
ಚಾಮರಾಜನಗರ, (ಮೇ 02): ಚಾಮರಾಜನಗರ (Chamarajanagar) ಹಾಗೂ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಸ್ಫೋಟಿಸುವುದಾಗಿ (Bomb Threat) ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯನ್ನು (chamarajanagar DC Office) ಇಂದು (ಮೇ 02) ಮಧ್ಯಾಹ್ನ 3 ಗಂಟೆಯೊಳಗೆ ಸ್ಫೋಟವಾಗಲಿದೆ ಎಂದು ಅಪರಿಚಿತನಿಂದ ಬಂದ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಕಚೇರಿ ಒಳಭಾಗದಲ್ಲಿ ಹಾಗೂ 3 ಮಹಡಿಯ ಪ್ರತಿಯೊಂದು ಕಡೆಗಳಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಹೀಗಾಗಿ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ನೌಕರರಿಗೆ ರಜೆ ನೀಡಲಾಗಿದೆ.
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಸ್ಪೋಟಿಸುವುದಾಗಿ ಬೆದರಿಕೆ ಮೇಲ್ ಬಂದಿದ್ದರಿಂದ ನೌಕರರಲ್ಲಿ ಆತಂಕ ಮನೆ ಮಾಡಿತ್ತು. ಹೀಗಾಗಿ ಮಧ್ಯಾಹ್ನ 3 ಗಂಟೆಯವರೆಗೂ ಯಾರು ಜಿಲ್ಲಾಧಿಕಾರಿ ಕಚೇರಿಗೆ ಬಾರದಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಇದೀಗ ಜಿಲ್ಲಾಧಿಕಾರಿ ಕಚೇರಿ ನೌಕರರಿಗೆ ರಜೆ ಘೋಷಣೆ ಮಾಡಲಾಗಿದ್ದು, ಅಧಿಕಾರಿಗಳು, ಸಿಬ್ಬಂದಿಗೆ ರಜೆ ಕೊಟ್ಟು ಮನೆ ಕಳುಹಿಸಿದ್ದಾರೆ.
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಸ್ಫೋಟಿಸುವ ಬೆದರಿಕೆ ಇ-ಮೇಲ್ ಬಂದ ಬೆನ್ನಲ್ಲೆ ಖಾಕಿ ಪಡೆ ಫುಲ್ ಅಲರ್ಟ್ ಆಗಿದೆ. ಬಾಂಬ್ ನಿಷ್ಕ್ರೀಯ ದಳ ಜಿಲ್ಲಾಧಿಕಾರಿ ಕಚೇರಿಯ ಇಂಚಿಂಚು ಮೂಲೆಯನ್ನ ತಪಾಸಣೆ ನಡೆಸಿದೆ. ಕೂಡಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ಸಿಬ್ಬಂದಿಗಳನ್ನ ಪೊಲೀಸರು ಆಚೆ ಕಳಿಸಿದ್ದು, ಮಧ್ಯಾಹ್ನ 3 ಗಂಟೆಯವರೆಗೂ ಯಾರು ಜಿಲ್ಲಾಧಿಕಾರಿ ಕಚೇರಿಗೆ ಬಾರದಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಹೀಗಾಗಿ ಬ್ಯಾಗ್ ಬುಕ್ ಸಮೇತ ಅಧಿಕಾರಿಗಳು ಭಯ ಭೀತರಾಗಿ ಕಚೇರಿಯಿಂದ ಓಡೋಡಿ ಆಚೆ ಬಂದಿದ್ದಾರೆ.
ಇನ್ನು ಈ ಬಗ್ಗೆ ಚಾಮರಾಜನಗರ ಎಸ್ಪಿ ಡಾ ಕವಿತಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಡಿಸಿ ಕಚೇರಿಗೆ ಮೇಲ್ ಬಂದಿದೆ. ಮೂರು ಗಂಟೆಯೊಳಗೆ ಖಾಲಿ ಮಾಡಬೇಕು, ಮದ್ಯಾಹ್ನ 3 ಗಂಟೆಯೊಳಗೆ ಬಾಂಬ್ ಬ್ಲಾಸ್ಟ್ ಮಾಡುತ್ತೇವೆ ಎಂದು ಮೇಲ್ ನಲ್ಲಿ ತಿಳಿಸಲಾಗಿದೆ. ಹೀಗಾಗಿ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ನೌಕರರನ್ನು ಸಾರ್ವಜನಿಕರನ್ನು ಡಿಸಿ ಕಚೇರಿಯಿಂದ ಹೊರ ಕಳಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಿಂದ ಶೋಧ ಕಾರ್ಯ ನಡೆಸಲಾಗಿದೆ. ಎಲ್ಲ ಆಯಾಮಗಳಲ್ಲು ತನಿಖೆ ನಡೆಸಲಾಗುತ್ತಿದೆ. ಡಿಸಿ ಕಚೇರಿಯಷ್ಟೇ ಅಲ್ಲ ಸುತ್ತಮುತ್ತ ಪ್ರದೇಶದ ಕಟ್ಟಡಗಳಲ್ಲು ತಪಾಸಣೆ ನಡೆಸಲಾಗುವುದು ಎಂದರು.
ಬಾಂಬ್ ಬೆದರಿಕೆ ಕರೆ ಬಂದಿರುವುದನ್ನು ಚಾಮರಾಜನಗರ ಎಸ್‌ಪಿ ಕವಿತಾಗೆ ಜಿಲ್ಲಾಡಳಿತ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಚಾಮರಾಜನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇ-ಮೇಲ್ ಬಂದ ಅಕೌಂಟ್ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.