡು ತೀರಿಸಿಕೊಳ್ಳಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ನಡುವೆ ಅರಣ್ಯ ವೀಕ್ಷಕರಿಗೆ ಮೂರು ತಿಂಗಳಿಂದ ಸಂಬಳ ನೀಡುವುದು ತಡವಾದ ಕಾರಣಕ್ಕೆ ಅವರು ಸಮರ್ಪಕ ಗಸ್ತು ಮಾಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದು ಹಿರಿಯ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇಡೀ ಘಟನೆಯ ತನಿಖೆಗೆ ನಿಯೋಜಿಸಲಾಗಿರುವ ಉನ್ನತ ಮಟ್ಟದ ಅಧಿಕಾರಿಗಳು ಹಾಗು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ಆಯಾಮಗಳಲ್ಲು ತನಿಖೆ ಆರಂಭಿಸಿದೆ.