ಚಾಮರಾಜನಗರ: ಬಿಸಿಯೂಟ ಸೇವಿಸಿದ್ದ 60 ಮಕ್ಕಳ ಆರೋಗ್ಯದಲ್ಲಿ ಏರುಪೇರು
ಅಸ್ವಸ್ಥರಿಗೆ ಹನೂರು, ರಾಮಪುರ, ಕೌದಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಹಾರ ತಯಾರಿಕೆ, ಬಿಸಿಯೂಟಕ್ಕೆ ಬಳಸಿದ್ದ ಸಾಮಾಗ್ರಿ ಇವುಗಳಲ್ಲಿ ಸಮಸ್ಯೆ ಇದ್ದ ಬಗ್ಗೆ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಚಾಮರಾಜನಗರ: ಬಿಸಿಯೂಟ ಸೇವಿಸಿದ್ದ 60 ಮಕ್ಕಳ ಆರೋಗ್ಯದಲ್ಲಿ ಏರುಪೇರಾದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ವಡಕೆಹಳ್ಳ ಗ್ರಾಮದ ಉನ್ನತೀಕರಿಸಿದ ಶಾಲೆಯಲ್ಲಿ ನಡೆದಿದೆ. ಅಸ್ವಸ್ಥರಿಗೆ ಹನೂರು, ರಾಮಪುರ, ಕೌದಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಹಾರ ತಯಾರಿಕೆ, ಬಿಸಿಯೂಟಕ್ಕೆ ಬಳಸಿದ್ದ ಸಾಮಾಗ್ರಿ ಇವುಗಳಲ್ಲಿ ಸಮಸ್ಯೆ ಇದ್ದ ಬಗ್ಗೆ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಹನೂರು ತಾಲೂಕಿನ ವಡಕೆಹಳ್ಳ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಶಾಲೆಯಲ್ಲಿ ಮಧ್ಯಾಹ್ನ ಎಂದಿನಂತೆ ಬಿಸಿಯೂಟ ಸೇವಿಸಿದ್ದಾರೆ. ಬಳಿಕ ಮಕ್ಕಳು ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿರುವುದಾಗಿ ಮಕ್ಕಳು ಮತ್ತು ಪೋಷಕರು ತಿಳಿಸಿದ್ದಾರೆ. ಬಿಸಿಯೂಟದಲ್ಲಿ ಹಲ್ಲಿ ಬಿದ್ದಿತ್ತು ಎನ್ನಲಾಗಿದ್ದು, ಘಟನೆಗೆ ಪ್ರಮುಖ ಕಾರಣ ತಿಳಿದು ಬಂದಿಲ್ಲ.
ಅಸ್ವಸ್ಥಗೊಂಡ ಮಕ್ಕಳನ್ನು ಕೂಡಲೇ ಕೌದಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸ್ವಸ್ಥಗೊಂಡಿದ್ದರಿಂದ ರಾಮಾಪುರ ಹಾಗೂ ಹನೂರಿನ ಆಸ್ಪತ್ರೆಗಳಿಗೂ ಮಕ್ಕಳನ್ನು ದಾಖಲಿಸಲಾಗಿದೆ. ಕೆಲವು ಪೋಷಕರು ತಾವೇ ಸ್ವತಃ ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದರು. ಶಾಲೆಯಲ್ಲಿ 90ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು 70 ಕ್ಕೂ ಹೆಚ್ಚು ಮಕ್ಕಳು ಬಿಸಿಯೂಟ ಸೇವಿಸಿದ್ದರು. ಇವರೆಲ್ಲ ವಾಂತಿ ಮಾಡಿಕೊಂಡ ಬಳಿಕ ಇತರೆ ಮಕ್ಕಳು ಊಟ ಸೇವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ಸ್ವಾಮಿ ಭೇಟಿ ನೀಡಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಉಳಿದಂತೆ ತಹಸೀಲ್ದಾರ್ ನಾಗರಾಜು, ವೈದ್ಯ ಡಾ.ರಾಜೇಶ್ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ವಿಜಯನಗರ: ಎದೆ ನೋವಿನಿಂದ ವಿದ್ಯಾರ್ಥಿ ನರಳಾಟ; ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಸ್ಥಳೀಯರು ಹೂವಿನ ಹಡಗಲಿ ತಾಲೂಕಿನ ಕಾಂತೆಬೆನ್ನೂರು ಬಿಸಿಎಂ ಹಾಸ್ಟೆಲ್‍ನಲ್ಲಿ ದಿಢೀರ್ ಎದೆ ನೋವಿನಿಂದ ವಿದ್ಯಾರ್ಥಿ ನರಳಾಟ ಪಟ್ಟ ಘಟನೆ ನಡೆದಿದೆ. ವಿದ್ಯಾರ್ಥಿ ನೋವಿನಿಂದ ನರಳಾಡಿದ್ರು ಹಾಸ್ಟೆಲ್ ಸಿಬ್ಬಂದಿ ನೆರವಿಗೆ ಬಂದಿಲ್ಲ ಎಂದು ಹೇಳಲಾಗಿದೆ. ವಿದ್ಯಾರ್ಥಿಗಳ ಕಿರುಚಾಟ ಕೇಳುತ್ತಿದ್ದಂತೆ ಹಾಸ್ಟೆಲ್‌ಗೆ ಬಂದ ಸ್ಥಳೀಯರು, ಬೈಕ್ನಲ್ಲಿ ವಿದ್ಯಾರ್ಥಿಯನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ನಿನ್ನೆ ಸಂಜೆ ವೇಳೆಗೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಕೆಗೆ ಕೇಂದ್ರ ಸರ್ಕಾರ ಸಲಹೆ
ಇದನ್ನೂ ಓದಿ: ಹಾವೇರಿ: ಬಿಸಿ ಊಟದಲ್ಲಿ ಹಲ್ಲಿ; 81 ಮಕ್ಕಳು ಅಸ್ವಸ್ಥ, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ
Published On - 4:46 pm, Mon, 10 January 22